1986ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಅಪರಾಧಿ ಪ್ರಜ್ಞೆ ಕಾಡಿದ್ದು, ಆರೋಪಿಯು ಇದೀಗ ಪೊಲೀಸರ ಎದುರು ತಪ್ಪೊಪ್ಪಿಕೊಂಡು ಶರಣಾಗಿರುವ ಘಟನೆ ಕೇರಳದ ಕೋಝಿಕೋಡ್ನಲ್ಲಿ ನಡೆದಿದೆ.
ಶರಣಾಗಿರುವ ಆರೋಪಿಯನ್ನು ಮುಹಮ್ಮದ್ ಆಲಿ ಎಂದು ಹೇಳಲಾಗಿದೆ. 39 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಕೃತ್ಯದಲ್ಲಿ ಅವರು ಭಾಗಿಯಾಗಿದ್ದರು. ತಾವು ಕೃತ್ಯ ಎಸಗಿದ್ದ ಬಗ್ಗೆ ಆಲಿ ರಹಸ್ಯವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ, ಅವರ ಕೃತ್ಯವು ನಿರಂತರವಾಗಿ ಅವರನ್ನು ಕಾಡುತ್ತಿತ್ತು. ಅಪರಾಧಿ ಭಾವ ಹೆಚ್ಚಾಗಿದ್ದರಿಂದ, ಇದೀಗ ಅವರು ಮಲಪ್ಪುರಮ್ ಜಿಲ್ಲೆಯ ವೆಂಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ತಾನು 14 ವರ್ಷ ವಯಸ್ಸನವನಿದ್ದಾಗ ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
1986ರಲ್ಲಿ ಆಲಿ ಅವರು ಕೋಝಿಕೋಡ್ ಜಿಲ್ಲೆಯ ತಿರುವಂಬಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡರಂಜಿ ಗ್ರಾಮದ ದೇವಸ್ಯ ಎಂಬವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಆಗ, “ವ್ಯಕ್ತಿಯೊಬ್ಬರು ತನಗೆ ಕಿರುಕುಳ ನೀಡಿದ್ದರಿಂದ, ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಆತನ ಮೇಲೆ ಪ್ರತಿದಾಳಿ ಮಾಡಿದಾಗ, ಆತ ನೀರು ತುಂಬಿದ್ದ ಹಳಕ್ಕೆ ಬಿದ್ದು ಸಾವನ್ನಪ್ಪಿದ್ದರು” ಎಂದು ಹೇಳಿಕೊಂಡಿದ್ದಾರೆ.
“ಘಟನೆಯಿಂದ ಗಾಬರಿಗೊಂಡು ನಾನು ಅಲ್ಲಿಂದ ಓಡಿ ಹೋದೆ. ಎರಡು ದಿನಗಳ ಬಳಿಕ ವಾಪಸ್ ಬಂದಾಗ, ಆತನ ಮೃತದೇಹ ಹಳ್ಳದಲ್ಲೇ ಇತ್ತು. ಪೊಲೀಸರು ಆತನನ್ನು ಸಹಜ ಸಾವೆಂದು ಪ್ರಕರಣ ದಾಖಲಿಸಿದ್ದರು. ಯಾವುದೇ ಸುಳಿವು ಸಿಗದೆ ಪ್ರಕರಣ ಮೂಲೆಗೆ ಸರಿಯಿತು. ಆದರೆ, ಭಯದಿಂದ ನಾನು ಸತ್ಯವನ್ನು ಮುಚ್ಚಿಟ್ಟಿದ್ದೆ” ಎಂದು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಪ್ರತಿಷ್ಠಿತ ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆ ಮೇಲೆ ಗಂಭೀರ ಆರೋಪ: ಕ್ಲಿನಿಕಲ್ ಪ್ರಯೋಗಕ್ಕೆ ಬಡರೋಗಿಗಳ ಬಳಕೆ
ಆದಾಗ್ಯೂ, “ನನಗೆ ದಿನನಿತ್ಯ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಇತ್ತೀಚೆಗೆ, ನನ್ನ ಮಕ್ಕಳು ಮೃತಪಟ್ಟಾಗ, ನನ್ನ ಅಪರಾಧಿ ಭಾವದ ಕಟ್ಟೆಹೊಡೆಯಿತು. ನಾನು ನೆಮ್ಮದಿಯಿಂದ ಬದುಕಬೇಕೆಂದರೆ ನನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಪರಿಶುದ್ಧನಾಗಿ ಮನೆಗೆ ಮರಳಬೇಕು ಎನಿಸಿದೆ. ಅದಕ್ಕಾಗಿ, ಶರಣಾಗುತ್ತಿದ್ದೇನೆ” ಎಂದು ಆಲಿ ಹೇಳಿದ್ದಾರೆ.
ಅವರ ಹೇಳಿಕೆಯನ್ನು ಪರಿಗಣಿಸಿರುವ ಪೊಲೀಸರು, ಆಲಿ ಅವರನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮೃತರ ಗುರುತು ಪತ್ತೆಗಾಗಿ ಪರಿಶೀಲನೆ-ತನಿಖೆ ನಡೆಸುತ್ತಿದ್ದಾರೆ. ಆಲಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.