ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರು ಕಟ್ಟಡ ನಿರ್ಮಾಣ ಕೆಲಸ ಅಥವಾ ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಡಿಎಂಕೆ ಸಂಸದರ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಡಿಎಂಕೆ ಸಂಸದರ ವಿರುದ್ಧ ಮಾತನಾಡದ ಎರಡು ರಾಜ್ಯಗಳ ಇಂಡಿಯಾ ಒಕ್ಕೂಟದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೋದಲ್ಲಿ, ಮಾರನ್ ಇಂಗ್ಲಿಷ್ ಕಲಿತವರನ್ನು ಮತ್ತು ಹಿಂದಿಯನ್ನು ಮಾತ್ರ ಕಲಿತವರನ್ನು ಹೋಲಿಸಿದ್ದಾರೆ. ಮೊದಲಿನವರು ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದರೆ, ಹಿಂದಿ ಕಲಿತವರು ಕೆಳಮಟ್ಟದ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
ಬಿಹಾರದ ಜನರ ಬಗ್ಗೆ ಡಿಎಂಕೆ ಸಂಸದರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪಾಟ್ನಾದ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ಡಿಎಂಕೆ ನಾಯಕರು ಬಿಹಾರದ ಜನರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
“ತಮ್ಮ ‘ಇಂಡಿಯಾ’ ಒಕ್ಕೂಟದ ಸದಸ್ಯರಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರದ ಸ್ಥಿತಿಯಿಂದಾಗಿ ಬಿಹಾರದ ಜನರು ಅಲ್ಲಿಗೆ ಹೋಗಬೇಕಾಗಿದೆ” ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಶೆಹಜಾದ್ ಪೂನಾವಾಲಾ, ‘ಸಂಸದರು ದೇಶದ ಜನರನ್ನು ಜಾತಿ, ಭಾಷೆ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಡಿಎಂಕೆ ಸಂಸದರ ವಿರುದ್ಧ ಇಂಡಿಯಾ ಮೈತ್ರಿಕೂಟ ತಾಳಿರುವ ‘ನಿಷ್ಕ್ರಿಯತೆ’ ಯನ್ನು ಟೀಕಿಸಿದರು.
ಬಿಜೆಪಿ ನಾಯಕ ದಯಾನಿಧಿ ಮಾರನ್ ಬಳಸಿದ ಭಾಷೆಯನ್ನು ‘ದುರದೃಷ್ಟಕರ’ ಎಂದಿರುವ ಶೆಹಜಾದ್ ಪೂನಾವಾಲಾ, ಒಕ್ಕೂಟದ ಇತರ ನಾಯಕರ ಕ್ರಮವನ್ನು ನೋಡಿದಾಗ ಈ ಹೇಳಿಕೆಯು ಕಾಕತಾಳೀಯವಲ್ಲ ಎಂದು ಹೇಳಿದ್ದಾರೆ.
“ದಯಾನಿಧಿ ಮಾರನ್ ಅವರ ಹೇಳಿಕೆಗೆ ಇಂಡಿಯಾ ಒಕ್ಕೂಟದ ನಾಯಕರಾದ ನಿತೀಶ್ ಕುಮಾರ್, ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್, ಕಾಂಗ್ರೆಸ್, ಅಖಿಲೇಶ್ ಯಾದವ್ ಎಲ್ಲರೂ ಸುಮ್ಮನಿದ್ದಾರೆ. ಈ ರೀತಿ ಏನೂ ನಡೆಯುತ್ತಿಲ್ಲ ಎಂದು ನಟಿಸುತ್ತಿದ್ದಾರೆಯೇ? ಅವರು ಯಾವಾಗ ಈ ಬಗ್ಗೆ ತಮ್ಮ ನಿಲುವು ತೆಗೆದುಕೊಳ್ಳುತ್ತಾರೆ?” ಎಂದು ಪೂನಾವಾಲಾ ಪ್ರಶ್ನಿಸಿದ್ದಾರೆ.