ಹಾಥರಸ್ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧಿಶರ ಮೇಲ್ವಿಚಾರಣೆಯಲ್ಲಿ ಐವರು ಪರಿಣಿತರ ಸಮಿತಿಯನ್ನು ನೇಮಿಸಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅರ್ಜಿದಾರರಿಗೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸುವಂತೆ ತಿಳಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣವನ್ನು ಇಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳನ್ನು ಪರಿಹರಿಸಲು ಹೈಕೋರ್ಟ್ ಸಾಕಷ್ಟು ಶಕ್ತವಾಗಿವೆ. ಆದರೂ ಇದೊಂದು ಮನಕಲುಕುವ ಘಟನೆ ಎಂದು ಅಭಿಪ್ರಾಯಪಟ್ಟಿದೆ.
ಜುಲೈ 2 ರಂದು ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಪುಲಿರೈ ಗ್ರಾಮದಲ್ಲಿ ಸತ್ಸಂಗ ನಡೆಸುತ್ತಿದ್ದ ಭೋಲೆ ಬಾಬಾನ ಕಾರ್ಯಕ್ರಮದಲ್ಲಿ ಕಾಲ್ತುಳಿತವುಂಟಾಗಿ 121 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. 80 ಸಾವಿರ ಮಂದಿ ಪಾಲ್ಗೊಳ್ಳಲು ಅನುಮತಿ ಪಡೆದು 2.5 ಲಕ್ಷ ಜನರನ್ನು ಸೇರಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಹಾಥರಸ್ ಕಾಲ್ತುಳಿತ ದುರಂತ: ಭೋಲೆ ಬಾಬಾಗೆ ಕ್ಲೀನ್ ಚಿಟ್ ನೀಡಿದ ಎಸ್ಐಟಿ
ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸತ್ಸಂಗ ನೀಡುತ್ತಿದ್ದ ಭೋಲೆ ಬಾಬಾನಿಗೆ ಕ್ಲೀನ್ ಚಿಟ್ ನೀಡಿದೆ.
ದುರಂತದಲ್ಲಿ ಎಸ್‌ಐಟಿ ಘಟನೆಗೆ ಆಯೋಜಕರನ್ನು ಪ್ರಮುಖ ಹೊಣೆಗಾರರನ್ನಾಗಿ ಮಾಡಿದೆ. ಸರ್ಕಾರಕ್ಕೆ ಎಸ್‌ಐಟಿ ಸಲ್ಲಿಸಿರುವ ವರದಿಯಲ್ಲಿ ಭೋಲೆ ಬಾಬಾನ ಯಾವುದೇ ಪಾತ್ರವಿಲ್ಲ ಎಂದು ತಿಳಿಸಲಾಗಿದೆ.
ಸತ್ಸಂಗ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಬೋಧನೆ ನೀಡುತ್ತಿದ್ದ ಭೋಲೆ ಬಾಬಾ ತನ್ನ ಪ್ರವಚನವನ್ನು ಮುಗಿಸಿದ ನಂತರ ತೆರಳಲು ಸಿದ್ದವಾಗಿದ್ದ. ಈ ಸಂದರ್ಭದಲ್ಲಿ ಬಾಬಾನ ಪಾದ ಸ್ಪರ್ಶಿಸಲು ಉಂಟಾದ ನೂಕುನುಗ್ಗಲಿನ ಕಾಲ್ತುಳಿತದಲ್ಲಿ ದುರಂತ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಸತ್ಸಂಗ ನಡೆಯುವ ಕಾರ್ಯಕ್ರಮದಲ್ಲಿ ಎಷ್ಟು ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ ಎಂಬುದನ್ನು ಆಯೋಜಕರು ತಿಳಿಸಿರಲಿಲ್ಲ ಎಂದು 850 ಪುಟದ ವರದಿಯಲ್ಲಿ ಹೇಳಲಾಗಿದೆ.
“ಆಯೋಜಕರು ಪಡೆದಿದ್ದ ಅನುಮತಿ ಪತ್ರದಲ್ಲಿ ಷರತ್ತುಗಳನ್ನು ಪಾಲಿಸಿರಲಿಲ್ಲ. ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿರಲಿಲ್ಲ. ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ವಿಸ್ತಾರವಾದ ಜಾಗ ಅಥವಾ ಬ್ಯಾರಿಕೇಡ್ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಅಧಿಕಾರಿಗಳು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡದೆ ಅನುಮತಿ ನೀಡಿದ್ದರು. ಕುತೂಹಲ ಸಂಗತಿ ಎಂದರೆ ವರದಿಯಲ್ಲಿ ಎಲ್ಲಿಯೂ ಭೋಲೆ ಬಾಬಾನನ್ನು ಉಲ್ಲೇಖಿಸಲಾಗಿಲ್ಲ. ಆದರೆ ಆಯೋಜಕರನ್ನು ಮಾತ್ರ ದೋಷಿಸಲಾಗಿದೆ.