ಜುಲೈ 2ರಂದು ಹಾಥರಸ್‌ನಲ್ಲಿ ನಡೆದ ಕಾಲ್ತುಳಿತ ದುರಂತದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳವಾರ ನಡೆದ ದುರಂತ ಘಟನೆಯಲ್ಲಿ 121 ಜನರು ಸಾವನ್ನಪ್ಪಿದ್ದರು. ಘಟನೆಯ ಬಳಿಕ, ಆರೋಪಿ ಮಧುಕರ್ ದೆಹಲಿಗೆ ಪರಾರಿಯಾಗಿದ್ದ. ಆತ ಶುಕ್ರವಾರ ತಡರಾತ್ರಿ ದೆಹಲಿಯಲ್ಲಿ ಪೊಲೀಸರ ಎದುರು ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಹಾಥರಸ್‌ನ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಏಕೈಕ ಆರೋಪಿ ಮಧುಕರ್. ಆತನನ್ನು ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ಹಾಥರಸ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಕಾಲ್ತುಳಿತ ಸಂಭವಿಸಿದ ‘ಸತ್ಸಂಗ’ದ ‘ಮುಖ್ಯ ಸಂಘಟಕ’ ಮಧುಕರ್‌ನ ಬಂಧನವನ್ನು ಪೊಲೀಸರು ಇನ್ನೂ ಅಧಿಕೃತವಾಗಿ ಘೋಷಿಸಬೇಕಾಗಿದೆ.
“ಹಾಥರಸ್ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ಮುಖ್ಯ ಸಂಘಟಕ ಎಂದು ಉಲ್ಲೇಖಿಸಲಾಗಿರುವ ದೇವಪ್ರಕಾಶ್ ಮಧುಕರ್ ಅವರು ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಉ. ಹೀಗಾಗಿ, ದೆಹಲಿಯ ಪೊಲೀಸರು, ಎಸ್‌ಐಟಿ ಮತ್ತು ಎಸ್‌ಟಿಎಫ್‌ಗೆ ಕರೆ ಮಾಡಿ ಅವರು ಶರಣಾಗಿದ್ದಾರೆ” ಎಂದು ಮಧುಕರ್ ಪರ ವಕೀಲ ಎ.ಪಿ ಸಿಂಗ್ ಹೇಳಿದ್ದಾರೆ.
“ನಾವು ಯಾವುದೇ ತಪ್ಪು ಮಾಡದ ಕಾರಣ ನಾವು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ. ಅವರ ಅಪರಾಧವೇನು? ಅವರು ಎಂಜಿನಿಯರ್ ಮತ್ತು ಹೃದ್ರೋಗಿಯಾಗಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ಅವರು ತನಿಖೆಗೆ ಸಹಕರಿಸಲು ಶರಣಾಗಿದ್ದಾರೆ:” ಎಂದು ವಕೀಲರು ಹೇಳಿದ್ದಾರೆ.
ಮಧುಕರ್ ಬಂಧನಕ್ಕಾಗಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.
ಮಂಗಳವಾರ ನಡೆದ ಸೂರಜ್‌ಪಾಲ್ ಅಲಿಯಾಸ್ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಅವರ ‘ಸತ್ಸಂಗ’ದ ಸಂಘಟನಾ ಸಮಿತಿಯ ಸದಸ್ಯರಾದ ಇಬ್ಬರು ಮಹಿಳಾ ಸ್ವಯಂಸೇವಕರು ಸೇರಿದಂತೆ ಆರು ಮಂದಿಯನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಜುಲೈ 2ರಂದು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 105, 110, 238 126(2) ಹಾಗೂ 223 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.