ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳಿವೆ. ಈ ನಡುವೆ ಮುಸ್ಲಿಂ ಮತಗಳನ್ನು ವಿಭಜಿಸುವ ನಿಟ್ಟಿನಲ್ಲಿ ಮಾಜಿ ಟಿಎಂಸಿ ಮುಖಂಡ ಮತ್ತು ಆಮ್ ಜನತಾ ಉನ್ನಾಯನ್ ಪಕ್ಷದ (AJUP) ಮುಖ್ಯಸ್ಥ ಹುಮಾಯೂನ್ ಕಬೀರ್ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ‘ಸ್ಟಿಂಗ್ ವಿಡಿಯೋ’ ಭಾರೀ ವೈರಲ್ ಆಗುತ್ತಿದೆ. ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಈ ವಿಡಿಯೋ ತೀವ್ರ ಸಂಚಲನ ಮೂಡಿಸಿದ್ದು, ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷದೊಂದಿಗೆ ಮೈತ್ರಿ ಮುರಿದುಬಿದ್ದಿದೆ.
ಹಲವಾರು ಬಾರಿ ಪಕ್ಷಾಂತರ ಮಾಡಿಕೊಂಡು ಕಳೆದ ವರ್ಷ ಬಾಬ್ರಿ ಮಸೀದಿ ಮಾದರಿಯ ಮಸೀದಿ ನಿರ್ಮಾಣದ ಪ್ರಸ್ತಾವನೆ ಮುಂದಿಟ್ಟು ವಿವಾದ ಸೃಷ್ಟಿಸಿದ್ದವರು ಕಬೀರ್. ಈ ಕಾರಣಕ್ಕಾಗಿ 2025ರ ಡಿಸೆಂಬರ್ನಲ್ಲಿ ಟಿಎಂಸಿಯಿಂದ ಅಮಾನತುಗೊಂಡಿದ್ದರು. ಅದೇ ತಿಂಗಳು ತನ್ನ ಹೊಸ ಪಕ್ಷವನ್ನು ಸ್ಥಾಪಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕಬೀರ್ ಪಕ್ಷದ ಜತೆಗೆ ಅಸಾದುದ್ದೀನ್ ಓವೈಸಿ ಪಕ್ಷ ಮೈತ್ರಿ ಮಾಡಿಕೊಂಡಿತ್ತು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಕೋಮು ವಿಭಜನೆ; ಚುನಾವಣೆಗೂ ಮುನ್ನ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ!
ಚುನಾವಣೆ ಪ್ರಚಾರ ನಡೆಯುತ್ತಿರುವ ನಡುವೆ ಹುಮಾಯೂನ್ ಕಬೀರ್ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಮುಸ್ಲಿಮರ ಮತಗಳನ್ನು ವಿಭಜಿಸಲು ₹1,000 ಕೋಟಿ ಡೀಲ್ ಕುರಿತು ಮಾತನಾಡಿದ್ದಾರೆ ಎಂಬ ಸ್ಟಿಂಗ್ ಆಪರೇಷನ್ ವಿಡಿಯೋವೊಂದನ್ನು ಟಿಎಂಸಿ ಬಿಡುಗಡೆ ಮಾಡಿದೆ.
ವಿಡಿಯೋದಲ್ಲಿ ಕಬೀರ್ ಅವರು ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುತ್ತಾ, ತಾವು ಬಿಜೆಪಿಯ ಸುವೇಂದು ಅಧಿಕಾರಿ ಅವರೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿರುವುದು ಕಾಣಬಹುದು. ಚುನಾವಣೆಯ ನಂತರ ಬಿಜೆಪಿ ಸರ್ಕಾರ ರಚಿಸಲು ಬೆಂಬಲ ನೀಡಿದರೆ ತಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಸುವೇಂದು ಭರವಸೆ ನೀಡಿರುವುದಾಗಿಯೂ ಕಬೀರ್ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ “ಮುಸ್ಲಿಮರನ್ನು ಮೂರ್ಖರನ್ನಾಗಿಸುವುದು ಸುಲಭ” ಎಂಬ ವಿವಾದಾತ್ಮಕ ಹೇಳಿಕೆಯೂ ಈ ಸ್ಟಿಂಗ್ ವಿಡಿಯೋದಲ್ಲಿದೆ. ಈ ವಿಡಿಯೋ ಸದ್ಯ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಈ ಬಗ್ಗೆ ಇಸ್ಲಾಂಪುರದಲ್ಲಿ ಮಾತನಾಡಿದ ಕಬೀರ್ “ಸಿಎಂ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ” ಎಂದು ದೂರಿದ್ದಾರೆ. ಹಾಗೆಯೇ ಈ ವಿಡಿಯೋ ಪಿತೂರಿ” ಎಂದು ಆರೋಪಿಸಿದ್ದಾರೆ. ಅಷ್ಟು ಮಾತ್ರವಲ್ಲದೆ “ಡಿಸೆಂಬರ್ 19ರ ವಿಡಿಯೋವನ್ನು ಏಪ್ರಿಲ್ 8ರಂದು ವೈರಲ್ ಮಾಡಲಾಗುತ್ತಿದೆ. ಇಷ್ಟು ದಿನ ಸಿಎಂ ಮಮತಾ ಏನು ಮಾಡುತ್ತಿದ್ದರು” ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಈ ಸ್ಟಿಂಗ್ ವಿಡಿಯೋ ಅಸಲಿ ಎಂದು ಒಪ್ಪಿಕೊಂಡಿದ್ದಾರೆ. ಮತ್ತೆ “ಇದು ಎಐ ರಚಿತ ವಿಡಿಯೋ. ಹೈಕೋರ್ಟ್ನಲ್ಲಿ ಉತ್ತರಿಸುತ್ತೇನೆ” ಎಂದೂ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಮುಸ್ಲಿಮರ ಓಲೈಕೆಗೆ ಬಿಜೆಪಿ ತಂತ್ರ-ಕುತಂತ್ರ
ಇನ್ನು ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಟಿಎಂಸಿ ಶಾಸಕ ಅರಿಂದಮ್ ಗುಯಿನ್, “ಕಬೀರ್ ದೇಶದ್ರೋಹಿ. ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ” ಎಂದು ಹೇಳಿದ್ದಾರೆ. ಇನ್ನು ಓವೈಸಿ ಪಕ್ಷವು, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಸಾಮಾಜಿಕ-ಆರ್ಥಿಕ ಅಂಚಿನಲ್ಲಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಇನ್ನು ಬಿಜೆಪಿಯ ‘ಸಂಕಲ್ಪ ಪತ್ರ’ವನ್ನು ಅನಾವರಣಗೊಳಿಸಿದ ನಂತರ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಬೀರ್ ಜತೆಗಿನ ಸಂಪರ್ಕವನ್ನು ಅಲ್ಲಗಳೆದರು. “ಹುಮಾಯೂನ್ ಕಬೀರ್ ಮತ್ತು ಬಿಜೆಪಿ ಎರಡು ವಿರುದ್ಧ ಧ್ರುವಗಳು. ಅಂತಹ ಪಕ್ಷದೊಂದಿಗೆ ಒಪ್ಪಂದ ಮಾಡುವುದಕ್ಕಿಂತ ನಾವು ವಿಪಕ್ಷದಲ್ಲಿ ಕೂರುವುದೇ ಒಳ್ಳೆಯದು” ಎಂದು ಹೇಳಿದ್ದಾರೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಎಣಿಕೆ ನಡೆಯಲಿದೆ.
ಈ ಹಿಂದೆಯೂ ಇದ್ದ ಅನುಮಾನ
ಬಿಜೆಪಿ ತೊರೆದು ಟಿಎಂಸಿ ಸೇರಿ ಬಳಿಕ ಟಿಎಂಸಿಯಿಂದಲೂ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ‘ಬಾಬರಿ ಮಸೀದಿ ಶೈಲಿಯ’ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗಲೇ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಸುದ್ದಿ ಹರಡಿತ್ತು. ಕಬೀರ್ ಅವರ ಈ ಧೋರಣೆಯು ಮುಸ್ಲಿಂ ಮತಗಳನ್ನು ವಿಪಕ್ಷಗಳಿಂದ ಬೇರೆಡೆಗೆ ತಿರುಗಿಸುವ ಬಿಜೆಪಿಯ ಚುನಾವಣಾ ತಂತ್ರದ ಭಾಗವೇ ಎಂಬ ಅನುಮಾನವನ್ನು ಹುಟ್ಟುಹಾಕಿತ್ತು.





