ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23ರಂದು ಕೇಂದ್ರ ಸರ್ಕಾರ ರಾಷ್ಟ್ರೀಯ ರಜೆ ದಿನವನ್ನಾಗಿ ಏಕೆ ಘೋಷಿಸಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಪ್ರಯುಕ್ತ ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ, ರಾಜಕೀಯ ಪ್ರಚಾರ ಗಿಟ್ಟಿಸಲು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಜೆ ಘೋಷಿಸಿದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
“ದೇಶಕ್ಕಾಗಿ ಪ್ರಾಣ ಅರ್ಪಿಸಿದ ಮಹಾತ್ಮರ ದಿನದಂದು ರಜೆ ನೀಡದೆ, ರಾಜಕೀಯ ಕಾರ್ಯಕ್ರಮಗಳಿಗೆ ರಜೆ ನೀಡುತ್ತಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನೇತಾಜಿ ಜನ್ಮದಿನದಂದು ರಜೆ ಘೋಷಿಸಬೇಕೆಂದು ಕೇಂದ್ರ ಸರ್ಕಾರದ ವಿರುದ್ಧ ನನ್ನ ಜೀವನವಿಡಿ ಹೋರಾಟ ನಡೆಸಿದೆ.ಆದರೆ ಕ್ಷಮಿಸಿ ನಾನು ಇದರಲ್ಲಿ ಸಫಲನಾಗಲಿಲ್ಲ” ಎಂದು ಮಮತಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್ಸಿ?
ಉತ್ತರ ಪ್ರದೇಶ ಸರ್ಕಾರ ಅಯೊಧ್ಯೆಯ ಪ್ರಾಣ ಪ್ರತಿಷ್ಠಾಪನೆಯ ದಿನ ರಜೆ ಘೋಷಿಸಿತ್ತು. ಹಲವು ರಾಜ್ಯ ಸರ್ಕಾರಗಳು ಜನವರಿ 22ರಂದು ಅರ್ಧ ದಿನ ರಜೆ ಘೋಷಿಸಿದ್ದವು.
ವಕೀಲರು ಹಾಗೂ ದಾವೇದಾರರು ಹಾಜರಾಗದ ಕಾರಣ ನ್ಯಾಯಾಂಗದ ಕೆಲಸವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಬೇಕು ಹಾಗೂ ಯಾವುದೇ ತೀರ್ಪು ನೀಡಬಾರದೆಂದು ಬಾರ್ ಅಸೋಷಿಯೇಷನ್ಗಳು ಕೂಡ ನ್ಯಾಯಾಂಗ ವೇದಿಕೆಗಳಿಗೆ ವಿನಂತಿಸಿಕೊಂಡಿದ್ದವು.