ಎಂಎಸ್‌ಪಿ ಕಾನೂನು ಖಾತರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಂಜಾಬ್ ರೈತರು ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೇವಾಲ್ ಅವರ ಅಮರಣಾಂತ ಉಪವಾಸ 50ನೇ ದಿನ ದಾಟಿದೆ. ಇದೀಗ ದಲ್ಲೇವಾಲ್ ಜೊತೆಗೆ ಸುಮಾರು 111 ರೈತರು ಅಮರಣಾಂತ ಉಪವಾಸ ನಡೆಸಲು ಮುಂದಾಗಿದ್ದಾರೆ.
ಬುಧವಾರದಿಂದ 111 ರೈತರು ಕಪ್ಪು ಬಟ್ಟೆ ಧರಿಸಿ ‘ಜಾಥಾ’ ಪ್ರಾರಂಭಿಸಲಿದ್ದಾರೆ. ಜೊತೆಗೆ ಉಪವಾಸವೂ ಮಾಡಲಿದ್ದಾರೆ. ಈಗಾಗಲೇ ದಲ್ಲೇವಾಲ್ 50 ದಿನಗಳಿಂದ ಉಪವಾಸ ಮಾಡುತ್ತಿದ್ದಾರೆ. ಆದರೆ ಈವರೆಗೆ ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸುವತ್ತ ಗಮನವೇ ಹರಿಸಿಲ್ಲ.
ಇದನ್ನು ಓದಿದ್ದೀರಾ? ಎಂಎಸ್‌ಪಿ | 43ನೇ ದಿನಕ್ಕೆ ಕಾಲಿಟ್ಟ ದಲ್ಲೇವಾಲ್ ಉಪವಾಸ; ರೈತರ ಬಲಿಗೆ ಕಾಯುತ್ತಿದೆಯೇ ಕೇಂದ್ರ?
ದಲ್ಲೇವಾಲ್ ಸ್ಥಿತಿ ಚಿಂತಾಜನಕವಾಗಿದೆ. ನೀರು ಕೂಡಾ ಗಂಟಲಿಂದ ಇಳಿಯುತ್ತಿಲ್ಲ. ಬಹು ಅಂಗಾಂಗ ವೈಫಲ್ಯ ಆಗುವ ಸಾಧ್ಯತೆಯಿದೆ ಎಂದು ರೈತರು ಹೇಳಿದ್ದಾರೆ. ದಲ್ಲೇವಾಲ್ ಯಾವುದೇ ಆಹಾರ ಸೇವಿಸುತ್ತಿಲ್ಲ. ನೀರು ಮಾತ್ರ ಕುಡಿಯುತ್ತಿದ್ದರು ಎಂದು ಈ ಹಿಂದೆಯೇ ರೈತರು ತಿಳಿಸಿದ್ದಾರೆ. ದಲ್ಲೇವಾಲ್ ಕೀಟೋನ್ ಮಟ್ಟ ಹೆಚ್ಚಾಗಿದ್ದು, ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ರೈತ ನಾಯಕ ಅಭಿಮನ್ಯು ಕೊಹರ್, “ಬುಧವಾರ ಮಧ್ಯಾಹ್ನ 2 ಗಂಟೆಯಿಂದ 111 ರೈತರ ಗುಂಪು ಅಮರಣಾಂತ ಉಪವಾಸ ನಡೆಸಲಿದ್ದಾರೆ. ಕಪ್ಪು ಬಟ್ಟೆ ಧರಿಸಿ, ಪೊಲೀಸರ ಬ್ಯಾರಿಕೇಡ್ ಬಳಿ ಶಾಂತಿಯುತವಾಗಿ ಕುಳಿತುಕೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.
ವಿಪಕ್ಷಗಳು ರೈತರ ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರೆ ಬಿಜೆಪಿ ಈ ಪ್ರತಿಭಟನೆ ಬಗ್ಗೆ ಸುಳ್ಳು, ತಪ್ಪು ಮಾಹಿತಿಯನ್ನು ಹರಡುತ್ತಿದೆ. ರೈತರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಧರ್ಮವೀರ ಗಾಂಧಿ, “ಓರ್ವ ವೈದ್ಯನಾಗಿ, ಜನಪ್ರತಿನಿಧಿಯಾಗಿ ಕೇಂದ್ರ ಸರ್ಕಾರದ ಈ ಸಂವೇದನಾಶೀಲತೆಯಿಲ್ಲದ ವರ್ತನೆಯಿಂದ ನಾನು ತೀವ್ರವಾಗಿ ಬೇಸರಗೊಂಡಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೃಷಿ ಬೆಳೆಗಳಿಗೆ ಎಂಎಸ್‌ಪಿ ಜಾರಿಗೆ ಆಗ್ರಹಿಸಿ ಬಿ.ಆರ್ ಪಾಟೀಲ್ ಸತ್ಯಾಗ್ರಹ
“ದಲ್ಲೇವಾಲ್ ನಿಧನ ಹೊಂದಲು ಕೇಂದ್ರ ಸರ್ಕಾರ ಕಾಯುತ್ತಿದ್ದೆಯೇ? ಮಾನವೀಯತೆ ಇರುವ ಯಾವುದೇ ಸರ್ಕಾರವಾದರೂ ಇಂತಹ ಸಂದರ್ಭದಲ್ಲಿ ಮಾತುಕತೆ ನಡೆಸಿ ಎಂಎಸ್‌ಪಿಗೆ ಕಾನೂನುಬದ್ಧ ಖಾತರಿ ಜಾರಿಗೆ ತರುವತ್ತ ಕ್ರಮಕೈಗೊಳ್ಳುತ್ತಿತ್ತು. ಇದು ಕೇವಲ ಪ್ರತಿಭಟನೆಯಲ್ಲ, ಇದು ಸರ್ಕಾರದ ಮೊಂಡುತನದ ಕರಾಳ ಪ್ರದರ್ಶನವಾಗಿದೆ” ಎಂದು ಸಂಸದರು ತಿಳಿಸಿದ್ದಾರೆ.
ರೈತರ ಸಾಲ ಮನ್ನಾ ಮಾಡುವುದು ಸರ್ಕಾರದ ಬೊಕ್ಕಸಕ್ಕೆ ಏಟು ಎಂದು ಹೇಳಿಕೊಳ್ಳುವ ಕೇಂದ್ರ ಸರ್ಕಾರವು ಕಳೆದ ಬಜೆಟ್‌ನಲ್ಲಿ ಕಾರ್ಪೋರೇಟ್ ಕಂಪನಿಗಳ ಬೂಟು ನೆಕ್ಕುವ ಕೆಲಸ ಮಾಡಿದೆ. ವಿದೇಶಿ ಕಂಪನಿಗಳ ಮೇಲೆ ಕಾರ್ಪೋರೇಟ್ ತೆರಿಗೆಯನ್ನು ಶೇಕಡ 40ರಿಂದ ಶೇಕಡ 35ಕ್ಕೆ ಇಳಿಸಿದೆ. ಇದರಿಂದ ಕೇಂದ್ರದ ಖಜಾನೆಗೆ ಆಗುವ ನಷ್ಟದ ಬಗ್ಗೆ ಮಾತನಾಡದ ಮೋದಿ ಸರ್ಕಾರಕ್ಕೆ ರೈತರ ಸಾಲ ಮನ್ನಾ, ಎಂಎಸ್‌ಪಿಗೆ ಆಗುವ ಖರ್ಚು ಅಗಾಧವಾಗಿ ಕಾಣುವುದು ವಿಪರ್ಯಾಸ. ಇಷ್ಟೊಂದು ರೈತರ ಪ್ರಾಣ ಅಪಾಯದಲ್ಲಿರುವ ಸಭೆ ಕರೆಯುವುದೇ ಕೇಂದ್ರ?
ರೈತರ ಬೆಳೆಗೆ ಬೆಲೆಯಿಲ್ಲ. ಇದೀಗ ರೈತರ ಜೀವಕ್ಕೂ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರವು ಈವರೆಗೆ ರೈತರ ಬೇಡಿಕೆ ಈಡೇರಿಸುವತ್ತ ಗಮನ ಹರಿಸಿಲ್ಲ. ಎಂಎಸ್‌ಪಿಗೆ ಕಾನೂನು ಖಾತರಿ ನೀಡುವುದು ಆರ್ಥಿಕವಾಗಿ ಹೊರೆಯಾಗಲಿದೆ ಎಂಬುದು ಮೋದಿ ಸರ್ಕಾರದ ವಾದ. ಆದರೆ ಅದಾನಿ-ಅಂಬಾನಿ ಸೇರಿದಂತೆ ಕಾರ್ಪೋರೇಟ್ ಕಂಪನಿಗಳಿಗೆ ಮಿತಿಯಿಲ್ಲದೆ ಸಾಲ, ಆದಾಯ ತೆರಿಗೆ ಮನ್ನಾ ಮಾಡಲಾಗುತ್ತಿದೆ. ಉಳ್ಳವರಿಗೆ ನೀಡುವ ಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟವನ್ನು ಭರಿಸುವವರಾರು?
