ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಸಮಾರಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 123 ಜನರು ಸಾವನ್ನಪ್ಪಿ ಎರಡು ದಿನಗಳು ಕಳೆದಿವೆ. ಆದರೂ, ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ. ಯಾವುದೇ ಗಮನಾರ್ಹ ಕ್ರಮಗಳನ್ನೂ ತೆಗೆದುಕೊಳ್ಳಲಾಗಿಲ್ಲ. ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಮುಖನಾಗಿದ್ದ, ಸಮಾರಮಭದಲ್ಲಿ ಮಾತನಾಡಿದ್ದ ಸ್ವಯಂಘೋಷಿತ ದೇವಮಾನವ ನಾರಾಯಣ ಸಕರ್ ಹರಿ ಪರಾರಿಯಾಗಿದ್ದು, ಅಜ್ಞಾನ ಸ್ಥಳದಲ್ಲಿದ್ದಾರೆ. ಆತ ತಮ್ಮ ವಕೀಲರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.
ತಪ್ಪತಸ್ಥರನ್ನು ಬಿಡುವುದಿಲ್ಲ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿಕೊಂಡಿದ್ದಾರೆ. ಆದರೆ, ಸರ್ಕಾರ ತನಿಖೆಗೆ ಆದೇಶಿಸಿರುವುದರ ಹೊರತಾಗಿ, ಯಾವುದೇ ಕ್ರಮಗಳು ಕಂಡುಬಂದಿಲ್ಲ.
“ಇದುವರೆಗೆ 118 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇನ್ನೂ ಐವರ ಮೃತದೇಹಗಳನ್ನು ಪರೀಕ್ಷಿಸಬೇಕಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸುತ್ತಿದ್ದೇವೆ. ಇಪ್ಪತ್ತು ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಪಾಠಕ್ ಹೇಳಿದ್ದಾರೆ.
ಎಫ್‌ಐಆರ್‌ನಲ್ಲಿ ‘ಭೋಲೆ ಬಾಬಾ’ ಎಂದು ಕರೆಯಲ್ಪಡುವ ನಾರಾಯಣ್ ಸಕರ್ ಹರಿಯನ್ನು ಉಲ್ಲೇಖಿಸಲಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಠಕ್, “ವರದಿ ಬರಲಿ, ಅವರು ಎಷ್ಟೇ ಉತ್ತಮ ಸಂಪರ್ಕ ಹೊಂದಿದ್ದರೂ ಯಾರನ್ನೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಕಾಲ್ತುಳಿತಕ್ಕೆ ಕಾರಣವಾದ ಅಂಶಗಳ ಕುರಿತಂತೆ ಏನನ್ನೂ ಹೇಳದ ಪಾಠಕ್, “ವರದಿ ಬಂದ ನಂತರವೇ ಏನನ್ನಾದರೂ ಹೇಳಲು ಸಾಧ್ಯವಾಗುತ್ತದೆ” ಎಂದಿದ್ದಾರೆ.
ಮಂಗಳವಾರ ಮಧ್ಯಾಹ್ನ ಧೂಳು ಹೆಚ್ಚಾಗಿದ್ದರಿಂದಾಗಿ, ಕಾಲ್ತುಳಿತ ಉಂಟಾಗಿತ್ತು. ಎಫ್ಐಆರ್ ಪ್ರಕಾರ, 80,000 ಜನರನ್ನೊಳಗೊಂಡ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು. ಆದರೆ, 2.5 ಲಕ್ಷ ಜನರು ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಕಾರ್ಯಕ್ರಮದ ನಂತರ ಸ್ವಯಂಘೋಷಿತ ದೇವಮಾನವ ಹೊರಡುವಾಗ, ಆತನ ಅನುಯಾಯಿಗಳ ದೊಡ್ಡ ಗುಂಪು ಅವರ ಕಾರಿನ ಬಳಿ ಬಂದಿತು. ಆತನ ಖಾಸಗಿ ಭದ್ರತಾ ಸಿಬ್ಬಂದಿಗಳು ಜನರನ್ನು ಕಾರಿನಿಂದ ದೂರ ತಳ್ಳಲು ಆರಂಭಿಸಿದರು. ಈ ವೇಳೆ, ಕೆಲವರು ಬಿದ್ದಿದ್ದು, ಅನೇಕರು ಓಡಲು ಆರಂಭಿಸಿದ್ದಾರೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿ 123 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನಾರಾಯಣ್ ಸಕರ್ ಹರಿ ಅವರ ಆಪ್ತ ಸಹಾಯಕ ಮತ್ತು ಕಾರ್ಯಕ್ರಮದ ಮುಖ್ಯ ಸಂಘಟಕ ದೇವಪ್ರಕಾಶ್ ಮಧುಕರ್ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಹತ್ರಾಸ್, ಇಟಾಹ್ ಮತ್ತು ಮೈನ್‌ಪುರಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣವನ್ನು ನ್ಯಾಯಾಂಗ ಸಮಿತಿಯ ತನಿಖೆಗೆ ನೀಡಲಾಗಿದೆ. ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ್ ಅವರ ನೇತೃತ್ವದ ಮೂವರು ಸದಸ್ಯರ ಸಮಿತಿಯು ತನಿಖೆ ನಡೆಸುತ್ತಿದೆ. ಸಮಿತಿಯು ಎರಡು ತಿಂಗಳಲ್ಲಿ ವರದಿ ಸಲ್ಲಿಸುವ ಸಾಧ್ಯತೆ ಇದೆ.