ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಕುಟುಂಬಗಳು ತಮ್ಮ ಮಾಸಿಕ ವೆಚ್ಚದಲ್ಲಿ ಹೆಚ್ಚಿನ ಪಾಲನ್ನು ಆಹಾರಕ್ಕಾಗಿ ವೆಚ್ಚ ಮಾಡುತ್ತಿವೆ. ಅದರಲ್ಲೂ, ದಿನನಿತ್ಯ ಅತ್ಯಗತ್ಯವಾಗಿ ಬೇಕಿರುವ ಆಹಾರ ಪದಾರ್ಥಗಳಿಗೆ ಹೆಚ್ಚು ಖರ್ಚಾಗುತ್ತಿದೆ. ಹೆಚ್ಚು ಪೌಷ್ಟಿಕಾಂಶ ನೀಡುವ ಹಣ್ಣು, ಒಣ ಹಣ್ಣುಗಳು, ಮಾಂಸ ಹಾಗೂ ಏಕದಳ ಧಾನ್ಯಗಳ ಖರೀದಿ ತೀರಾ ಕಡಿಮೆಯಿದೆ. ದೇಶದಲ್ಲಿ ಅಸಮಾನತೆಯು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಗೃಹ ಬಳಕೆಯ ವೆಚ್ಚ ಸಮೀಕ್ಷೆ 2022-23ರ ವರದಿ ತೋರಿಸುತ್ತಿದೆ.
ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಗೃಹಬಳಕೆಯ ವೆಚ್ಚ ಸಮೀಕ್ಷೆ (HCES) 2022-23ರ ವಿವರವಾದ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ದೇಶದ ಜನರು ತಮ್ಮ ದುಡಿಮೆಯಲ್ಲಿ ʼಪಾನೀಯಗಳು, ಉಪಾಹಾರ, ಸಂಸ್ಕರಿತ ಆಹಾರ ಪದಾರ್ಥʼಗಳ ಖರೀದಿಗಾಗಿ ಹೆಚ್ಚು ಪಾಲನ್ನು ವ್ಯಯಿಸುತ್ತಿವೆ. ಕೆಲ ರಾಜ್ಯಗಳು ʼಹಾಲು ಮತ್ತು ಹಾಲಿನ ಉತ್ಪನ್ನ’ಗಳಿಗೆ ಹೆಚ್ಚು ವೆಚ್ಚ ಮಾಡುತ್ತಿವೆ. ಕೇರಳ ರಾಜ್ಯ ಮಾತ್ರ, ʼಮೊಟ್ಟೆ, ಮೀನು ಹಾಗೂ ಮಾಂಸ’ವನ್ನು ಅಗತ್ಯ ಇರುವಷ್ಟು ಖರೀದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇದೇ ವರದಿ ಹೇಳುತ್ತಿದೆ.
ಎಲ್ಲ ಪ್ರಮುಖ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕದ ಕುಟುಂಬಗಳು ತಮ್ಮ ಒಟ್ಟು ವೆಚ್ಚದಲ್ಲಿ 25.4% ಹಣವನ್ನು ಪಾನೀಯಗಳು, ಸಂಸ್ಕರಿಸಿದ ಆಹಾರಗಳಿಗಾಗಿ ಖರ್ಚು ಮಾಡುತ್ತಿವೆ. ಹರಿಯಾಣದ ಕುಟುಂಬಗಳು 41.7% ಹಣವನ್ನು ‘ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ’ ಗರಿಷ್ಠ ಖರ್ಚು ಮಾಡಿದ್ದರೆ, ಕೇರಳವು ‘ಮೊಟ್ಟೆ, ಮೀನು ಮತ್ತು ಮಾಂಸ’ಕ್ಕಾಗಿ 23.5% (ಅತಿ ಹೆಚ್ಚು) ಖರ್ಚು ಮಾಡಿದೆ. ನಗರ ಪ್ರದೇಶಗಳಲ್ಲಿಯೂ ಇದೇ ಉದ್ದೇಶಗಳಿಗೆ ಕುಟುಂಬಗಳು ತಮ್ಮ ಗೃಹಬಳಕೆಯ ವೆಚ್ಚದಲ್ಲಿ ಹೆಚ್ಚಿನ ಪಾಲನ್ನು ಇದೇ ಉದ್ದೇಶಗಳಿಗೆ ಹೆಚ್ಚಾಗಿ ಖರ್ಚು ಮಾಡಿವೆ.
ಕರ್ನಾಟಕದಲ್ಲಿ ಪಾನೀಯಗಳು, ಸಂಸ್ಕರಿಸಿದ ಆಹಾರಗಳಿಗಾಗಿ ನಗರ ಭಾಗದಲ್ಲಿನ ವೆಚ್ಚ ಗ್ರಾಮೀಣ ಭಾಗಕ್ಕಿಂತ ಹೆಚ್ಚಾಗಿದೆ. ರಾಜ್ಯದ ನಗರದ ಪ್ರದೇಶಗಳ ಕುಟುಂಬಗಳು ಶೇ.32.9ರಷ್ಟು ಹಣವನ್ನು ಪಾನೀಯ ಮತ್ತು ಸಂಸ್ಕರಿಸಿದ ಆಹಾರಗಳಿಗಾಗಿ ಖರ್ಚು ಮಾಡಿವೆ. ‘ಹಾಲು ಮತ್ತು ಹಾಲಿನ ಉತ್ಪನ್ನಗಳ’ ಮೇಲೆ ರಾಜಸ್ಥಾನ ಶೇ.33.2ರಷ್ಟು ವೆಚ್ಚ ಮಾಡಿದ್ದರೆ, ಹರಿಯಾಣ ಶೇ.33.1, ಪಂಜಾಬ್ ಶೇ.32.3, ಗುಜರಾತ್ ಶೇ.25.5, ಉತ್ತರ ಪ್ರದೇಶ ಶೇ.22.6 ಹಾಗೂ ಮಧ್ಯಪ್ರದೇಶ ಶೇ. 21.5ರಷ್ಟು ಖರ್ಚು ಮಾಡುತ್ತಿವೆ. ʼಮೊಟ್ಟೆ, ಮೀನು ಮತ್ತು ಮಾಂಸ’ಕ್ಕೆ ಸಂಬಂಧಿಸಿದಂತೆ ಕೇರಳವು ಗೃಹಬಳಕೆಯ ಒಟ್ಟು ವೆಚ್ಚದಲ್ಲಿ 19.8% ಪಾಲನ್ನು ವ್ಯಯಿಸುತ್ತಿದೆ.
‘ಪಾನೀಯಗಳು, ಸಂಸ್ಕರಿತ ಆಹಾರ ಇತ್ಯಾದಿ’ ಖರೀದಿಯಲ್ಲಿ ಎಲ್ಲ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡು ಅಗ್ರಸ್ಥಾನದಲ್ಲಿದೆ. ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಶೇ.28.4 ಮತ್ತು ನಗರ ಪ್ರದೇಶಗಳಲ್ಲಿ ಶೇ.33.7ರಷ್ಟು ಹಣವನ್ನು ಪಾನೀಯ ಮತ್ತು ಸಂಸ್ಕರಿತ ಆಹಾರಕ್ಕಾಗಿ ವ್ಯಯಿಸಲಾಗುತ್ತಿದೆ.
ಗ್ರಾಮೀಣ ಭಾರತದಲ್ಲಿ, ಕುಟುಂಬಗಳ ಗೃಹಬಳಕೆಯ ವೆಚ್ಚದಲ್ಲಿ ಸುಮಾರು 46% ಪಾಲನ್ನು ಆಹಾರ ಹೊಂದಿದೆ. ಅದರಲ್ಲಿ, ‘ಪಾನೀಯಗಳು, ಉಪಾಹಾರಗಳು ಮತ್ತು ಸಂಸ್ಕರಿಸಿದ ಆಹಾರ’ಗಳಿಗೆ ಅತ್ಯಧಿಕವಾಗಿ ಸರಾಸರಿ 9.62%, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ 8.33%, ತರಕಾರಿಗೆ 5.38% ಹಾಗೂ ಧಾನ್ಯಗಳಿಗಾಗಿ 4.91% ವೆಚ್ಚವಾಗುತ್ತಿದೆ.
ನಗರಪ್ರದೇಶದಲ್ಲಿ, ಗೃಹಬಳಕೆಯ ವೆಚ್ಚದಲ್ಲಿ ಸುಮಾರು 39% ಆಹಾರಕ್ಕೆ ವೆಚ್ಚವಾಗುತ್ತಿದೆ. ‘ಪಾನೀಯಗಳು, ಉಪಾಹಾರಗಳು ಮತ್ತು ಸಂಸ್ಕರಿತ ಆಹಾರ’ಗಳಿಗೆ 10.64% ವೆಚ್ಚವಾದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ 7.22% ಹಾಗೂ ಹಣ್ಣುಗಳು ಮತ್ತು ತರಕಾರಿಗಳಿಗೆ ತಲಾ 3.8%ರಷ್ಟು ಹಣವನ್ನು ವ್ಯಯಿಸಲಾಗುತ್ತಿದೆ. ಹಣ್ಣು, ತರಕಾರಿ ಮೇಲಿನ ವೆಚ್ಚ ಅತೀ ಕಡಿಮೆ ಇರುವುದು ಪೌಷ್ಟಿಕಾಂಶಯುಕ್ತ ಆಹಾರದ ಬಳಕೆ ಕಡಿಮೆ ಇದೆ ಎಂಬುದನ್ನು ಸೂಚಿಸುತ್ತದೆ.
ಆಹಾರೇತರ ವಸ್ತುಗಳ ಮೇಲೆ ಬಳಕೆಯ ಖರ್ಚು
ಆಹಾರೇತರ ವಸ್ತುಗಳ ಪೈಕಿ, ಬಹುತೇಕ ಎಲ್ಲ ಪ್ರಮುಖ ರಾಜ್ಯಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಗೃಹೋಪಯೋಗಿ ವಸ್ತುಗಳ ಮೇಲಿನ ವೆಚ್ಚವು ಮೊದಲ ಸ್ಥಾನದಲ್ಲಿದೆ. ಬಾಳಿಕೆ ಬರುವ ಸರಕುಗಳು ಹಾಗೂ ಪ್ರಯಾಣಕ್ಕೆ ಹೆಚ್ಚು ವೆಚ್ಚವಾಗುತ್ತಿದೆ. ನಂತರದಲ್ಲಿ, ಮನರಂಜನೆ, ವೈದ್ಯಕೀಯ ವೆಚ್ಚಗಳು, ಇಂಧನ ಮತ್ತು ವಿದ್ಯುತ್ ಮೇಲಿನ ಖರ್ಚುಗಳು ಗಮನಾರ್ಹ ಪಾಲನ್ನು ಹೊಂದಿವೆ.
ಗ್ರಾಮೀಣ ಭಾರತದಲ್ಲಿ, ಆಹಾರೇತರ ವಸ್ತುಗಳ ಪೈಕಿ ‘ಸಂಚಾರ/ಪ್ರಯಾಣ’ವು ವೆಚ್ಚದ ಅತಿ ಹೆಚ್ಚು ಪಾಲನ್ನು ಹೊಂದಿದೆ. ಕೇರಳ (ಶೇ. 18.9), ತಮಿಳುನಾಡು (ಶೇ.18), ಗುಜರಾತ್ (ಶೇ. 16.6), ಪಂಜಾಬ್ (ಶೇ. 16.3), ಮಹಾರಾಷ್ಟ್ರ (ಶೇ. 16) ಹಾಗೂ ಕರ್ನಾಟಕ (ಶೇ. 15.6) ಪಾಲನ್ನು ಪ್ರಯಾಣಕ್ಕೆ ವ್ಯಯಿಸುತ್ತಿವೆ. ನಗರ ಪ್ರದೇಶಗಳಲ್ಲಿ, ಕೇರಳ (ಶೇ.16.6), ತಮಿಳುನಾಡು (ಶೇ. 16.1), ಛತ್ತೀಸ್‌ಗಢ (ಶೇ. 16), ಗುಜರಾತ್ (ಶೇ. 15.7) ರಾಜಸ್ಥಾನ (ಶೇ. 15.6) ಹಾಗೂ ಕರ್ನಾಟಕ (ಶೇ. 13.6)ಅನ್ನು ಸಂಚಾರಕ್ಕೆ ವ್ಯಯಿಸುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿನ ಆಹಾರೇತರ ವಸ್ತುಗಳ ಬಳಕೆಯ ವೆಚ್ಚದಲ್ಲಿ 13.3% ರಷ್ಟು ಪಾಲನ್ನು ವೈದ್ಯಕೀಯ ವೆಚ್ಚವು ಪಡೆದುಕೊಂಡಿದೆ. ಕೇರಳ (17.9%), ಪಶ್ಚಿಮ ಬಂಗಾಳ (16.8%), ಆಂಧ್ರಪ್ರದೇಶ (16.6%) ಹಾಗೂ ಕರ್ನಾಟಕದಲ್ಲಿ 12.4% ಪಾಲು ವೈದ್ಯಕೀಯ ವೆಚ್ಚದ್ದಾಗಿದೆ. ಅದೇ ರೀತಿ, ನಗರಪ್ರದೇಶದಲ್ಲಿ, ಪಶ್ಚಿಮ ಬಂಗಾಳ (15%), ಕೇರಳ (14.4%) ಹಾಗೂ ಪಂಜಾಬ್ (12.4%) ಅತಿ ಹೆಚ್ಚು ವೈದ್ಯಕೀಯ ವೆಚ್ಚವನ್ನು ಹೊಂದಿವೆ. ಕರ್ನಾಟಕದ ನಗರ ಭಾಗವು ವೈದ್ಯಕೀಯಕ್ಕಾಗಿ 7.4% ಪಾಲನ್ನು ವ್ಯಯಿಸುತ್ತಿದೆ.
ಬಾಳಿಕೆ ಬರುವ ವಸ್ತುಗಳ ಬಳಕೆಯ ವೆಚ್ಚವು ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಪೈಕಿ ಕೇರಳದಲ್ಲಿ ಅತ್ಯಧಿಕವಾಗಿದೆ. ಇಂಧನ ಮತ್ತು ವಿದ್ಯುತ್ ಮೇಲೆ ಪಶ್ಚಿಮ ಬಂಗಾಳದ ಕುಟುಂಬಗಳು ಹೆಚ್ಚು ವ್ಯಯಿಸುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ 2022-23ರಲ್ಲಿ ಆಹಾರೇತರ ವಸ್ತುಗಳ ಮೇಲಿನ ವೆಚ್ಚವು 50% ದಾಟಿದೆ. ಆಹಾರ ಪದಾರ್ಥಗಳ ಮೇಲಿನ ವೆಚ್ಚವು 50%ಗಿಂತ ಕಡಿಮೆಯಾಗಿದೆ. ಅದರಲ್ಲೂ ಆಹಾರ ಪದಾರ್ಥಗಳ ಖರೀದಿಯಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳ ಖರೀದಿಯಲ್ಲಿನ ವೆಚ್ಚ ಕಡಿಮೆ ಇದೆ.
ಸಂಖ್ಯೆಯಲ್ಲಿ ಹೇಳುವುದಾದರೆ, ಗ್ರಾಮೀಣ ಪ್ರದೇಶದಲ್ಲಿ ಆಹಾರೇತರ ವಸ್ತುಗಳ ಮೇಲಿನ ಮಾಸಿಕ ತಲಾವಾರು ವೆಚ್ಚವು 2022-23ರಲ್ಲಿ 53.62%ಗೆ ಏರಿಕೆಯಾಗಿದೆ. ಇದು 2011-12ರಲ್ಲಿ 47.1%, 2009-10ರಲ್ಲಿ 43.02%, 2004-05ರಲ್ಲಿ 46.89% ಹಾಗೂ 1999-2000ರಲ್ಲಿ 40.6% ಇತ್ತು. ನಗರ ಪ್ರದೇಶಗಳಲ್ಲಿ, ಒಟ್ಟು ವೆಚ್ಚದಲ್ಲಿ ಆಹಾರೇತರ ವಸ್ತುಗಳ ಪಾಲು ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಿದ್ದು, 2022-23ರಲ್ಲಿ 60.83% ಇದೆ. ಇದು, 2011-12ರಲ್ಲಿ 57.38%, 2009-10ರಲ್ಲಿ 55.61%, 2004-05ರಲ್ಲಿ 59.49% ಹಾಗೂ 1999-2000ರಲ್ಲಿ 51.94% ಇತ್ತು.
ಗ್ರಾಮೀಣ ಸರಾಸರಿ ಮಾಸಿಕ ಬಳಕೆಯ ವೆಚ್ಚವು 2011-12ರಲ್ಲಿ ಪ್ರತಿ ವ್ಯಕ್ತಿಗೆ 1,430 ರೂ. ಇತ್ತು. ಇದು 2022-23ರಲ್ಲಿ 3,773 ರೂ.ಗೆ ಏರಿಕೆಯಾಗಿದೆ. ಇದು, ನಗರ ಪ್ರದೇಶದಲ್ಲಿ 2011-12ರಲ್ಲಿ ಪ್ರತಿ ವ್ಯಕ್ತಿಗೆ 2,630 ರೂ. ಇತ್ತು. 2022-23ರಲ್ಲಿ 6,459 ರೂ.ಗೆ ಏರಿಕೆಯಾಗಿದೆ ಎಂದು ಫೆಬ್ರವರಿಯಲ್ಲಿ ಬಿಡುಗಡೆಯಾದ ಎಚ್‌ಸಿಇಎಸ್ ಸಮೀಕ್ಷೆಯ ವರದಿ ಹೇಳಿದೆ.
ಅದಾಗ್ಯೂ, ಬೆಲೆ ಏರಿಕೆ, ಹಣದುಬ್ಬರ ಹೆಚ್ಚಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಗ್ರಾಮೀಣ ಪ್ರದೇಶದಲ್ಲಿ 3,000 ರೂ. ಹಾಗೂ ನಗರ ಪ್ರದೇಶದಲ್ಲಿ 6,000 ರೂಪಾಯಿಯಲ್ಲಿ ಜೀವನ ಸಾಗಿಸುವುದು ಅತ್ಯಂತ ಕಠಿಣ ಎಂಬುದು ಸ್ಪಷ್ಟ.
ಇದು, ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಅಸಮಾನತೆ ಹೆಚ್ಚಿದೆ ಎಂಬುದನ್ನು ಸೂಚಿಸುತ್ತಿದೆಯಲ್ಲವೇ?