ಗುಜರಾತ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಬಂದಿರುವ ಬೇರೆ ಬೇರೇ ದೇಶಗಳ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ನಮಾಜ್ ಮಾಡುತ್ತಿದ್ದಾಗ ಶನಿವಾರ ರಾತ್ರಿ ಗುಂಪೊಂದು ದಾಂಧಲೆ ನಡೆಸಿದೆ. ಗುಂಪಿನಲ್ಲಿದ್ದವರು ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇವೆಲ್ಲವೂ ನಡೆದ ಬಳಿಕ ಗುಜರಾತ್ ವಿಶ್ವವಿದ್ಯಾಲಯದ ಡಾ. ನೀರ್ಜಾ ಎ ಗುಪ್ತಾ ಮಾತ್ರ ಈ ವಿದೇಶಿ ವಿದ್ಯಾರ್ಥಿಗಳು ‘ಸಾಂಸ್ಕೃತಿಕ ಸೂಕ್ಷ್ಮತೆ’ ಕಲಿಯಬೇಕಾಗುತ್ತದೆ ಎಂದು ಹೇಳಿದ್ದಾರೆ! ಆದರೆ, ನಿಜಕ್ಕೂ ‘ಸಾಂಸ್ಕೃತಿಕ ಸೂಕ್ಷ್ಮತೆ’ ಕಲಿಯಬೇಕಾದವರು ಯಾರು…?
ಸರ್ವಾಧಿಕಾರಿ ಆಡಳಿತ ಇರುವ ಅಬುದಾಬಿಯಲ್ಲಿ ಹಿಂದೂ ದೇವಾಲಯ ತೆರೆದು ಹಿಂದೂಗಳನ್ನು ಸ್ವಾಗತಿಸಲಾಗುತ್ತಿದೆ. ಅದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯೇ ಉದ್ಘಾಟಕರು. ಆದರೆ ನಮ್ಮ ಪ್ರಜಾಪ್ರಭುತ್ವದ ಭಾರತದಲ್ಲಿ ನಮಾಜ್ ಮಾಡಿದ್ದಕ್ಕೆ ವಿದೇಶಿ ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಗುತ್ತದೆ. ಅವರಿಗೆ ಸೇರಿದ ಬೈಕ್, ಮೊದಲಾದವುಗಳನ್ನು ಧ್ವಂಸ ಮಾಡಲಾಗುತ್ತದೆ. ಘಟನೆ ವೇಳೆ ಸ್ಥಳದಲ್ಲೇ ಇದ್ದ ಪೊಲೀಸರು, ನೋಡಿ ಸುಮ್ಮನಿರುತ್ತಾರೆ.
ಇನ್ನೊಂದೆಡೆ, ದೆಹಲಿಯಲ್ಲಿ ಪೊಲೀಸ್ ಅಧಿಕಾರಿ ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರನ್ನು ಕಾಲಿನಿಂದ ಒದ್ದಿರುವ ಘಟನೆ ನಡೆದಿದೆ. ಪೊಲೀಸರ ಈ ಅನುಚಿತ ವರ್ತನೆಯ ವೀಡಿಯೋ ವೈರಲ್ ಕೂಡಾ ಆಗಿದೆ. ಜನರು ಅಧಿಕಾರಿಯ ವರ್ತನೆಗೆ ಆಕ್ರೋಶಗೊಂಡಿದ್ದಾರೆ. ಆ ಅಧಿಕಾರಿಯನ್ನು ಅಮಾನತು ಕೂಡಾ ಮಾಡಲಾಗಿದೆ.
International students (Africa, Uzbekistan, Afganistan etc) studying in Gujarat University @gujuni1949 claim they were beaten up, Stones thrown at them and at their hostel (A-Block), Vehicles destroyed while they were offering Ramazan Taraweeh at a place inside the hostel A-Block… pic.twitter.com/ogJ3h7FUin
— Mohammed Zubair (@zoo_bear) March 16, 2024
“ಇದು ಪ್ರಜಾಪ್ರಭುತ್ವ ದೇಶ, ಜಾತ್ಯಾತೀತ ದೇಶ”
ನಾವು ವೀಡಿಯೋದಲ್ಲಿ ಹಲ್ಲೆ ನಡೆಸಿದವರು ತಮ್ಮ ಮುಂಭಾಗದಲ್ಲೇ ಹೋಗುತ್ತಿದ್ದರೂ ಪೊಲೀಸರು ಮಾತ್ರ ನಿಂತು ನೋಡುವುದನ್ನು ಕಾಣಬಹುದು. “ಪೊಲೀಸರು ಈ ಆರೋಪಿಗಳನ್ನ ಬಿಟ್ಟಿದ್ದಾರೆ. ಎಲ್ಲರೂ ತಪ್ಪಿಸಿಹೋಗುತ್ತಿದ್ದಾರೆ. ನಮ್ಮ ಎಲ್ಲ ವಸ್ತುಗಳನ್ನ ಧ್ವಂಸ ಮಾಡಿ ಈಗ ತಪ್ಪಿಸಿ ಹೋಗುತ್ತಿದ್ದಾರೆ. ಆದರೆ ಪೊಲೀಸರು ಏನೂ ಕ್ರಮಕೈಗೊಳ್ಳುತ್ತಿಲ್ಲ. ಇದು ಪ್ರಜಾಪ್ರಭುತ್ವ ದೇಶ, ಜಾತ್ಯಾತೀತ ದೇಶ” ಎಂದು ಹಲ್ಲೆಗೊಳಗಾದ ವಿದೇಶಿ ವಿದ್ಯಾರ್ಥಿಗಳು ಹೇಳಿದ್ದಾರೆ.
ಇಷ್ಟೊಂದು ದಾಂಧಲೆ ಮಾಡಿದವರು ತಮ್ಮ ಮುಂದೆ ಇದ್ದರೂ ವಶಕ್ಕೆ ಪಡೆಯದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಪೊಲೀಸರು ದಿಡೀರ್ ಆಗಿ ಬದಲಾಗಲೂ ಕಾರಣವೇನು ಎಂಬುವುದನ್ನು ಅಹಮದಾಬಾದ್‌ನಲ್ಲಿರುವ ಹಿರಿಯ ಪತ್ರಕರ್ತರು ದೀಪಾಲಿ ತ್ರಿವೇದಿ ಹೇಳುತ್ತಾರೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ – ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು
ವಿದೇಶಿ ವಿದ್ಯಾರ್ಥಿಗಳ ಜಾಗದಲ್ಲಿ ಭಾರತದ ಮುಸ್ಲಿಮರು ಇದ್ದರೆ…
“ಗುಜರಾತ್ ವಿಶ್ವವಿದ್ಯಾಲಯ ಈ ಘಟನೆಯನ್ನು ಹಾಸ್ಟೆಲ್‌ನಲ್ಲಿರುವ ಆಂತರಿಕ ವಿವಾದ ಎಂದು ಬಿಂಬಿಸುವ ಯತ್ನ ಮಾಡಿತು. ಆದರೆ ಅದು ಸಾಧ್ಯವಾಗಲಿಲ್ಲ. ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಯಾರೂ ಕೂಡಾ ಹಾಸ್ಟೆಲ್‌ನಲ್ಲಿರುವವರಲ್ಲ. ಎಲ್ಲರೂ ಸ್ಥಳೀಯರು. ಇದು ಪೂರ್ವಯೋಜಿತ ದಾಳಿ. ಈ ವಿದ್ಯಾರ್ಥಿಗಳು ಈ ಘಟನೆ ವಿಚಾರದಲ್ಲಿ ಪ್ರೋಗ್ರಾಂ ಕಾರ್ಡಿನೇಟರ್ ರಾಹುಲ್ ಬಗ್ಗೆ ಪ್ರಶ್ನೆ ಎತ್ತಿದ್ದರು. ಈ ಕಾರ್ಡಿನೇಟರ್ ಬದಲಾವಣೆಯು ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶದ ಬಳಿಕ ನಡೆದಿದೆ” ಎಂದು ಹೇಳಿದ್ದಾರೆ.
“ಬಿಜೆಪಿಯ ವಿದ್ಯಾರ್ಥಿ ವಿಂಗ್ ಆದ ಎಬಿವಿಪಿ ಕೂಡಾ ಗುಜರಾತ್ ವಿಶ್ವವಿದ್ಯಾಲಯವನ್ನು ಟೀಕಿಸಿದೆ. ಈ ವಿದೇಶಿ ವಿದ್ಯಾರ್ಥಿಗಳ ಅಗತ್ಯಗಳ ಬಗ್ಗೆ ಸರಿಯಾದ ಗಮನಹರಿಸದ ಕಾರಣಕ್ಕೆ ಹಾಸ್ಟೆಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಈ ಘಟನೆಯು ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿದೆ. ಆದರೆ ಈ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಜಾಗದಲ್ಲಿ ವಿದೇಶಿ ವಿದ್ಯಾರ್ಥಿಗಳು ಇಲ್ಲದೆ ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳು ಇದ್ದಿದ್ದರೆ ಸ್ಥಿತಿ ಏನಾಗುತ್ತಿತ್ತು ಎಂದು ನಾವೀಗ ಆಲೋಚಿಸಬೇಕಾಗುತ್ತದೆ” ಎಂದು ದೀಪಾಲಿ ತ್ರಿವೇದಿ ಅಭಿಪ್ರಾಯಿಸಿದ್ದಾರೆ.
ನಕಲಿ ಸುದ್ದಿ ವೈರಲ್
ಈ ವಿದೇಶಿ ವಿದ್ಯಾರ್ಥಿಗಳು ನಮಾಜ್ ಮಾಡಿದ ಸ್ಥಳದಲ್ಲಿಯೇ ಗೋಡೆಯಲ್ಲಿ ಬಿಸ್ಮಿಲ್ಲಾಹ್ ರಖ್‌ಮಾನ್ ರಹೀಮ್ ಎಂದು ಬರೆಯಲಾಗಿದೆ. ಅಂದರೆ “ಅಲ್ಲಾಹನ ಹೆಸರಿನಲ್ಲಿ” ಎಂದಾಗಿದೆ. ಯಾವುದೇ ಕೆಲಸ ಮಾಡುವ ಮೊದಲು ಇದನ್ನು ಹೇಳಲಾಗುತ್ತದೆ. ಆದರೆ ಬಿಜೆಪಿ ಸಂಘಪರಿವಾರದವರು “ಈ ಗೋಡೆಯಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿರುವುದು ಒಂದು ಆಘಾತಕಾರಿ ವಿಚಾರ, ಇದು ನಾವೆಲ್ಲರೂ ಆತಂಕಕ್ಕೊಳಗಾಗುವ ವಿಚಾರ” ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸುತ್ತಿದ್ದಾರೆ.
ಅಷ್ಟು ಮಾತ್ರವಲ್ಲ ಈ ಸ್ಥಳದಲ್ಲಿ ಗಣಪತಿಯ ಪೂಜೆ ಆಗಬೇಕಾಗಿತ್ತು. ಇದೇ ಜಾಗದಲ್ಲಿ ವಿದೇಶಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ ಎಂದು ಗುಳ್ಳೆಬ್ಬಿಸಿದೆ. ಹೀಗಿರುವಾಗ ಕೆಲವೊಂದು ಪ್ರಶ್ನೆಗಳು ಏಳುತ್ತದೆ. ಗುಜರಾತ್ ವಿಶ್ವವಿದ್ಯಾಲಯದ ಉಪಕುಲಪತಿ “ಈ ಹಾಸ್ಟೆಲ್‌ನಲ್ಲಿ 300 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ 75 ವಿದ್ಯಾರ್ಥಿಗಳು ಎ ವಿಂಗ್‌ನಲ್ಲಿ ಇದ್ದಾರೆ. ಇದು ವಿದೇಶಿ ವಿದ್ಯಾರ್ಥಿಗಳಿಗಾಗಿ ಮೀಸಲಾದ ಸ್ಥಳ” ಎಂದು ಹೇಳುತ್ತಾರೆ. ಈ ಸ್ಥಳಕ್ಕೆ ಸ್ಥಳೀಯರು ನುಗ್ಗಿ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ಕೇಂದ್ರದ ‘ಪ್ರಧಾನಮಂತ್ರಿ ಹಫ್ತಾ ವಸೂಲಿ ಯೋಜನೆ’ ಎಂದ ಕಾಂಗ್ರೆಸ್
ಹಾಸ್ಟೆಲ್‌ನ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇರುವ ಒಂದು ಸ್ಥಳವು ವರ್ಷವಿಡಿ ಗಣಪತಿ ಪೂಜೆಗಾಗಿ ಮೀಸಲಾಗಿರುತ್ತದೆಯೇ? ಮಂದಿರ, ಮಸೀದಿ, ಚರ್ಚ್ ಅಲ್ಲದ, ಬೇರೆ ಯಾವುದೇ ರೀತಿಯಲ್ಲೂ ಪ್ರಾರ್ಥನೆಯ ಸ್ಥಳವಾಗಿರದ ಸ್ಥಳವನ್ನು ಪೂಜೆಗಾಗಿ ಮೀಸಲಿರಿಸಬಹುದೇ? ಈ ಸ್ಥಳ ಗಣಪತಿ ಪೂಜೆಗಾಗಿ ಮೀಸಲಾಗಿಟ್ಟ ಖಾಯಂ, ವಿಶೇಷ ಜಾಗವೇ? ಈ ಸಮಯದಲ್ಲಿ ಗಣಪತಿ ಪೂಜೆ ಮಾಡಲಾಗುತ್ತಿದೆಯೇ? ಅಷ್ಟಕ್ಕೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇರುವಲ್ಲಿ ಗಣಪತಿ ಪೂಜೆಗಾಗಿ ಸ್ಥಳವನ್ನು ಯಾಕೆ ಮೀಸಲಾಗಿಡಲಾಗುತ್ತದೆ? ಎಂಬ ಹಲವಾರು ಪ್ರಶ್ನೆಗಳು ಈಗ ಮೂಡುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕ್ಷಿತಿಜ್ ಪಾಂಡೆ, ಜಿತೇಂದ್ರ ಪಟೇಲ್, ಸಾಹಿಲ್ ದುಧಾಯಿತಾ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಆಸ್ಪತ್ರೆಗೆ ದಾಖಲಾಗುವಷ್ಟು ಮಟ್ಟಿಗೆ ಗಾಯಗಳಿದೆ. ವಿದೇಶಾಂಗ ಸಚಿವಾಲಯ ಕೂಡಾ ಈ ಬಗ್ಗೆ ಹೇಳಿಕೆಯನ್ನು ನೀಡಿದೆ. “ಗುಜರಾತ್ ವಿಶ್ವವಿದ್ಯಾಲಯದಲ್ಲಿ ಹಿಂಸೆಯ ಘಟನೆಯೊಂದು ನಡೆದಿದೆ. ಈ ದಾಳಿ ನಡೆಸಿದ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರವು ಕಠಿಣ ಕ್ರಮವನ್ನು ಕೈಗೊಳ್ಳುತ್ತಿದೆ. ಈ ದಾಳಿಯಿಂದ ಇಬ್ಬರು ವಿದೇಶಿ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಬ್ಬರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಗುಜರಾತ್ ಸರ್ಕಾರದೊಂದಿಗೆ ವಿದೇಶಾಂಗ ಸಚಿವಾಲಯ ಸಂಪರ್ಕದಲ್ಲಿದೆ” ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಬುದಾಬಿಯಲ್ಲಿ ದೇವಾಲಯ, ನಮ್ಮಲ್ಲಿ…
ನರೇಂದ್ರ ಮೋದಿ ಅಬುದಾಬಿಯಲ್ಲಿ ದೇವಾಲಯವನ್ನ ಉದ್ಘಾಟನೆ ಮಾಡಿದ್ದಾರೆ. ಎಲ್ಲಿ ಪ್ರಜಾಪ್ರಭುತ್ವ ಇಲ್ಲವೋ, ಎಲ್ಲಿ ಮತ ಚಲಾಯಿಸಲು ಅವಕಾಶವಿಲ್ಲವೊ, ಎಲ್ಲಿ ಸಂಪೂರ್ಣವಾಗಿ ಸರ್ವಾಧಿಕಾರ ಸರ್ಕಾರ ಇದೆಯೋ, ಒಂದು ಧರ್ಮದ ಆಧಾರದಲ್ಲಿಯೇ ಆಡಳಿತ ನಡೆಯುತ್ತದೆಯೋ, ಅಂತಹ ದೇಶವೇ ಎಲ್ಲ ಧರ್ಮಿಯರನ್ನು ಸ್ವಾಗತಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂಬುವುದು ಒಳ್ಳೆಯ ವಿಚಾರ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | 2019ರ ಏಪ್ರಿಲ್‌ಗೂ ಮೊದಲು 66% ದೇಣಿಗೆ ಬಿಜೆಪಿ ಪಾಲಾಗಿದೆ; ಹೊಸ ಡೇಟಾ!
ಇದು ಅಬುದಾಬಿಯ ಮೊದಲ ಮಂದಿರ ಅಲ್ಲವಾದರೂ ಒಂದು ಈಗ ದೊಡ್ಡ ಮಂದಿರವನ್ನು ನಿರ್ಮಿಸಲಾಗಿದೆ. ಜೊತೆಗೆ ಯಾವ ದೇಶದಲ್ಲಿ ಅಧಿಕ ಹಿಂದೂ ನಾಗರಿಕರು ಇದ್ದಾರೋ ಆ ದೇಶದ ಪ್ರಧಾನಿಗಳನ್ನು ಈ ದೇವಾಲಯದ ಉದ್ಘಾಟನೆಗೆ ಕರೆದಿರುವುದು ಒಳ್ಳೆಯ ವಿಚಾರ. ಇದರಿಂದಾಗಿ ಮುಸ್ಲಿಂ ದೇಶದಲ್ಲಿ ಇತರೆ ಧರ್ಮಿಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗುತ್ತಿದೆ. ಆದರೆ ನಮ್ಮ ಪ್ರಜಾಪ್ರಭುತ್ವ, ಜಾತ್ಯಾತೀತ ದೇಶದಲ್ಲಿ ನಮಾಜ್ ಮಾಡಿದ್ದಕ್ಕೆ ಹಲ್ಲೆ ಮಾಡಲಾಗುತ್ತಿದೆ. ಈ ನಡುವೆ ನಮ್ಮ ದೇಶ ಯಾವ ಹಂತಕ್ಕೆ ತಲುಪುತ್ತಿದೆ ಎಂದು ನಾವು ಯೋಚಿಸಬೇಕಾಗುತ್ತದೆ.
ಗುಜರಾತ್ ವಿವಿ ಉಪಕುಲಪತಿ ಹೇಳಿಕೆ ಸರಿಯೇ?
ಗುಜರಾತ್ ವಿಶ್ವವಿದ್ಯಾಲಯದ ಉಪಕುಲಪತಿ ನೀರ್ಜಾ ಗುಪ್ತಾ ಹೇಳಿಕೆಯೊಂದನ್ನು ನೀಡಿದ್ದಾರೆ. “ವಿದೇಶಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸೂಕ್ಷ್ಮತೆ ಬಗ್ಗೆ ನಾವು ತರಬೇತಿ ನೀಡಬೇಕಾಗುತ್ತದೆ. ಇವರು ವಿದೇಶಿ ವಿದ್ಯಾರ್ಥಿಗಳು, ನಾವು ವಿದೇಶಕ್ಕೆ ಹೋದಾಗ ನಾವು ಸಾಂಸ್ಕೃತಿಕ ಸೂಕ್ಷ್ಮತೆ ಬಗ್ಗೆ ತಿಳಿಯುವುದು ಮುಖ್ಯ. ಈ ವಿದ್ಯಾರ್ಥಿಗಳಿಗೆ ತರಬೇತಿ ಬೇಕಿದೆ. ನಾವು ಅವರನ್ನು ಕರೆದು ಈ ತರಬೇತಿ ನೀಡುತ್ತೇವೆ. ಅವರ ಸುರಕ್ಷತೆ ಹೇಗೆ ಹೆಚ್ಚಿಸುವುದು ಎಂಬ ಬಗ್ಗೆ ಚರ್ಚಿಸುತ್ತೇವೆ” ಎಂದು ಹೇಳಿದ್ದಾರೆ.
ಅಂದರೆ ಯಾರು ದಾಳಿ ಮಾಡಿದರೋ ಅವರಿಗೆ ಸಾಂಸ್ಕೃತಿಕ ಸೂಕ್ಷ್ಮತೆ ಬಗ್ಗೆ ತರಬೇತಿ ನೀಡುವುದಲ್ಲ. ಬದಲಾಗಿ ಯಾರ ಮೇಲೆ ಹಲ್ಲೆ ಮಾಡಲಾಗಿದೆಯೋ ಅವರಿಗೆ ಸಾಂಸ್ಕೃತಿಕ ಸೂಕ್ಷ್ಮತೆ ಬಗ್ಗೆ ತಿಳಿಸಬೇಕು! ಉಪಕುಲಪತಿ ನೀರ್ಜಾ ಗುಪ್ತಾ ಹೇಳಿಕೆ ನೋಡಿದಾಗ ಅವರಿಗೆ ನಾವು ಪ್ರಜಾಪ್ರಭುತ್ವ ದೇಶದ ತರಬೇತಿ ನೀಡಬೇಕಾಗುತ್ತದೆ.
“ನಾವು ಎಷ್ಟೊಂದು ಕರುಣಾಮಯಿ ಜನರು ನೋಡಿ. ನಾವು ಸಿಎಎ ಜಾರಿ ಮಾಡಿ ವಿದೇಶದಲ್ಲಿರುವ ಅಲ್ಪಸಂಖ್ಯಾತರಿಗೆ, ಧಾರ್ಮಿಕವಾಗಿ ಶೋಷಣೆಗೆ ಒಳಗಾದವರಿಗೆ ಭಾರತದಲ್ಲಿ ಪೌರತ್ವವನ್ನು ನೀಡುತ್ತೇವೆ” ಎಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹೇಳುತ್ತಾರೆ. ಆದರೆ ಭಾರತದ ಅಲ್ಪಸಂಖ್ಯಾತರ ಮೇಲೆ ಎಷ್ಟೊಂದು ಹಲ್ಲೆ, ದಾಳಿ ಪ್ರಕರಣಗಳು ನಡೆಯುತ್ತಿದೆ ಎಂಬುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈಗ ವಿದೇಶದಿಂದ ಬಂದ ಮುಸ್ಲಿಮರ ಮೇಲೂ ದಾಳಿ ಮಾಡಲಾಗುತ್ತಿದೆ.
ಹೆಮ್ಮರವಾಗಿ ಬೆಳೆದ ಕೋಮುವಾದದ ವಿಷಬೀಜ
ಒಟ್ಟಿನಲ್ಲಿ ಜನರು ಈಗ ಇಸ್ಲಾಂ ದ್ವೇಷದಲ್ಲಿ ಅಂಧರಾಗಿದ್ದಾರೆ. ಇತರೆ ಧರ್ಮಿಯರನ್ನು ದ್ವೇಷಿಸೋವರೆಗೂ ನಾವು ಉತ್ತಮ ಹಿಂದೂ ಆಗಲ್ಲ ಎಂಬ ಮನೋಭಾವವನ್ನು ಕೇಂದ್ರ ಸರ್ಕಾರವೇ ಸೃಷ್ಟಿಸಿದೆ. ಅದೀಗ ಹಿಂಸೆಯಾಗಿ ಪರಿವರ್ತಿಸಿದೆ. ಇಲ್ಲಿ ದೇಶ, ವಿದೇಶದ ಪ್ರಶ್ನೆ ಬರಲ್ಲ. ಮುಸ್ಲಿಂ ಮಹಿಳೆಯ ಹೊಟ್ಟೆಯಲ್ಲಿರುವ ಮಗುವನ್ನೂ ಆಕೆ ಮುಸ್ಲಿಂ ಎಂಬ ಕಾರಣಕ್ಕೆ ದ್ವೇಷಿಸಲಾಗುತ್ತದೆ. ಮುಸ್ಲಿಮರಾದರೆ ದ್ವೇಷಿಸಲು ಅರ್ಹರು ಎಂಬಂತ ವಾತಾವರಣವನ್ನು ಸೃಷ್ಟಿಸಲಾಗಿದೆ.
ಮುಖ್ಯವಾಗಿ ಕಳೆದ ಹತ್ತು ವರ್ಷದಲ್ಲಿ ಅಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಮನಸ್ಸಲ್ಲಿ ಕೋಮುವಾದದ ವಿಷಬೀಜ ಬಿತ್ತಿ ಅದಕ್ಕೆ ಕಾಲಕ್ಕೆ ಸರಿಯಾಗಿ ದ್ವೇಷ, ಉದ್ರೇಕಕಾರಿ ಭಾಷಣಗಳ ನೀರುಣಿಸಿ ಹೆಮ್ಮರವಾಗಿ ಬೆಳೆಸಿರುವುದು ನಾವು ಒಪ್ಪಲೇಬೇಕಾಗುತ್ತದೆ. ಜೊತೆಗೆ ಧಾರ್ಮಿಕ ಹಿಂಸೆಯ ಕೃತ್ಯ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಂಡು ಕಾನೂನಿನ ಭಯ ಹುಟ್ಟಿಸುವುದು ಅನಿವಾರ್ಯ ಪ್ರಸ್ತುತ ಅನಿವಾರ್ಯ.