ಐಎಎಸ್ ಅಧಿಕಾರಿಯೊಬ್ಬರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ, ಬಿಜೆಪಿ ರಾಜ್ಯಸಭಾ ಸದಸ್ಯ ಸುಭಾಷ್ ಬರಾಲಾ ಅವರ ಪುತ್ರ ವಿಕಾಸ್ ಬರಾಲಾ ಅವರನ್ನು ಹರಿಯಾಣದ ಸಹಾಯಕ ಅಡ್ವೊಕೇಟ್ ಜನರಲ್ (ಎಎಜಿ) ಆಗಿ ಹರಿಯಾಣ ಸರ್ಕಾರ ನೇಮಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಎಎಜಿ ಹುದ್ದೆಗೆ ನೇಮಿಸಿದ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
2017ರಲ್ಲಿ ವಿಕಾಸ್ ಬರಾಲಾ ಮತ್ತು ಆಶಿಶ್ ಕುಮಾರ್ ವಿರುದ್ಧ ಐಎಎಸ್ ಅಧಿಕಾರಿ ವಿ.ಎಸ್ ಕುಂದು ಅವರ ಪುತ್ರಿ ವರ್ಣಿಕಾ ಕುಂದು ಪ್ರಕರಣ ದಾಖಲಿಸಿದ್ದರು. ತನ್ನ ಮೇಲೆ ಈ ಇಬ್ಬರೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದರು. ವಿಕಾಸ್ ಮತ್ತು ಆಶಿಶ್ ವಿರುದ್ಧ ಐಪಿಸಿ ಸೆಕ್ಷನ್ 354 ಡಿ, 341, 365, 511 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದರು. ಸುಮಾರು 5 ತಿಂಗಳ ಜೈಲಿನಲ್ಲಿದ್ದ ವಿಕಾಸ್, 2018ರ ಜನವರಿಯಲ್ಲಿ ಜಾಮೀನು ಪಡೆದು, ಹೊರಬಂದಿದ್ದರು. ಆ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ.
ಇದೀಗ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ವಿಕಾಸ್ ಬರಾಲಾ ಅವರನ್ನು ಎಎಪಿ ಹುದ್ದೆಗೆ ನೇಮಿಸಲಾಗಿದೆ. ಇತ್ತೀಚೆಗೆ, ಹರಿಯಾಣ ಸರ್ಕಾರವು ಸಹಾಯಕ ಅಡ್ವೊಕೇಟ್ ಜನರಲ್ಗಳು, ಡೆಪ್ಯುಟಿ ಅಡ್ವೊಕೇಟ್ ಜನರಲ್ಗಳು, ಹಿರಿಯ ಡೆಪ್ಯುಟಿ ಅಡ್ವೊಕೇಟ್ ಜನರಲ್ಗಳು ಹಾಗೂ ಹೆಚ್ಚುವರಿ ಅಡ್ವೊಕೇಟ್ ಜನರಲ್ಗಳ ಹುದ್ದೆಗಳಿಗೆ 97 ಮಂದಿಯನ್ನು ನೇಮಿಸಿದೆ. ಅವರಲ್ಲಿ, ವಿಕಾಸ್ ಕೂಡ ಒಬ್ಬರಾಗಿದ್ದಾರೆ.
ಈ ಲೇಖನ ಓದಿದ್ದೀರಾ?: ಅಚ್ಯುತಾನಂದನ್- ಕೇರಳ ರಾಜಕಾರಣದ ದಂತಕಥೆ
ವಿಕಾಸ್ ನೇಮಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ವಿ.ಎಸ್ ಕುಂದು, “ಈ ವಿಚಾರದಲ್ಲಿ ನಾನು ಅಥವಾ ನನ್ನ ಮಗಳು ಪ್ರತಿಕ್ರಿಯಿಸಲು ಬರುವುದಿಲ್ಲ. ಸರ್ಕಾರವು ಯಾವ ರೀತಿಯ ಜನರನ್ನು ನೇಮಿಸುತ್ತಾರೆ ಅಥವಾ ನೇಮಿಸುವುದಿಲ್ಲ ಅವರ ವಿವೇಚನೆಗೆ ಬಿಟ್ಟಿದ್ದು. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ, ಇದು ದುರದೃಷ್ಟಕರ. ನಾವು ನ್ಯಾಯಾಂಗದ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದೇವೆ. ಆದರೆ, ಕಳೆದ 7 ವರ್ಷಗಳಿಂದ ಪ್ರಕರಣವು ತಾರ್ತಿಕ ಹಂತಕ್ಕೆ ಹೋಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಖಂಡಿಸಿದ್ದಾರೆ. ಅಡ್ವೊಕೇಟ್ ಜನರಲ್ ಕಚೇರಿಗೆ ಸಮರ್ಥ ಜನರನ್ನು ಮಾತ್ರವೇ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.