ಉತ್ತರ ಪ್ರದೇಶದ ರೈಲು ನಿಲ್ದಾಣದ ಬಳಿ ಇರುವ ಓವರ್ಹೆಡ್ ವಿದ್ಯುತ್ ತಂತಿಗಳಲ್ಲಿ ಭ್ರೂಣ ಪತ್ತೆಯಾಗಿದೆ. ಭ್ರೂಣ ತಂತಿಯಲ್ಲಿ ನೇತಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಹಜನ್ವಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ -2ರ ಹಿಂಭಾಗದ ಕೇಶವಪುರ ವಿದ್ಯುತ್ ಸಬ್‌ಸ್ಟೇಷನ್ ಬಳಿ ಭ್ರೂಣ ಪತ್ತೆಯಾಗಿದೆ. 20 ಅಡಿ ಎತ್ತರದಲ್ಲಿ ಭ್ರೂಣ ನೇತಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದುರ್ಗೆ ಕಾಳಿಯರನ್ನ ಪೂಜಿಸ್ತೀರಿ, ಹೆಣ್ಣು ಭ್ರೂಣಗಳನ್ನೇಕೆ ಕೊಲ್ಲುತ್ತೀರಿ?
ಭ್ರೂಣವು ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ ನಂತರ, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಅಧಿಕಾರಿಗಳು ಭ್ರೂಣವನ್ನು ತಂತಿಯಿಂದ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶ್ರೀವಾಸ್ತವ, “ನಾವು ಸಿಸಿಟಿವಿ ಪರಿಶೀಲಿಸುತ್ತಿದ್ದೇವೆ. ಸಮೀಪದ ಎಲ್ಲಾ ಮನೆಗಳಲ್ಲಿ ವಿಚಾರಣೆ ನಡೆಸುತ್ತಿದ್ದೇವೆ. ಭ್ರೂಣವನ್ನು ಹತ್ತಿರದ ರೈಲ್ವೆ ಬದಿಯ ಕಟ್ಟಡದಿಂದ ಎಸೆಯಲಾಗಿರುವ ಸಾಧ್ಯತೆಯಿದೆ. ಆದರೆ ಅದನ್ನು ಖಚಿತಪಡಿಸಲು ನಾವು ತನಿಖೆ ನಡೆಸುತ್ತೇವೆ” ಎಂದು ತಿಳಿಸಿದರು.
