ದೇವಭೂಮಿ ಎಂದೇ ಕರೆಯಲ್ಪಡುವ ಉತ್ತರಾಖಂಡದಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಪ್ರಬಲ ಜಾತಿಯ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ ಕಾರಣಕ್ಕಾಗಿ ದಲಿತ ಸಮುದಾಯದ ಅಮಾಯಕ ಯುವಕನನ್ನು ಬರ್ಬರವಾಗಿ ಹೊಡೆದು ಕೊಂದಿರುವ ದಾರುಣ ಘಟನೆ ನಡೆದಿದೆ. ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಈ ಭೀಕರ ಕೃತ್ಯದಲ್ಲಿ ಮೃತನ ಸ್ನೇಹಿತನಿಗೂ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆ ಸೇರಿಸಲಾಗಿದೆ. ಘಟನೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಮೃತಪಟ್ಟ ದಲಿತ ಯುವಕನನ್ನು ಕೇತನ್ ಲಾಲ್ ಎಂದು ಗುರುತಿಸಲಾಗಿದೆ. ಆತ ಕಳೆದ ಆರು ತಿಂಗಳಿಂದ ಪ್ರಬಲ ಜಾತಿಯ ಯುವತಿಯೊಂದಿಗೆ ಸ್ನೇಹ ಹೊಂದಿದ್ದರು. ಇವರ ಸ್ನೇಹದ ವಿಷಯ ಯುವತಿಯ ಮನೆಯವರಿಗೆ ತಿಳಿದು, ವಿರೋಧ ವ್ಯಕ್ತಪಡಿಸಿದ್ದರು.
ಭಾನುವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಯುವತಿಯು ಕೇತನ್‌ಗೆ ದೂರವಾಣಿ ಕರೆ ಮಾಡಿ ತುರ್ತಾಗಿ ತನ್ನನ್ನು ಭೇಟಿಯಾಗುವಂತೆ ತಿಳಿಸಿದ್ದರು. ಯುವತಿಯ ಕರೆಯನ್ನು ನಂಬಿದ ಕೇತನ್, ತಡರಾತ್ರಿಯಾಗಿದ್ದರಿಂದ ಒಂಟಿಯಾಗಿ ಹೋಗಲು ಹಿಂಜರಿದು ತನ್ನ ಆಪ್ತ ಸ್ನೇಹಿತ ದಿವಾಕರ್ ದಿಮ್ರಿ ಎಂಬಾತನನ್ನು ಜೊತೆಗೆ ಕರೆದುಕೊಂಡು ಆಕೆಯ ಗ್ರಾಮ ಖೋಲ್ಗಢಕ್ಕೆ ತೆರಳಿದ್ದರು ಎಂದು ವರದಿಯಾಗಿದೆ.
ಗ್ರಾಮದಲ್ಲಿ ಅವರಿಗಾಗಿ ಮೊದಲೇ ಹೊಂಚು ಹಾಕಿ ಕಾಯುತ್ತಿದ್ದ ಯುವತಿಯ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು, ಈ ಇಬ್ಬರೂ ಗ್ರಾಮಕ್ಕೆ ಬರುತ್ತಿದ್ದಂತೆಯೇ ಅವರ ಮೇಲೆ ಮುಗಿಬಿದ್ದಿದ್ದಾರೆ. ಕೇತನ್ ಮತ್ತು ದಿವಾಕರ್ ಇಬ್ಬರನ್ನೂ ಎಳೆದೊಯ್ದು ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿ, ಕಬ್ಬಿಣದ ಸರಳು ಹಾಗೂ ಲಾಠಿಗಳಿಂದ ಭೀಕರವಾಗಿ ಥಳಿಸಿದ್ದಾರೆ. ಜಾತಿ ನಿಂದನೆ ಮಾಡುತ್ತಾ ಇಡೀ ರಾತ್ರಿ ಇಬ್ಬರ ಮೇಲೂ ಅತಿಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮರುದಿನ ಸೋಮವಾರ ಬೆಳಿಗ್ಗೆ, ಹಲ್ಲೆ ನಡೆಸಿದ ಯುವತಿಯ ತಂದೆ ಅತ್ಯಂತ ಕ್ರೌರ್ಯದಿಂದ ಕೇತನ್ ತಂದೆ ಧನಪಾಲ್ ಲಾಲ್ ಅವರಿಗೆ ಕರೆ ಮಾಡಿ, “ನಿಮ್ಮ ಮಗ ನಮ್ಮ ಮನೆಯಲ್ಲಿದ್ದಾನೆ, ಬಂದು ಕರೆದುಕೊಂಡು ಹೋಗಿ” ಎಂದು ತಿಳಿಸಿದ್ದಾನೆ. ಗಾಬರಿಯಿಂದ ಧನಪಾಲ್ ತಕ್ಷಣವೇ ಖೋಲ್ಗಢ ಗ್ರಾಮಕ್ಕೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೇತನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರ ರಕ್ತಸ್ರಾವ ಹಾಗೂ ಆಂತರಿಕ ಗಾಯಗಳಿಂದಾಗಿ ಆತ ಹಾದಿಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಲೇಖನ ಓದಿದ್ದೀರಾ?: ವಿಪಕ್ಷಗಳಲ್ಲಿ ಒಡಕು: ಸಂಸತ್ ಮಳೆಗಾಲದ ಅಧಿವೇಶನದಲ್ಲಿ ಮತ್ತೆ ಬರಲಿದೆಯೇ ‘ಡಿಲಿಮಿಟೇಷನ್’ ಮಸೂದೆ?
ಘೋರ ಕೃತ್ಯದಲ್ಲಿ ತೀವ್ರವಾಗಿ ಗಾಯಗೊಂಡಿರುವ ಕೇತನ್ ಸ್ನೇಹಿತ ದಿವಾಕರ್ ದಿಮ್ರಿ ಸದ್ಯ ಬೌರಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆತನಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತನ ಪೋಷಕರು ನೀಡಿದ ದೂರಿನನ್ವಯ ತೆಹ್ರಿ ಗರ್ವಾಲ್ ಪೊಲೀಸರು ಕೊಲೆ (IPC 302) ಹಾಗೂ ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಖ್ಯ ಆರೋಪಿಯಾದ ಯುವತಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಹಲ್ಲೆಕೋರರ ಪತ್ತೆಗಾಗಿ ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.




