ಆಸ್ಪತ್ರೆಯ ಸಿಸಿಟಿವಿ ನೆಟ್‌ವರ್ಕ್‌ಅನ್ನು ಹ್ಯಾಕ್ ಮಾಡಿ ಮಹಿಳಾ ರೋಗಿಗಳ ಖಾಸಗಿ ವಿಡಿಯೋಗಳನ್ನು ಪಡೆದು, ಅವುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಬಂಧಿತನನ್ನು ದೆಹಲಿ ಮೂಲದ ರೋಹಿತ್ ಸಿಸೋಡಿಯಾ ಎಂದು ಹೇಳಲಾಗಿದೆ. ಆಸ್ಪತ್ರೆಗಳ ಹೆರಿಗೆ ವಾರ್ಡ್‌ಗಳಲ್ಲಿ ಮಹಿಳಾ ಗರ್ಭಿಣಿಯರನ್ನು ವೈದ್ಯರು ಪರೀಕ್ಷಿಸುವ ವಿಡಿಯೋಗಳನ್ನು ಪಡೆದು, ಯೂಟ್ಯೂಬ್ ಮತ್ತು ಟೆಲೆಗ್ರಾಮ್ ಚಾನೆಲ್‌ಗಳಲ್ಲಿ ಹರಿಬಿಟ್ಟಿದ್ದಾರೆ. ಹಣಕ್ಕೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯು ಸಿಸಿಟಿವಿಯನ್ನು ಹ್ಯಾಕ್ ಮಾಡಿ, ವಿಡಿಯೋಗಳನ್ನು ಕ್ಯೂಆರ್ ಕೋಡ್‌ಗಳಾಗಿ ಪರಿವರ್ತಿಸಿ ಸಹ-ಆರೋಪಿಗಳಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ.
ಆರೋಪಿ ವಿರುದ್ಧ ಅಹಮದಾಬಾದ್ ಸೈಬರ್ ಕ್ರೈಮ್ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ.
ಇದೇ ಪ್ರಕರಣದಲ್ಲಿ ಈಗಾಗಲೇ ಸೂರತ್‌ನ ಪರಿತ್ ಧಮೇಲಿಯಾ, ಮಹಾರಾಷ್ಟ್ರದ ಪ್ರಜ್ವಲ್ ತೇಲಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಧಮೇಲಿಯಾ ವಾಣಿಜ್ಯ ಪದವೀಧರನಾಗಿದ್ದು, ರಾಜ್‌ಕೋಟ್‌ನಲ್ಲಿರುವ ಹೆರಿಗೆ ಆಸ್ಪತ್ರೆಯ ಸಿಸಿ ಕ್ಯಾಮೆರಾಗಳನ್ನು ಹ್ಯಾಕ್ ಮಾಡಿ, ವಿಡಿಯೋಗಳನ್ನು ಪಡೆದುಕೊಂಡು ಸಿಸೋಡಿಯಾಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.