ಪ್ರಧಾನಿ ನರೇಂದ್ರ ಮೋದಿ ಏ.21 ರಂದು ರಾಜಸ್ಥಾನದಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಂತೆ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ತಾಯಿ, ತಂಗಿಯ ಬಂಗಾರವನ್ನು ಹಾಗೂ ನಿಮ್ಮ ಮಂಗಳಸೂತ್ರವನ್ನು ಬಿಡದೆ ಮುಸ್ಲಿಂ ಸಮುದಾಯದವರಿಗೆ ಹಂಚುತ್ತಾರೆ ಎಂದು ಹೇಳಿದ್ದರು.
ಪ್ರಧಾನಿಯ ಹೇಳಿಕೆಯನ್ನು ಖಂಡಿಸಿದ್ದ ಕಾಂಗ್ರೆಸ್ ಸುಳ್ಳು ಹಾಗೂ ದ್ವೇಷ ಭಾಷಣದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿತ್ತು.
ದೇಶದ ಹಲವು ಧಾರ್ಮಿಕ ಸಮುದಾಯಗಳಲ್ಲಿ ಬಂಗಾರವು ಒಳಗೊಂಡು ಸಂಪತ್ತು, ಆಸ್ತಿ ಎಷ್ಟು ಹೊಂದಿದ್ದಾರೆ ಎಂಬ ಬಗ್ಗೆ ಇತ್ತೀಚಿನ ಯಾವುದೇ ವಿವರಗಳಿಲ್ಲ ಅಥವಾ ನಿರ್ದಿಷ್ಟ ಅಂಕಿಅಂಶಗಳು ಲಭ್ಯವಿಲ್ಲ. ಆದರೆ ಐಸಿಎಸ್‌ಎಸ್‌ಆರ್ ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಯಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್ ಅವರು 2020ರಲ್ಲಿ ಪ್ರಕಟಿಸಿದ ‘ಭಾರತದ ಸಂಪತ್ತಿನ ಮಾಲಿಕತ್ವದಲ್ಲಿನ ಅಂತರ್ ಸಮುದಾಯ ಅಸಮಾನತೆಯ ಅಧ್ಯಯನ ವರದಿ’ ಯಲ್ಲಿ ಕೆಲವು ಸಂಬಂಧಿತ ಅಂಕಿಅಂಶಗಳು ಲಭ್ಯವಿದೆ.
ಈ ವರದಿಯನ್ನು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ(ಎನ್‌ಎಸ್‌ಎಸ್‌ಒ) ಹಾಗೂ ಭಾರತದ ಆರ್ಥಿಕ ಜನಗಣತಿ ನಡೆಸಿದ ಅಖಿಲ ಭಾರತ ಸಾಲ ಹಾಗೂ ಹೂಡಿಕೆ ಸಮೀಕ್ಷೆಯಿಂದ ಬಳಸಿಕೊಂಡ ಅಂಕಿಅಂಶದಿಂದ ಪತ್ತೆ ಹಚ್ಚಲಾಗಿದೆ. ಈ ಅಂಕಿಅಂಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯಗಳು ಅತಿ ಕಡಿಮೆ ಮಾಲೀಕತ್ವದ ಸಂಪತ್ತನ್ನು ಹೊಂದಿದೆ ಎಂದು ತಿಳಿಸಿದೆ.
ಭಾರತದಲ್ಲಿ ಯಾವ ಸಮುದಾಯ ಎಷ್ಟು ಸಂಪತ್ತು ಹೊಂದಿದೆ?
ಈ ವರದಿಯ ಪ್ರಕಾರ ಹಿಂದೂ ಸಮುದಾಯದ ಪ್ರಬಲ ಜಾತಿಗಳು ಒಟ್ಟು ದೇಶದ ಸಂಪತ್ತಿನಲ್ಲಿ ಶೇ.41 ರಷ್ಟು ಹೊಂದಿದ್ದರೆ, ಇತರೆ ಒಬಿಸಿ ಸಮುದಾಯ ಶೇ.31 ರಷ್ಟು ಆಸ್ತಿ ಹೊಂದಿದೆ. ನಂತರದಲ್ಲಿ ಮುಸ್ಲಿಂ ಶೇ.8, ಎಸ್‌ಸಿ ಶೇ.7.3 ಹಾಗೂ ಎಸ್‌ಟಿ ಶೇ. 3.7 ರಷ್ಟು ಸಂಪತ್ತು ಪಡೆದಿವೆ.
ಹಿಂದೂ ಪ್ರಬಲ ಜಾತಿಗಳ ಕುಟುಂಬಗಳು ಭಾರತದ ಸಂಪತ್ತಿನಲ್ಲಿ ಶೇ.22.2 ರಷ್ಟು ಹೊಂದಿದೆ. ನಂತರದಲ್ಲಿ ಒಬಿಸಿ ಸಮುದಾಯ ಶೇ.35.8, ಮುಸ್ಲಿಂ ಸಮುದಾಯ ಶೇ. 12.1, ಎಸ್‌ಸಿ ಶೇ.17.9 ಹಾಗೂ ಎಸ್‌ಟಿ ಸಮುದಾಯದ ಕುಟುಂಬಗಳು ಶೇ. 9.1 ಆಸ್ತಿ ಹೊಂದಿವೆ.
ಒಟ್ಟು ಸಂಪತ್ತು ಮೌಲ್ಯದ ವರದಿಯನ್ನು ಅಂದಾಜಿಸಿದರೆ ಹಿಂದೂ ಸಮುದಾಯದ ಪ್ರಬಲ ಜಾತಿಗಳು 1,46,394 ಬಿಲಿಯನ್ ಕೋಟಿ ರೂ. ಆಸ್ತಿಯನ್ನು ಹೊಂದಿವೆ. ಇದು ಎಸ್‌ಟಿ ಸಮುದಾಯಗಳ 11 ಪಟ್ಟು ಹೆಚ್ಚಿದೆ. ಎಸ್‌ಟಿ ಸಮುದಾಯಗಳು 13,268 ಬಿಲಿಯನ್ ರೂ. ಸಂಪತ್ತು ಹೊಂದಿವೆ. ಮುಸ್ಲಿಂ ಸಮುದಾಯದ ಸಂಪತ್ತು 28,707 ಬಿಲಿಯನ್‌ನಷ್ಟಿದೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಬೆಲೆಗಳಲ್ಲಿ ಸಾಮಾಜಿಕ ಸಮುದಾಯಗಳ ಒಡೆತನದ ಒಟ್ಟು ಸಂಪತ್ತು (ಬಿಲಿಯನ್ ರೂ.ಗಳಲ್ಲಿ)
ಮೂಲ: ಎಐಎಡಿಎಸ್ 2013; ಭಾರತದ ಸಂಪತ್ತಿನ ಮಾಲೀಕತ್ವದಲ್ಲಿ ಅಂತರ್ ಸಮುದಾಯಗಳ ಅಸಮಾನತೆಯ ಅಧ್ಯಯನ ವರದಿ, 2020
ಪ್ರತಿ ಮನೆಯ ಸಂಪತ್ತಿನ ಮಾಲೀಕತ್ವದ ಚಿತ್ರಣ ಎಷ್ಟಿದೆ?
ಪ್ರತಿ ಮನೆಯ ಮಾಲಿಕತ್ವದ ಸಂಪತ್ತಿನ ಸರಾಸರಿ ರೂ.15.04 ಲಕ್ಷ, ಆದರೆ ಸಮುದಾಯಗಳ ಗುಂಪುಗಳ ನಡುವೆ ಗಮನಾರ್ಹ ಏರುಪೇರುಗಳಿವೆ. ಅಂದರೆ ಒಂದೇ ಸಮುದಾಯದ ಒಂದು ಕುಟುಂಬದ ಬಳಿ 1 ಕೋಟಿ ರೂ. ಆಸ್ತಿ ಇದ್ದರೆ, ಅದೇ ಸಮುದಾಯದ ಇನ್ನೊಂದು ಕುಟುಂಬದ ಬಳಿ 1 ಲಕ್ಷ ರೂ. ಇರುತ್ತದೆ. ಇದೆಲ್ಲವನ್ನು ಕೂಡಿ ಸಮಗ್ರವಾಗಿ ವರದಿ ತಯಾರಿಸಲಾಗಿದೆ.
ಹಿಂದೂ ಪ್ರಬಲ ಜಾತಿಗಳ ಪ್ರತಿ ಮನೆಯ ಮಾಲೀಕತ್ವದ ಸರಾಸರಿ ಸಂಪತ್ತು 27.73 ಲಕ್ಷ ರೂ. ಒಬಿಸಿ ಸಮುದಾಯದ ಸಂಪತ್ತು 12.96 ಲಕ್ಷ ರೂ. ಇದೆ. ಪ್ರತಿ ಮನೆಯ ಸರಾಸರಿ ಸಂಪತ್ತಿನಲ್ಲಿ ಮುಸ್ಲಿಂ ಸಮುದಾಯ 9.95 ಲಕ್ಷ ರೂ., ಎಸ್‌ಟಿ ಸಮುದಾಯ 6.13 ಲಕ್ಷ ರೂ. ಹಾಗೂ ಎಸ್‌ಸಿ ಸಮುದಾಯ 6.13 ಲಕ್ಷ ರೂ. ಹೊಂದಿದೆ ಎಂದು ವರದಿ ಹೇಳುತ್ತದೆ.
ಪ್ರಸ್ತುತ ಬೆಲೆಗಳಲ್ಲಿ ಭಾರತದ ಸಾಮಾಜಿಕ ಹಾಗೂ ಧಾರ್ಮಿಕ ಸಮುದಾಯಗಳು ಹೊಂದಿರುವ ಪ್ರತಿ ಮನೆಯ ಮಾಲಿಕತ್ವದ ಸಂಪತ್ತು(ರೂ.ಗಳಲ್ಲಿ)
ಮೂಲ: ಎಐಎಡಿಎಸ್ 2013; ಭಾರತದ ಸಂಪತ್ತಿನ ಮಾಲೀಕತ್ವದಲ್ಲಿ ಅಂತರ್ ಸಮುದಾಯಗಳ ಅಸಮಾನತೆಯ ಅಧ್ಯಯನ ವರದಿ, 2020
ಹೆಚ್ಚು ಬಂಗಾರ ಹೊಂದಿರುವ ಸಾಮಾಜಿಕ ಗುಂಪು ಯಾವುದು?
ಅಧ್ಯಯನದ ವರದಿಯ ಪ್ರಕಾರ, ಹಿಂದೂ ಒಬಿಸಿ ಸಮುದಾಯ ಶೇ.39.1ರೊಂದಿಗೆ ಹೆಚ್ಚು ಬಂಗಾರವನ್ನು ಹೊಂದಿದೆ. ಹಿಂದೂ ಪ್ರಬಲ ಜಾತಿಗಳು ಶೇ.31.3 ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಸ್ಲಿಂ ಸಮುದಾಯ ಶೇ.9.2 ಹಾಗೂ ಎಸ್‌ಟಿ ಸಮುದಾಯ ಶೇ.3.4 ರಷ್ಟು ಚಿನ್ನ ಹೊಂದಿದೆ.
ಸಾಮಾಜಿಕ-ಧಾರ್ಮಿಕ ಗುಂಪುಗಳಲ್ಲಿರುವ ವಿವಿಧ ರೀತಿಯ ಸಂಪತ್ತಿನ ಪಾಲು (ಶೇಕಡವಾರಿನಲ್ಲಿ)
ಮೂಲ: ಎಐಎಡಿಎಸ್ 2013; ಭಾರತದ ಸಂಪತ್ತಿನ ಮಾಲೀಕತ್ವದಲ್ಲಿ ಅಂತರ್ ಸಮುದಾಯಗಳ ಅಸಮಾನತೆಯ ಅಧ್ಯಯನ ವರದಿ, 2020
