ತನಗೆ ನೀಡಬೇಕಾಗಿದ್ದ ಬಾಕಿ ಸಂಬಳ ಕೇಳಿದ ದಲಿತ ಯುವಕನಿಗೆ ಕಂಪನಿಯ ಮಾಲಕಿಯೊಬ್ಬಳು ತನ್ನ ಚಪ್ಪಲಿಯನ್ನು ಆತನ ಬಾಯಲ್ಲಿಟ್ಟು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ನಡೆದಿದೆ.
21 ವರ್ಷದ ನಿಲೇಶ್ ದಲ್ಸಾನಿಯಾ ಹಲ್ಲೆಗೊಳಗಾದ ದಲಿತ ಸಮುದಾಯದ ಯುವಕ. ಇವರು ನ.23 ರಂದು ವಿಭೂತಿ ಪಟೇಲ್ ನಡೆಸುತ್ತಿರುವ ರಾಣಿಬಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಚೇರಿಗೆ ಸುಮಾರು 7 ಗಂಟೆಗೆ ತಮ್ಮ ಸಹೋದರರ ಜೊತೆ ಸಂಬಳ ಕೇಳಲು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಕಂಪನಿಯ ಮಾಲಕಿಯಾದ ವಿಭೂತಿ ಪಟೇಲ್, ಆಕೆಯ ಸಹೋದರ ಓಂ ಪಟೇಲ್, ಕಂಪನಿಯ ಮ್ಯಾನೇಜರ್ ಪರೀಕ್ಷಿತ್ ಪಟೇಲ್ ಸೇರಿ ನಾಲ್ವರು ನಿಲೇಶ್ ದಲ್ಸಾನಿಯಾ ಹಾಗೂ ಇತರ ಮೂವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಇದಲ್ಲದೆ ನಿಲೇಶ್ ಅವರಿಗೆ ತನ್ನ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಕ್ಷಮೆ ಕೇಳುವಂತೆ ಮಾಲಕಿ ವಿಭೂತಿ ಪಟೇಲ್ ಹೇಳಿದ್ದಾರೆ. ಇದಾದ ನಂತರ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಚುನಾವಣೆ | ತ್ರಿಕೋನ ಸ್ಪರ್ಧೆಯ ನಡುವೆ ಗದ್ದುಗೆಗಾಗಿ ಕಾಂಗ್ರೆಸ್, ಬಿಆರ್‌ಎಸ್ ಜಿದ್ದಾಜಿದ್ದಿ
ಘಟನೆಯ ಬಗ್ಗೆ ಮೊರ್ಬಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಸಿ/ಎಸ್‌ಟಿ ಸೆಲ್) ಪ್ರತಿಪಾಲ್ ಸಿನ್ಹಾ ಝಾಲಾ ಮಾತನಾಡಿ, ಹಲ್ಲೆಯ ನಂತರ ನಿಲೇಶ್ ಮೊರ್ಬಿಯಲ್ಲಿರುವ ರಾಜ್ಯ ಸರ್ಕಾರ ನಡೆಸುವ ಜಿಎಂಇಆರ್‌ಎಸ್ ಆಸ್ಪತ್ರೆಗೆ ತೆರಳಿದರು. ತೀವ್ರವಾಗಿ ಗಾಯಗೊಂಡ ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ನಾವು ಎಫ್ಐಆರ್ ಅನ್ನು ದಾಖಲಿಸಿದ್ದೇವೆ ಮತ್ತು ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ನಿಲೇಶ್ ಅವರು ಅಕ್ಟೋಬರ್ 2 ರಂದು ತಿಂಗಳಿಗೆ 12 ಸಾವಿರ ವೇತನದಂತೆ ಕಂಪನಿಗೆ ಸೇರಿದ್ದರು. ನಿಲೇಶ್ ಅವರನ್ನು ಅಕ್ಟೋಬರ್ 18 ರಂದು ಯಾವುದೇ ಕಾರಣ ನೀಡದೆ ಏಕಾಏಕಿ ವಜಾಗೊಳಿಸಲಾಯಿತು. ನಂತರ, ಅವರು ಮತ್ತೊಂದು ಸಂಸ್ಥೆಗೆ ಸೇರಿಕೊಂಡರು. ನಿನ್ನೆ ಬಾಕಿ ವೇತನ ಕೇಳಲು ಹೋದಾಗ ಹಲ್ಲೆ ನಡೆಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (2) (ಅಪರಾಧ ಬೆದರಿಕೆ), 143 (ಕಾನೂನುಬಾಹಿರ ಸಭೆ), 147 (ಗಲಭೆ) ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.