ವಿದ್ಯಾರ್ಥಿಗಳು ವೈದ್ಯರಾಗಬೇಕೆಂದು ಹಗಲಿರುಳು ಕನಸು ಕಂಡು, ಎರಡು-ಮೂರು ವರ್ಷಗಳ ಕಾಲ ತಮ್ಮ ಸಾಮಾಜಿಕ ಜೀವನವನ್ನೇ ತ್ಯಜಿಸಿ ಕಲಿಕೆಗೆ ಗಮನ ಕೊಟ್ಟಿರುತ್ತಾರೆ. ಇದೀಗ ವಿದ್ಯಾರ್ಥಿಗಳ ಹಲವು ವರ್ಷಗಳ ಶ್ರಮ ಮೋದಿ ಸರ್ಕಾರದ ಅವ್ಯವಸ್ಥೆಯಿಂದ ಮಣ್ಣು ಪಾಳಾಗಿದೆ. ಪರೀಕ್ಷೆ ಬರೆದು ನಿರಾಳವಾಗಿದ್ದ ವಿದ್ಯಾರ್ಥಿಗಳು, ಈಗ ಮತ್ತೆ ಅದೇ ಆತಂಕ, ಒತ್ತಡದೊಂದಿಗೆ ಮರುಪರೀಕ್ಷೆಗೆ ಸಿದ್ಧರಾಗಬೇಕಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ (NTA) ಆರಂಭವಾದಾಗಿನಿಂದ ಇಂದಿನವರೆಗೂ ಒಂದಲ್ಲ ಒಂದು ಎಡವಟ್ಟು ನಡೆಸುತ್ತಲೇ ಇದೆ. ಪೇಪರ್ ಸೋರಿಕೆ, ಪರೀಕ್ಷೆ ರದ್ದು, ಗ್ರೇಸ್ ಮಾರ್ಕ್ಸ್ ವಿವಾದ, ಅಂಕಗಳ ಹಗರಣ, ಕೊನೆ ಕ್ಷಣದಲ್ಲಿ ಪರೀಕ್ಷೆ ಮುಂದೂಡಿಕೆ- ಹೀಗೆ ಹಲವು ಗೊಂದಲಗಳ ನೆಲೆ ಎನ್‌ಟಿಎ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶುರು ಮಾಡಿದ ಈ ಎನ್‌ಟಿಎ ಎಂಬ ಮಹಾ ಅಧ್ವಾನ ಈಗ ಮತ್ತೆ ಮತ್ತೆ ವಿದ್ಯಾರ್ಥಿಗಳ ತಲೆ ಮೇಲೆ ಚಪ್ಪಡಿ ಎಳೆಯುತ್ತಿದೆ.
ಮೋದಿ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ 2017ರ ನವೆಂಬರ್‌ನಲ್ಲಿ ಎನ್‌ಟಿಎ ಸ್ಥಾಪಿಸಲಾಗಿದೆ. ಮುಖ್ಯವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ಮತ್ತು ಫೆಲೋಶಿಪ್‌ಗಳಿಗಾಗಿ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಎನ್‌ಟಿಎ ರಚಿಸಲಾಗಿದೆ. ಆದರೆ ಎನ್‌ಟಿಎ ಈಗ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಸರಣಿ ಯಡವಟ್ಟುಗಳು ಮತ್ತು ಪೇಪರ್ ಲೀಕ್ ಹಗರಣಗಳು ಒಂದಾದ ಮೇಲೆ ಒಂದಾಗಿ ಬಯಲಾಗುತ್ತಿದೆ. ಇವೆಲ್ಲವುದರಿಂದ ಈ ಕಠಿಣ ಪರೀಕ್ಷೆಗಳನ್ನು ಎದುರಿಸಲು ಹಗಲಿರುಳು ಶ್ರಮಿಸುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ನಡು ಬೀದಿಯಲ್ಲಿ ನಿಲ್ಲುವಂತಾಗಿದೆ.
ಇದನ್ನು ಓದಿದ್ದೀರಾ? NEET | ‘ಒಂದು ರಾಷ್ಟ್ರ, ಒಂದು ಪರೀಕ್ಷೆ’ – ದೇಶಕ್ಕಂಟಿದ ವಿಪತ್ತು
2017ರಲ್ಲಿ ನೀಟ್ ಆರಂಭವಾದ ಬಳಿಕ 2019ರಿಂದ ನೀಟ್ (NEET-UG) ಪರೀಕ್ಷೆಗಳು ನಡೆಸಲು ಪ್ರಾರಂಭಿಸಿದೆ. ಅಂದಿನಿಂದ ಇಂದಿನವರೆಗೂ ಹಲವು ಬಾರಿ ಪರೀಕ್ಷೆಗಳು ರದ್ದಾಗಿವೆ, ಮರುಪರೀಕ್ಷೆಗಳಾಗಿವೆ. 2021, 2024ರ ಅಕ್ರಮಗಳ ಸಂದರ್ಭದಲ್ಲಿ ಸಂಪೂರ್ಣವಾಗಿ ಪರೀಕ್ಷೆಯನ್ನು ರದ್ದುಪಡಿಸಿರಲಿಲ್ಲ. ಆದರೆ 2026ರಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎನ್‌ಟಿಎ ದೇಶಾದ್ಯಂತ ಇಡೀ ಪರೀಕ್ಷೆಯನ್ನೇ ಅಧಿಕೃತವಾಗಿ ರದ್ದುಗೊಳಿಸಿದೆ.
2021ರ ನೀಟ್ ಪರೀಕ್ಷೆ: ಪೇಪರ್ ಲೀಕ್ ಪ್ರಕರಣ
2021ರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ದೇಶಾದ್ಯಂತ ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಗಿತ್ತು. 2021ರ ಸೆಪ್ಟೆಂಬರ್ 12ರಂದು ಪರೀಕ್ಷೆ ನಡೆದಿತ್ತು. ಪರೀಕ್ಷೆ ನಡೆದ ದಿನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪಗಳು ಕೇಳಿಬಂದಿತ್ತು. ರಾಜಸ್ಥಾನದ ಜೈಪುರದ ‘ರಾಜಸ್ಥಾನ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ’ (RIET) ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಆರಂಭವಾದ ತಕ್ಷಣ (ಮಧ್ಯಾಹ್ನ 2:30 ರ ಸುಮಾರಿಗೆ) ಆಡಳಿತ ಮಂಡಳಿಯ ಸಿಬ್ಬಂದಿ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ವಾಟ್ಸಾಪ್ ಮೂಲಕ ಹೊರಗಿದ್ದ ದಂಧೆಕೋರರಿಗೆ ಕಳುಹಿಸಿದ್ದರು.
ಜೈಪುರದ ಅಪಾರ್ಟ್‌ಮೆಂಟ್ ಒಂದರಲ್ಲಿದ್ದ ಕೋಚಿಂಗ್ ಸೆಂಟರ್ ಮಾಲೀಕರು ಮತ್ತು ತಜ್ಞರು ಆ ಪ್ರಶ್ನೆಗಳಿಗೆ ತಕ್ಷಣವೇ ಉತ್ತರಗಳನ್ನು (Answer Key) ಸಿದ್ಧಪಡಿಸಿದರು. ಸಿದ್ಧಪಡಿಸಿದ ಉತ್ತರಗಳನ್ನು ಜೈಪುರ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಧನೇಶ್ವರಿ ಯಾದವ್ ಎಂಬ ವಿದ್ಯಾರ್ಥಿನಿಗೆ ಹಾಗೂ ಇತರ ಕೆಲವರಿಗೆ ತಲುಪಿಸಲಾಗಿತ್ತು. ರಾಜಸ್ಥಾನ ಪೊಲೀಸರು ಮತ್ತು ಜೈಪುರ ವಿಶೇಷ ನಿಗಾ ಘಟಕ (ಗ್ರಾಮೀಣ ಪೊಲೀಸ್) ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈ ದಂಧೆಯನ್ನು ಪತ್ತೆಹಚ್ಚಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚಿಂಗ್ ಸೆಂಟರ್ ಮಾಲೀಕ ನವರತನ್ ಸ್ವಾಮಿ, ಪರೀಕ್ಷಾ ಕೇಂದ್ರದ ಉಸ್ತುವಾರಿ ಅನಿಲ್ ಯಾದವ್, ಹೋಟೆಲ್ ಮಾಲೀಕ ಹರಿಶಂಕರ್ ಶರ್ಮಾ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಪರೀಕ್ಷಾ ಕೇಂದ್ರದಲ್ಲೇ ನಕಲು ಮಾಡುತ್ತಿದ್ದ ಧನೇಶ್ವರಿ ಯಾದವ್ ಮತ್ತು ಆಕೆಗೆ ಸಹಾಯ ಮಾಡಲು ₹35 ಲಕ್ಷ ಒಪ್ಪಂದ ಮಾಡಿಕೊಂಡಿದ್ದ ಆಕೆಯ ತಂದೆಯನ್ನೂ ಪೊಲೀಸರು ಬಂಧಿಸಿದ್ದರು.
ಈ ವರ್ಷದಲ್ಲೇ ರಾಜಸ್ಥಾನ ಮಾತ್ರವಲ್ಲದೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ನೀಟ್ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ‘ಸರೊಗೇಟ್ ಕ್ಯಾಂಡಿಡೇಟ್ಸ್’ (ಒಬ್ಬರ ಬದಲಿಗೆ ಮತ್ತೊಬ್ಬರು ಪರೀಕ್ಷೆ ಬರೆಯುವುದು) ದಂಧೆಯನ್ನು ಪೊಲೀಸರು ಪತ್ತೆಹಚ್ಚಿದ್ದರು. ಬಿಹಾರ ಮತ್ತು ಯುಪಿಯ ಕೆಲವು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಿದ್ದರು.
ಈ ಅಕ್ರಮಗಳ ಕಾರಣ 2021ರ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ಮರು-ಪರೀಕ್ಷೆ ನಡೆಸಬೇಕು ಎಂದು ಕೋರಿ ಕೆಲವು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರಾಕರಿಸಿತ್ತು. ಒಂದು ಕೇಂದ್ರದಲ್ಲಿ ಅಕ್ರಮ ನಡೆದಿದ್ದಕ್ಕೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಎನ್‌ಟಿಎ ಆರಂಭವಾದ ಒಂದೆರಡು ವರ್ಷದಲ್ಲೇ ನಡೆದ ಈ ಘಟನೆಯು ಎನ್‌ಟಿಎಯ ಭದ್ರತಾ ವ್ಯವಸ್ಥೆಯ ಮೇಲಿದ್ದ ವಿಶ್ವಾಸವನ್ನು ಪ್ರಶ್ನಿಸುವಂತೆ ಮಾಡಿತ್ತು. ಇದಾದ ಬಳಿಕ ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ತಪಾಸಣೆ ಮತ್ತು ಜಾಮರ್‌ಗಳ ಬಳಕೆಯನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ನೇಮಕಾತಿ ಮತ್ತು ಸಿಸಿಟಿವಿ ಕಣ್ಗಾವಲನ್ನು ಕಡ್ಡಾಯಗೊಳಿಸಲಾಯಿತು. ಆದರೆ ಅಕ್ರಮಗಳು ಮುಂದುವರಿಯಿತು.
ಇದನ್ನು ಓದಿದ್ದೀರಾ? ರಾಜಸ್ಥಾನ | ಪ್ರಶ್ನೆ ಪತ್ರಿಕೆ ಸೋರಿಕೆ; ಪರೀಕ್ಷೆ ರದ್ದು: ನೀಟ್ ಆಕಾಂಕ್ಷಿ ಆತ್ಮಹತ್ಯೆ
2024ರ ನೀಟ್ ಪರೀಕ್ಷೆ: ಅತಿ ದೊಡ್ಡ ವಿವಾದ
ಕೇಂದ್ರ ಸರ್ಕಾರ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ ಎಂದು ಹೇಳಿಕೊಂಡರೂ 2024ರಲ್ಲಿ ಮತ್ತೆ ಅದೇ ಗೋಳು. ಸುಮಾರು 24 ಲಕ್ಷ ವೈದ್ಯಕೀಯ ಆಕಾಂಕ್ಷಿಗಳ ಭವಿಷ್ಯದ ಜೊತೆ ಬೆಸೆದುಕೊಂಡಿದ್ದ 2024ರ ನೀಟ್ ಪರೀಕ್ಷೆಯ ಸುತ್ತ ಹಲವು ವಿವಾದಗಳು ಎದ್ದಿದ್ದವು. 2024ರ ಮೇ 5ರಂದು ಪರೀಕ್ಷೆ ನಡೆದಿದ್ದು, ಜೂನ್ 4ರಂದು ಫಲಿತಾಂಶ ಹೊರಬಿದ್ದಿತ್ತು. ಫಲಿತಾಂಶವು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ದಿಗ್ಭ್ರಮೆಗೆ ಒಳಗಾಗುವಂತಿತ್ತು.
2024ರಲ್ಲಿ ದಾಖಲೆಯ 67 ವಿದ್ಯಾರ್ಥಿಗಳು 720 ಕ್ಕೆ 720 ಪೂರ್ಣ ಅಂಕಗಳನ್ನು ಪಡೆದು ಮೊದಲ ರ್ಯಾಂಕ್ ಗಳಿಸಿದ್ದರು. ಇದರಲ್ಲಿ ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದ ಆರು ವಿದ್ಯಾರ್ಥಿಗಳು ಸೇರಿದ್ದರು! ಕೆಲ ವಿದ್ಯಾರ್ಥಿಗಳಿಗೆ 718 ಮತ್ತು 719 ಅಂಕಗಳು ಬಂದಿದ್ದವು. ಆದರೆ ಇದು ತಾರ್ಕಿಕವಾಗಿ ಅಸಾಧ್ಯ. ಯಾಕೆಂದರೆ ನೀಟ್ ಪರೀಕ್ಷಾ ಪದ್ಧತಿಯ ಪ್ರಕಾರ ಪ್ರತಿ ಸರಿ ಉತ್ತರಕ್ಕೆ 4 ಅಂಕ, ತಪ್ಪು ಉತ್ತರಕ್ಕೆ 1 ನೆಗೆಟಿವ್ ಅಂಕ ಇರುತ್ತದೆ. ಹಾಗಿದ್ದಾಗ ಒಂದು ಉತ್ತರ ತಪ್ಪಾದರೂ 720ರಲ್ಲಿ 715 ಬರಬೇಕು. ಆದರೆ 718-19 ಬಂದಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಿತ್ತು.
ತೀವ್ರ ವಿವಾದದ ಬಳಿಕ ಬಿಹಾರದ ಪಟನಾ ಮತ್ತು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕ (EOU) ತನಿಖೆಯಿಂದ ಬಹಿರಂಗವಾಯಿತು. ಕೆಲವು ವಿದ್ಯಾರ್ಥಿಗಳು ತಮಗೆ ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆ ಸಿಕ್ಕಿದ್ದಾಗಿ ಒಪ್ಪಿಕೊಂಡರು.
ಇನ್ನು 718 ಮತ್ತು 719 ಅಂಕಗಳು ಬಂದಿದ್ದರ ಬಗ್ಗೆ ಸಮರ್ಥನೆಗೆ ಇಳಿದ ಎನ್‌ಟಿಎ ಪರೀಕ್ಷಾ ಕೇಂದ್ರಗಳಲ್ಲಿ ಸಮಯ ನಷ್ಟ ಅನುಭವಿಸಿದ 1,563 ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪೊಂದರ ಫಾರ್ಮುಲಾ ಬಳಸಿ ‘ಕೃಪಾಂಕ’ (Grace Marks) ನೀಡಲಾಗಿತ್ತು ಎಂದು ಹೇಳಿತ್ತು. ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ಈ ಬಗ್ಗೆ ಮಾಹಿತಿ ಯಾಕೆ ನೀಡಿಲ್ಲ ಎಂಬ ಪ್ರಶ್ನೆ ಒಂದೆಡೆ ಇರುವಾಗ, ಎನ್‌ಟಿಎಯ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಪ್ರಕರಣ ಸುಪ್ರೀಂ ಕೋರ್ಟ್ ತಲುಪಿತು. ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ಆ 1,563 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗಿತ್ತು. ಆ ವಿದ್ಯಾರ್ಥಿಗಳಿಗೆ ಮಾತ್ರ 2024ರ ಜೂನ್ 23ರಂದು ಮರುಪರೀಕ್ಷೆ ಬರೆಯುವ ಆಯ್ಕೆ ನೀಡಲಾಯಿತು. ಆದರೆ 1,563 ವಿದ್ಯಾರ್ಥಿಗಳ ಪೈಕಿ ಮರುಪರೀಕ್ಷೆಗೆ ಕೇವಲ 813 ವಿದ್ಯಾರ್ಥಿಗಳು ಮಾತ್ರ ಹಾಜರಾದರು. ಉಳಿದವರು ಗ್ರೇಸ್ ಅಂಕಗಳಿಲ್ಲದ ತಮ್ಮ ಮೂಲ ಅಂಕಗಳನ್ನೇ ಒಪ್ಪಿಕೊಂಡರು. ತದನಂತರ ಪೂರ್ಣ ಅಂಕ ಪಡೆದವರ ಸಂಖ್ಯೆ 67ರಿಂದ 61ಕ್ಕೆ ಇಳಿಯಿತು.
2024ರ ನೀಟ್ ವಿವಾದದ ಬಳಿಕವೂ ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಎಲ್ಲರಿಗೂ ಮರುಪರೀಕ್ಷೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಇಡೀ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ಒಪ್ಪಿಸಿತು. ದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 2024ರ ಜುಲೈನಲ್ಲಿ 24 ಲಕ್ಷ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ನಡೆಸುವುದು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿ ಸಂಪೂರ್ಣ ಮರುಪರೀಕ್ಷೆಗೆ ನಿರಾಕರಿಸಿತು. ಹಾಗೆಯೇ ಪಟನಾ ಮತ್ತು ಹಜಾರಿಬಾಗ್‌ನಲ್ಲಿ ಮಾತ್ರ ಸ್ಥಳೀಯವಾಗಿ ಸೋರಿಕೆಯಾಗಿದೆ. ಅದರಿಂದ ಲಾಭ ಪಡೆದ 155 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಅವರನ್ನು ಪ್ರವೇಶ ಪ್ರಕ್ರಿಯೆಯಿಂದ ಹೊರಗಿಡಬಹುದು ಎಂದು ಕೋರ್ಟ್ ಹೇಳಿತ್ತು.
ಇದನ್ನು ಓದಿದ್ದೀರಾ? ನೀಟ್ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ, ಉತ್ತರ ನೀಡಿ: ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸುಪ್ರೀಂ ನೋಟಿಸ್
ಇನ್ನೊಂದೆಡೆ ಅದೇ ವರ್ಷ ಭೌತಶಾಸ್ತ್ರದ (Physics) ವಿವಾದಾತ್ಮಕ ಪ್ರಶ್ನೆಯೊಂದಕ್ಕೆ ಸಂಬಂಧಿಸಿದಂತೆ ಐಐಟಿ ದೆಹಲಿ ತಜ್ಞರ ವರದಿ ಪಡೆದ ಕೋರ್ಟ್, ಕೇವಲ ಒಂದೇ ಆಯ್ಕೆಯನ್ನು ಸರಿ ಎಂದು ಪರಿಗಣಿಸಲು ಆದೇಶಿಸಿತು. ಇದರಿಂದಾಗಿ ಎನ್‌ಟಿಎ ಮತ್ತೊಮ್ಮೆ ಫಲಿತಾಂಶವನ್ನು ಪರಿಷ್ಕರಿಸಬೇಕಾಗಿ ಬಂತು, ಗರಿಷ್ಠ ಅಂಕ ಪಡೆದವರ ಸಂಖ್ಯೆ ಮತ್ತಷ್ಟು ಕುಸಿಯಿತು. 2024ರ ವಿವಾದದ ತರುವಾಯ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಯಿತು.
ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಪರೀಕ್ಷೆ ರದ್ದು
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುತ್ತೇವೆ, ಭದ್ರತೆ ಹೆಚ್ಚಿಸುತ್ತೇವೆ ಎಂದು ಎಷ್ಟು ಬಾರಿ ಹೇಳಿಕೊಂಡರೂ 2026ರಲ್ಲೂ ನಡೆದಿದ್ದು ಅದುವೇ. ಈ ವರ್ಷ ನೀಟ್ ಪರೀಕ್ಷೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎನ್‌ಟಿಎ ದೇಶಾದ್ಯಂತ ಇಡೀ ಪರೀಕ್ಷೆಯನ್ನೇ ಅಧಿಕೃತವಾಗಿ ರದ್ದುಗೊಳಿಸಿದೆ. ಇದರಿಂದಾಗಿ ಸುಮಾರು 22.8 ಲಕ್ಷ ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ.
ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ವಾಟ್ಸಾಪ್ ಹಾಗೂ ಇತರ ಮೆಸೇಜಿಂಗ್ ಆ್ಯಪ್‌ಗಳಲ್ಲಿ ‘ಗೆಸ್ ಪೇಪರ್’ (Guess Paper) ಹೆಸರಿನಲ್ಲಿ ಪಿಡಿಎಫ್ ರೂಪದ ಪ್ರಶ್ನೆ ಪತ್ರಿಕೆಯೊಂದು ಹರಿದಾಡುತ್ತಿತ್ತು. ಈ ಸಂಬಂಧ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ, ತನಿಖಾ ಸಂಸ್ಥೆಗಳು ತನಿಖೆ ನಡೆಸಿದಾಗ ಆ ಗೆಸ್ ಪೇಪರ್‌ನಲ್ಲಿದ್ದ 410 ಪ್ರಶ್ನೆಗಳ ಪೈಕಿ ಸುಮಾರು 120 ಪ್ರಶ್ನೆಗಳು ಅಸಲಿ ನೀಟ್ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗುತ್ತಿತ್ತು. ಅದರಲ್ಲೂ ಕೆಮಿಸ್ಟ್ರಿ ಮತ್ತು ಬಯಾಲಜಿ ವಿಭಾಗದಲ್ಲಿ ಈ ಹಗರಣ ಸ್ಪಷ್ಟವಾಗಿ ತೋಚುವಂತಿತ್ತು.
ತನಿಖೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲ ಮಹಾರಾಷ್ಟ್ರದ ನಾಸಿಕ್ ಹಾಗೂ ಲಾತೂರ್ ಎಂದು ತಿಳಿದುಬಂದಿತ್ತು. ರಾಜಸ್ಥಾನ, ಹರಿಯಾಣ, ಬಿಹಾರ, ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲೂ ಇದು ನಡೆದಿದೆ ಎಂದು ದೃಢಪಟ್ಟಿತು. ಅಭ್ಯರ್ಥಿಗಳಿಂದ ತಲಾ 10 ರಿಂದ 15 ಲಕ್ಷ ರೂ. ಪಡೆಯಲಾಗಿತ್ತು ಎಂಬುದು ಬಹಿರಂಗವಾಯಿತು. ಇದು ಸಂಪೂರ್ಣ ನೀಟ್ ಪರೀಕ್ಷೆಯ ಪವಿತ್ರತೆಗೆ ಧಕ್ಕೆಯಾಗಿದೆ ಎಂದು ಒಪ್ಪಿಕೊಂಡ ಎನ್‌ಟಿಎ ಕೇಂದ್ರ ಸರ್ಕಾರದ ಒಪ್ಪಿಗೆಯ ಮೇರೆಗೆ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ಮೇ 12ರಂದು ರದ್ದುಗೊಳಿಸಿತು.
ಪತ್ರಿಕೆ ಸೋರಿಕೆಯ ಜಾಲವನ್ನು ಭೇದಿಸಲು ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಜೊತೆಗೆ ಕೋಟ್ಯಂತರ ರೂಪಾಯಿಗಳ ಹಣದ ಅಕ್ರಮ ವರ್ಗಾವಣೆ ನಡೆದಿರುವುದರಿಂದ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ಆರಂಭಿಸಿದೆ. 2021 ಮತ್ತು 2024ರ ವಿವಾದಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮತ್ತೆ ಕೇಂದ್ರ ಸರ್ಕಾರದ ಬೇಜವಾಬ್ದಾರಿ ಬಗ್ಗೆ ಬೇಸರ ವ್ಯಕ್ತಪಡಿಸಿತು. ಹಳೆಯ ತಪ್ಪುಗಳಿಂದ ಎನ್‌ಟಿಎ ಯಾವುದೇ ಪಾಠ ಕಲಿತಿಲ್ಲ” ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ಎನ್‌ಟಿಎಗೆ ನೋಟಿಸ್ ಜಾರಿ ಮಾಡಿದೆ.
ಈ ನಡುವೆ ರಾಜಕೀಯವು ತಲೆ ಎತ್ತಿದೆ. ರಾಜಸ್ಥಾನದ ಜೈಪುರ ಗ್ರಾಮಾಂತರ ಭಾಗದಲ್ಲಿ ಎಸ್‌ಒಜಿ ಮತ್ತು ಸಿಬಿಐ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಿಜೆಪಿ ಯುವ ಮೋರ್ಚಾದ ಜೈಪುರ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ದಿನೇಶ್ ಬಿನ್ವಾಲ್ ಮತ್ತು ಆತನ ಸಹೋದರನನ್ನು ವಶಕ್ಕೆ ಪಡೆಯಲಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಈ ಹಗರಣವನ್ನು ಮುಚ್ಚಿಹಾಕಲು ಯತ್ನಿಸಿದ್ದು ಇನಷ್ಟು ರಾಜಕೀಯ ವಿವಾದಗಳಿಗೆ ಕಾರಣವಾಗಿದೆ.
ಇವೆಲ್ಲವುದರ ನಡುವೆ ಪರೀಕ್ಷೆ ರದ್ದಾದ ಕಾರಣಕ್ಕೆ ವಿದ್ಯಾರ್ಥಿಗಳಿಗೆ ನಷ್ಟ ತುಂಬಿಕೊಡಲು ಎನ್‌ಟಿಎ ಮೇ 22ರಿಮದ ಮೇ 27ರವರೆಗೆ Refund Portal ಮುಖಾಂತರ ಸುಮಾರು 300 ಕೋಟಿ ರೂ. ಶುಲ್ಕವನ್ನು ವಾಪಸ್ ನೀಡುವ ಪ್ರಕ್ರಿಯೆ ಆರಂಭಿಸಿದೆ. ಆದರೆ ಶುಲ್ಕ ವಾಪಸ್ ನೀಡಿದರೆ ಸಾಕೇ? ವಿದ್ಯಾರ್ಥಿಗಳು ಕಳೆದುಕೊಂಡ ಸಮಯ, ಮಾನಸಿಕ ನೆಮ್ಮದಿ ಮತ್ತು ಭವಿಷ್ಯಕ್ಕೆ ಯಾರು ಹೊಣೆ?https://youtu.be/P10XyUHtIVU?si=LYWg5eN5kiJAgRPb
ವಿದ್ಯಾರ್ಥಿಗಳು ವೈದ್ಯರಾಗಬೇಕೆಂದು ಹಗಲಿರುಳು ಕನಸು ಕಂಡು, ಎರಡು-ಮೂರು ವರ್ಷಗಳ ಕಾಲ ತಮ್ಮ ಸಾಮಾಜಿಕ ಜೀವನವನ್ನೇ ತ್ಯಜಿಸಿ ಕಲಿಕೆಗೆ ಗಮನ ಕೊಟ್ಟಿರುತ್ತಾರೆ. ಇದೀಗ ವಿದ್ಯಾರ್ಥಿಗಳ ಹಲವು ವರ್ಷಗಳ ಶ್ರಮ ಮೋದಿ ಸರ್ಕಾರದ ಅವ್ಯವಸ್ಥೆಯಿಂದ ಮಣ್ಣು ಪಾಳಾಗಿದೆ. ಪರೀಕ್ಷೆ ರದ್ದತಿಯಿಂದ ಅದೆಷ್ಟೋ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿದ್ದಾರೆ. ಪರೀಕ್ಷೆ ಬರೆದು ನಿರಾಳವಾಗಿದ್ದ ವಿದ್ಯಾರ್ಥಿಗಳು, ಈಗ ಮತ್ತೆ ಅದೇ ಆತಂಕ, ಒತ್ತಡದೊಂದಿಗೆ ಜೂನ್ 21ರ ಮರುಪರೀಕ್ಷೆಗೆ ಸಿದ್ಧರಾಗಬೇಕಿದೆ. ಈ ಒತ್ತಡ ತಡೆಯಲಾರದೆ, ರಾಜ್ಯದ ಕಲಬುರಗಿ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಗೋವಾದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಶರಣಾಗಿದ್ದಾರೆ. ಈ ಘಟನೆಗಳು ಇಡೀ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿದೆ.
ಎನ್‌ಟಿಎ ಕೇವಲ ತಾನು ಪಡೆದಿದ್ದ 1,600 ಅಥವಾ 1,700 ರೂಪಾಯಿಗಳ ಅರ್ಜಿ ಶುಲ್ಕವನ್ನು ಪಾವಸ್ ನೀಡುತ್ತಿದೆ. ಆದರೆ ಕೋಚಿಂಗ್ ಸೆಂಟರ್‌ಗಳಿಗೆ ಪೋಷಕರು ಸುರಿದಿರುವ ಲಕ್ಷಾಂತರ ರೂಪಾಯಿ ಶುಲ್ಕವನ್ನು ಯಾರು ವಾಪಸ್ ನೀಡುತ್ತಾರೆ? ಬೇರೆ ಊರುಗಳಿಗೆ ಪ್ರಯಾಣಿಸಲು, ಅಲ್ಲೇ ಉಳಿದುಕೊಳ್ಳಲು ವಿದ್ಯಾರ್ಥಿಗಳು ಭರಿಸಿದ ವೆಚ್ಚವನ್ನು ಯಾರು ನೀಡುತ್ತಾರೆ? ಮತ್ತೆ ಮರುಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ವ್ಯಯಿಸಬೇಕಾದ ಪ್ರಯಾಣ ವೆಚ್ಚ ಭರಿಸುವವರು ಯಾರು? ಪದೇ ಪದೇ ಮಾಡಿದ ತಪ್ಪುಗಳಿಂದ ಪಾಠ ಕಲಿಯದ ಎನ್‌ಟಿಎ ಈಗ ಮರುಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ನಡೆಸಬಲ್ಲದೇ?
ಈ ಸಂದರ್ಭದಲ್ಲೇ ಎನ್‌ಟಿಎ ಹೊರಗುತ್ತಿಗೆಯತ್ತವೂ ನಾವು ಬೆರಳು ಮಾಡಬೇಕಿದೆ. ಎನ್‌ಟಿಎ ನಿರ್ವಹಣೆಗಾಗಿ ಖಾಸಗಿ ಗುತ್ತಿಗೆದಾರರನ್ನು ಅವಲಂಬಿಸಿರುವುದು, ಪರೀಕ್ಷಾ ಕೇಂದ್ರಗಳ ನಿರ್ವಹಣೆಯಲ್ಲಿ ಪಾರದರ್ಶಕತೆಯ ಕೊರತೆಯಿರುವುದು ಎನ್‌ಟಿಎ ಗುತ್ತಿಗೆ ವ್ಯವಸ್ಥೆಯ ಮೇಲೆ ಅನುಮಾನವನ್ನು ಹುಟ್ಟಿಸಿದೆ. ಒಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮಗಳು. ಇನ್ನೊಂದಡೆ ಹೊರಗುತ್ತಿಗೆ. ಇವೆರಡೂ ಒಂದಕ್ಕೊಂಡು ನಂಟು ಹೊಂದಿದೆಯೇ?
ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು, ಮುದ್ರಿಸುವುದು ಮತ್ತು ಪರೀಕ್ಷಾ ಕೇಂದ್ರಗಳ ನಿರ್ವಹಣೆಯನ್ನು ಎನ್‌ಟಿಎ ಹೆಚ್ಚಾಗಿ ಮೂರನೇ ವ್ಯಕ್ತಿಯ ಗುತ್ತಿಗೆದಾರರಿಗೆ ವಹಿಸುವುದು ಎಷ್ಟು ಸರಿ? ಪರೀಕ್ಷಾ ಕೇಂದ್ರಗಳ ಸಿಬ್ಬಂದಿ ಮತ್ತು ಗುತ್ತಿಗೆದಾರರ ನಡುವಿನ ಶಾಮೀಲಾತಿಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಅಪಾಯವೂ ಹೆಚ್ಚಲ್ಲವೇ? ಒಟ್ಟಾರೆಯಾಗಿ ಎನ್‌ಟಿಎ ಎಂಬುದು ಮೋದಿ ಸರ್ಕಾರದ ವ್ಯವಸ್ಥಿತ ವೈಫಲ್ಯ ಎಂಬುದು ಸ್ಪಷ್ಟ. ಮೋದಿ ಸರ್ಕಾರದ ಮಹಾ ಅಧ್ವಾನವೇ ಎನ್‌ಟಿಎ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



