CBSEಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಮೌಲ್ಯಮಾಪನ ವ್ಯವಸ್ಥೆಯ ಸುತ್ತ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. CBSE ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ ಮೊದಲ ಬಾರಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ. “ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
CBSE ಮಂಡಳಿಯ ಹೊಸ ಆನ್-ಸ್ಕ್ರೀನ್ ಮಾರ್ಕಿಂಗ್ ಪದ್ಧತಿಯು 12ನೇ ತರಗತಿ ಫಲಿತಾಂಶದ ನಂತರ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸ್ಕ್ಯಾನ್ ಮಾಡಲಾದ ಉತ್ತರ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳ ಕೈಬರಹ ಬದಲಾಗಿರುವುದು, ಬೇರೆ ವಿದ್ಯಾರ್ಥಿಗಳ ಪೇಜ್ಗಳು ಕಾಣಿಸಿಕೊಳ್ಳುವುದು ಮತ್ತು ಅಂಕಗಳಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿರುವುದು ಈ ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? NTA ಎಂಬ ವ್ಯವಸ್ಥಿತ ವೈಫಲ್ಯ; ಮೋದಿ ಸರ್ಕಾರದ ಮಹಾ ಅಧ್ವಾನ
ಈ ವಿವಾದದ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿಪಕ್ಷ ನಾಯಕರುಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ನೀಟ್ ವಿವಾದದ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆ ನಡೆದಿದೆ. ಈ ನಡುವೆ ಕೊನೆಗೂ ಧರ್ಮೇಂದ್ರ ಪ್ರಧಾನ್ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ.
“ನಾನು ಈ ಪರಿಸ್ಥಿತಿಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲಾಗುವುದು. ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು. ನಾವೆಲ್ಲರೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.
ಹಾಗೆಯೇ, “ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಉದ್ದೇಶಪೂರ್ವಕ ಅಕ್ರಮಗಳು ಅಥವಾ ಲೋಪಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ OSM ತಂತ್ರಜ್ಞಾನದ ಮೇಲ್ವಿಚಾರಣೆಯನ್ನು ನಡೆಸಲು ಮತ್ತು ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಲು IIT ಕಾನ್ಪುರ ಮತ್ತು IIT ಮದ್ರಾಸ್ನಂತಹ ದೇಶದ ಉನ್ನತ ಸಂಸ್ಥೆಗಳನ್ನು ಸಿಬಿಎಸ್ಸಿ ಒಳಗೊಂಡಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? NTA ಹಗರಣಗಳ ಸರಮಾಲೆ; ಕಳಚಿದೆ ಮೋದಿ ಸರ್ಕಾರದ ಹೊಣೆಗೇಡಿತನದ ಮುಖವಾಡ!
ಇನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕೆಗಳಿಗೆ ಪ್ರತಿಕ್ರಿಯಿಸಿದ ಧರ್ಮೇಂದ್ರ ಪ್ರಧಾನ್, “ರಾಜಕೀಯವನ್ನು ಆಮೇಲೆಯೂ ಮಾಡಬಹುದು. ಸದ್ಯಕ್ಕೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಹೆಚ್ಚಿಸದಿರುವುದು ಎಲ್ಲರ ಆದ್ಯತೆಯಾಗಲಿ” ಎಂದು ಹೇಳಿದರು.
ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್
CBSE OSM ವಿವಾದದ ವಿಚಾರದಲ್ಲಿ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. “ಬಿಎಸ್ಇ ಪರೀಕ್ಷಾ ಫಲಿತಾಂಶಗಳಲ್ಲಿ ಭಾರಿ ಅಕ್ರಮಗಳು ನಡೆದಿವೆ. ಇದು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಆಘಾತಕ್ಕೆ ದೂಡಿದೆ. ಇಷ್ಟಾದರೂ, ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಯಥಾವತ್ತಾಗಿ ಯಾವುದೇ ಉತ್ತರ ನೀಡುತ್ತಿಲ್ಲ. ಅವರಿಗೆ ಹೊಣೆಗಾರಿಕೆಯೂ ಇಲ್ಲ, ನಾಚಿಕೆಯೂ ಇಲ್ಲ” ಎಂದು ಟೀಕಿಸಿದ್ದರು. ಈ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವರು ಹೊಣೆಗಾರಿಯನ್ನು ತಾವು ಹೊರುವುದಾಗಿ ಹೇಳಿದ್ದಾರೆ.




