ತನ್ನನ್ನು ಡುಮ್ಮ, ದಪ್ಪಗಿದ್ದೀಯ ಎಂದು ಅಪಹಾಸ್ಯ ಮಾಡಿದ ಕಾರಣಕ್ಕಾಗಿ ಕೋಪಗೊಂಡ ಯುವಕ, ಇಬ್ಬರು ಅತಿಥಿಗಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ನಡೆದ ಮರುದಿನ ಖಜ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಲ್‌ಘಾಟ್ ಪ್ರದೇಶದ ನಿವಾಸಿ ಅರ್ಜುನ್ ಚೌಹಾಣ್ ಬಂಧಿತ ಆರೋಪಿ. ಈತನ ಜೊತೆ ಆತನ ಸ್ನೇಹಿತನಾದ ಆಸೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅರ್ಜುನ್ ಇತ್ತೀಚೆಗೆ ತನ್ನ ಚಿಕ್ಕಪ್ಪನೊಂದಿಗೆ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಹೋಗಿದ್ದ. ಈ ವೇಳೆ ಸ್ಥಳೀಯರಾದ ಅನಿಲ್ ಚೌಹಾಣ್ ಮತ್ತು ಶುಭಂ ಚೌಹಾಣ್ ಎಂಬ ಇಬ್ಬರು ಅತಿಥಿಗಳು ಅರ್ಜುನ್ ಚೌಹಾಣ್‌ನನ್ನು ಡುಮ್ಮ, ಬೊಜ್ಜು, ದಪ್ಪಗಿದ್ದೀಯಾ ಅಂತ ಸಿಕ್ಕಾಪಟ್ಟೆ ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಅರ್ಜುನ್ ಕಾರ್ಯಕ್ರಮ ಮುಗಿದ ನಂತರ ತನ್ನ ಸ್ನೇಹಿತ ಆಸಿಫ್ ಖಾನ್ ಜೊತೆಗೆ ಆ ಇಬ್ಬರು ಅತಿಥಿಗಳನ್ನು 20 ಕಿ.ಮೀ ವರೆಗೂ ಹಿಂಬಾಲಿಸಿದ್ದ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಶಿಮ್ಲಾ ಒಪ್ಪಂದದತ್ತ ಕಣ್ಣು ಹಾಯಿಸಬೇಕಿದೆ ಭಾರತ-ಪಾಕ್
ಗೋರಖ್‌ಪುರದ ತೆನುವಾ ಟೋಲ್ ಪ್ಲಾಜಾ ಬಳಿ ಕಾರು ನಿಲ್ಲಿಸಿದಾಗ ಇಬ್ಬರನ್ನೂ ಹೊರಗೆಳೆದು ಗುಂಡು ಹಾರಿಸಿ ಪರಾರಿಯಾದ ಎಂದು ದಕ್ಷಿಣ ಎಸ್ಪಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಶುಭಂ ಚೌಹಾಣ್ ಅವರ ತಂದೆಯ ದೂರಿನ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಲಾಗಿದೆ. ತನ್ನನ್ನು ಡುಮ್ಮ ಎಂದು ಕರೆದ ಕಾರಣ ಕೊಲ್ಲಲು ನಿರ್ಧರಿಸಿದ್ದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.