ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಏಳು ಜಿಲ್ಲೆಗಳ ಕೆಲವು ಭಾಗಗಳಲ್ಲಿ ದಿಡೀರ್ ಪ್ರವಾಹ ಉಂಟಾಗುವ ಅಪಾಯವಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮಂಗಳವಾರ ಎಚ್ಚರಿಕೆ ನೀಡಿದೆ.
ಚಂಬಾ, ಕಾಂಗ್ರಾ, ಮಂಡಿ, ಕುಲ್ಲು, ಶಿಮ್ಲಾ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಪ್ರವಾಹ ಅಪಾಯ ಅಧಿಕವಾಗಿದೆ. ಹವಾಮಾನ ಇಲಾಖೆಯು ಈಗಾಗಲೇ ‘ಯೆಲ್ಲೋ’ ಅಲರ್ಟ್ ಅನ್ನು ಕೂಡಾ ಘೋಷಿಸಿದೆ. ಮುಂದಿನ ಸೋಮವಾರದವರೆಗೆ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಇದನ್ನು ಓದಿದ್ದೀರಾ? ಹಿಮಾಚಲ ಪ್ರದೇಶ | ಮಳೆಯ ಅಬ್ಬರ; ಭೂಕುಸಿತಕ್ಕೆ 350 ಮಂದಿ ಬಲಿ
ಹಿಮಾಚಲ ಪ್ರದೇಶದ ತುರ್ತು ಕಾರ್ಯಾಚರಣೆ ಕೇಂದ್ರ(SEOC) ಪ್ರಕಾರ, ರಾಜ್ಯದಲ್ಲಿ 163 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 174 ನೀರು ಸರಬರಾಜು ಯೋಜನೆಗಳ ಮೇಲೆ ಭಾರೀ ಮಳೆಯ ಪ್ರಭಾವ ಉಂಟಾಗಿವೆ.
ಜೂನ್ 1ರಿಂದ ಜುಲೈ 8ರವರೆಗೆ ಹಿಮಾಚಲ ಪ್ರದೇಶದಲ್ಲಿ ವಾಡಿಕೆಯಂತೆ 152.6 ಮಿಮೀ ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಮಂಡಿ ಜಿಲ್ಲೆಯಲ್ಲಿ ಶೇ. 110ರಷ್ಟು, ಶಿಮ್ಲಾ ಶೇ.89 ಮತ್ತು ಉನಾ ಶೇ. 86ರಷ್ಟು ಮಳೆಯಾಗಿದೆ.
ಜೂನ್ 20ರಂದು ಮಾನ್ಸೂನ್ ಹಿಮಾಚಲ ಪ್ರದೇಶವನ್ನು ಅಪ್ಪಳಿಸಿತ್ತು. ಅದಿನಿಂದ ಈವರೆಗೆ ಹಿಮಾಚಲ ಪ್ರದೇಶದಲ್ಲಿ 23 ದಿಢೀರ್ ಪ್ರವಾಹ, 19 ಮೇಘಸ್ಫೋಟ ಮತ್ತು 16 ಭೂಕುಸಿತಗಳು ಸಂಭವಿಸಿದೆ. ರಾಜ್ಯದಲ್ಲಿ ಇದುವರೆಗೆ ಮಳೆಯಿಂದಾಗಿ 52 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಿ ಜಿಲ್ಲೆಯಲ್ಲಿ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ. ಕಳೆದ ವಾರ ತುನಾಗ್, ಗೋಹರ್ ಮತ್ತು ಕರ್ಸೋಗ್ ಉಪವಿಭಾಗಗಳಲ್ಲಿ ನಾಪತ್ತೆಯಾದ 28 ಜನರನ್ನು ಪತ್ತೆಹಚ್ಚಲು ಡ್ರೋನ್‌ಗಳು ಮತ್ತು ಸ್ನಿಫರ್ ನಾಯಿಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
