ಉತ್ತರ ಪ್ರದೇಶದ ಹಾಥರಸ್ ಸತ್ಸಂಗದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ದುರಂತದಲ್ಲಿ 121 ಜನರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಸತ್ಸಂಗ ನೀಡುತ್ತಿದ್ದ ಭೋಲೆ ಬಾಬಾನಿಗೆ ಕ್ಲೀನ್ ಚಿಟ್ ನೀಡಿದೆ.
ದುರಂತದಲ್ಲಿ ಯಾವುದೇ ಪಿತೂರಿಯ ಬಗ್ಗೆ ಉಲ್ಲೇಖಿಸದ ಎಸ್‌ಐಟಿ ಘಟನೆಗೆ ಆಯೋಜಕರನ್ನು ಪ್ರಮುಖ ಹೊಣೆಗಾರರನ್ನಾಗಿ ಮಾಡಿದೆ. ಸರ್ಕಾರಕ್ಕೆ ಎಸ್‌ಐಟಿ ಸಲ್ಲಿಸಿರುವ ವರದಿಯಲ್ಲಿ ಭೋಲೆ ಬಾಬಾನ ಯಾವುದೇ ಪಾತ್ರವಿಲ್ಲ ಎಂದು ತಿಳಿಸಲಾಗಿದೆ.
ಸತ್ಸಂಗ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಬೋಧನೆ ನೀಡುತ್ತಿದ್ದ ಭೋಲೆ ಬಾಬಾ ತನ್ನ ಪ್ರವಚನವನ್ನು ಮುಗಿಸಿದ ನಂತರ ತೆರಳಲು ಸಿದ್ದವಾಗಿದ್ದ. ಈ ಸಂದರ್ಭದಲ್ಲಿ ಬಾಬಾನ ಪಾದ ಸ್ಪರ್ಶಿಸಲು ಉಂಟಾದ ನೂಕುನುಗ್ಗಲಿನ ಕಾಲ್ತುಳಿತದಲ್ಲಿ ದುರಂತ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸತ್ಸಂಗ ನಡೆಯುವ ಕಾರ್ಯಕ್ರಮದಲ್ಲಿ ಎಷ್ಟು ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ ಎಂಬುದನ್ನು ಆಯೋಜಕರು ತಿಳಿಸಿರಲಿಲ್ಲ ಎಂದು 850 ಪುಟದ ವರದಿಯಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ‘ತನ್ನ ಪಾದದ ಧೂಳು ತೆಗೆದುಕೊಳ್ಳಲು ಭೋಲೆ ಬಾಬಾ ಕರೆ ಕೊಟ್ಟಿದ್ದೇ ಕಾಲ್ತುಳಿತಕ್ಕೆ ಕಾರಣ’
“ಆಯೋಜಕರು ಪಡೆದಿದ್ದ ಅನುಮತಿ ಪತ್ರದಲ್ಲಿ ಷರತ್ತುಗಳನ್ನು ಪಾಲಿಸಿರಲಿಲ್ಲ. ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿರಲಿಲ್ಲ. ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ವಿಸ್ತಾರವಾದ ಜಾಗ ಅಥವಾ ಬ್ಯಾರಿಕೇಡ್ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
“ಸ್ಥಳೀಯ ಅಧಿಕಾರಿಗಳು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡದೆ ಅನುಮತಿ ನೀಡಿದ್ದರು. ಘಟನೆಯ ಹಿಂದೆ ಯಾವುದೇ ರೀತಿಯ ಪಿತೂರಿ ನಡೆದಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ. ಕುತೂಹಲ ಸಂಗತಿ ಎಂದರೆ ವರದಿಯಲ್ಲಿ ಎಲ್ಲಿಯೂ ಭೋಲೆ ಬಾಬಾನನ್ನು ಉಲ್ಲೇಖಿಸಲಾಗಿಲ್ಲ. ಆದರೆ ಆಯೋಜಕರನ್ನು ಮಾತ್ರ ದೋಷಿಸಲಾಗಿದೆ.
ಸತ್ಸಂಗದ ಪ್ರಮುಖ ಪಾತ್ರಧಾರಿ ಹಾಗೂ ಪ್ರವಚನಕಾರನಾದ ಭೋಲೆ ಬಾಬಾ ಕಾಲ್ತುಳಿತ ದುರಂತ ಸಂಭವಿಸಿದ ಕೆಲವು ದಿನಗಳ ನಂತರ ವಿಡಿಯೋವನ್ನು ಬಿಡುಗಡೆ ಮಾಡಿದ್ದ. ಈ ವಿಡಿಯೋದಲ್ಲಿ ಮೃತರಿಗೆ ಸಂತಾಪ ಸೂಚಿಸಿ, ತನ್ನ ಸಂಗಡಿಗರು ಸಂತ್ರಸ್ತ ಕುಟುಂಬದ ಜೊತೆ ನಿಲ್ಲುವುದಾಗಿ ಹೇಳಿದ್ದ.
ಎಸ್‌ಐಟಿ ತನ್ನ ತನಿಖೆಯಲ್ಲಿ 128 ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. ಮೂಲಗಳ ಪ್ರಕಾರ ಎಸ್‌ಐಟಿ ತನ್ನ ವರದಿಯನ್ನು ಸರ್ಕಾರ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಚಿಸಿರುವ ನ್ಯಾಯಾಂಗ ಆಯೋಗಕ್ಕೆ ನೀಡಲಿದೆ.
