ಹೊಸ ಸಂಪುಟದಲ್ಲಿ ಹಳಬರ ಪೈಕಿ ಶೇ.90ರಷ್ಟು ಮಂದಿ ಉಳಿಯುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಕನಿಷ್ಠ ಅರ್ಧಕ್ಕಿಂತ ಹೆಚ್ಚು ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಾಲ್ಕೈದು ಬಾರಿ ಶಾಸಕರಾದ ಹಲವು ಪ್ರಬಲ ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ. ಮುಂದಿನ ಚುನಾವಣೆಗೆ ಕೇವಲ ಎರಡು ವರ್ಷ ಬಾಕಿ ಇರುವುದರಿಂದ, ಎಲ್ಲರಿಗೂ ಅಧಿಕಾರ ಹಂಚುವುದು ಅಸಾಧ್ಯ. ಪರಿಣಾಮವಾಗಿ, ಸಚಿವ ಸ್ಥಾನ ವಂಚಿತರಿಂದ ನಾಳೆಯಿಂದಲೇ ರಾಜ್ಯದಲ್ಲಿ ಅಧಿಕೃತ ‘ಭಿನ್ನಮತೀಯರ ಗುಂಪೊಂದು’ ಸೃಷ್ಟಿಯಾಗುವುದು ನಿಶ್ಚಿತ
ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಪಲ್ಲಟವೊಂದು ಸಂಭವಿಸಿದ್ದು, ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಈ ನಾಯಕತ್ವ ಬದಲಾವಣೆಯ ಜೊತೆಯಲ್ಲೇ, ಕಳೆದ ಏಳೆಂಟು ತಿಂಗಳುಗಳಿಂದಲೂ ತೀವ್ರ ಚರ್ಚೆಯಲ್ಲಿದ್ದ ಸಚಿವ ಸಂಪುಟದ ಸಂಪೂರ್ಣ ಪುನಾರಚನೆಗೂ ಹೈಕಮಾಂಡ್ ವೇದಿಕೆ ಸಿದ್ದಪಡಿಸಿದೆ.
ಸಂಪುಟ ಬದಲಾವಣೆಯ ಮುನ್ಸೂಚನೆಗಳು ಈ ಹಿಂದೆಯೇ ಲಭ್ಯವಾಗಿದ್ದವು. ಅಚ್ಚರಿ ಎಂಬಂತೆ ಇಡೀ ಸಚಿವ ಸಂಪುಟವನ್ನು ದೆಹಲಿಗೆ ಕರೆಸಿಕೊಂಡು ಹೈಕಮಾಂಡ್ ಸಭೆ ನಡೆಸಿತ್ತು; ಜೊತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲೂ ಸಭೆ ನಡೆದಿತ್ತು. ಎರಡೂವರೆ ವರ್ಷಗಳ ಅವಧಿಯಲ್ಲಿ ಸಮರ್ಪಕವಾಗಿ ಕೆಲಸ ಮಾಡದ ಸಚಿವರಿಗೆ ಆ ಸಭೆಗಳಲ್ಲೇ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸುವ ಮೂಲಕ, ಹಾಲಿ ಬದಲಾವಣೆಗೆ ಮುನ್ನುಡಿ ಬರೆಯಲಾಗಿತ್ತು.
ಈಗ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಿರುವುದರಿಂದ, ಹೈಕಮಾಂಡ್ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಮೂರರಿಂದ ನಾಲ್ಕು ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳನ್ನು ಸೃಷ್ಟಿಸಲು ಮುಂದಾಗಿದೆ. ಡಿ.ಕೆ. ಶಿವಕುಮಾರ್ ಅವರ ಮೇಲಿರುವ ‘ಇಮೇಜ್ ಸಮಸ್ಯೆ’ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ, ಅಧಿಕಾರದ ಸಮತೋಲನ (ಬ್ಯಾಲೆನ್ಸ್) ಕಾಯ್ದುಕೊಳ್ಳಲು ಈ ಮೂರ್ನಾಲ್ಕು ಡಿಸಿಎಂ ಹುದ್ದೆಗಳ ಸೃಷ್ಟಿ ಅನಿವಾರ್ಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹೊಸ ಸಂಪುಟ ರಚನೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಇರುವುದಿಲ್ಲ. ಯಾರು ಮಂತ್ರಿಯಾಗಬೇಕು ಹಾಗೂ ಯಾರು ಡಿಸಿಎಂ ಆಗಬೇಕು ಎನ್ನುವ ಪ್ರತಿಯೊಂದು ನಿರ್ಧಾರದಲ್ಲೂ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೂ ಅಷ್ಟೇ ಮನ್ನಣೆ ಇರಲಿದೆ. ತಮ್ಮ ಆಪ್ತ ಬೆಂಬಲಿಗರಾದ ಡಾ. ಎಚ್ ಸಿ ಮಹದೇವಪ್ಪ ಮತ್ತು ಬೈರತಿ ಸುರೇಶ್ ಪರವಾಗಿ ಸ್ವತಃ ಸಿದ್ದರಾಮಯ್ಯನವರೇ ವಕಾಲತ್ತು ವಹಿಸುತ್ತಾರಾ ಇಲ್ಲವಾ ಎನ್ನುವ ಕುತೂಹಲವೂ ರಾಜಕೀಯ ವಲಯದಲ್ಲಿದೆ.
ಇದನ್ನು ಓದಿದ್ದೀರಾ? ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ; ಬಿಸಿಸಿಐ ಮುಂದಿದೆ ದೊಡ್ಡ ಸವಾಲು
ಹಾಲಿ ಸಂಪುಟದಲ್ಲಿ ಹಲವರ ಕಾರ್ಯವೈಖರಿ ಬಗ್ಗೆ ಈ ಹಿಂದಿನಿಂದಲೂ ತೀವ್ರ ಅಸಮಾಧಾನಗಳಿದ್ದವು. ಪ್ರಮುಖವಾಗಿ ಎಚ್ ಸಿ ಮಹದೇವಪ್ಪ, ಬೈರತಿ ಸುರೇಶ್, ಮಂಕಾಳ ವೈದ್ಯ ಹಾಗೂ ರಹೀಂ ಖಾನ್ ಅವರ ಕಾರ್ಯವೈಖರಿಯ ಬಗ್ಗೆ ಅಪಸ್ವರಗಳಿದ್ದವು. ಇನ್ನೊಂದಡೆ, ‘ಖಾಯಂ ಸ್ಪೀಕರ್ ಅಲ್ಲ, ಮುಂದೆ ಮಂತ್ರಿ ಮಾಡುತ್ತೇವೆ’ ಎಂಬ ಭರವಸೆ ಪಡೆದಿದ್ದ ಯು ಟಿ ಖಾದರ್ ಅವರು ಸಚಿವ ಆಕಾಂಕ್ಷಿಯಾಗಿದ್ದಾರೆ.
ಖಾತೆಗಳ ಹಂಚಿಕೆಯೂ ಈ ಬಾರಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಡಿ.ಕೆ. ಶಿವಕುಮಾರ್ ಅವರು ಈವರೆಗೆ ‘ಬೆಂಗಳೂರು ನಗರಾಭಿವೃದ್ಧಿ’ ಹಾಗೂ ‘ಬೃಹತ್ ನೀರಾವರಿ’ಯಂತಹ ಎರಡು ಬೃಹತ್ ಪೋರ್ಟ್ಫೋಲಿಯೋಗಳನ್ನು ಹೊಂದಿದ್ದರು. ಮುಖ್ಯಮಂತ್ರಿಯಾದ ಬಳಿಕವೂ ಅವರು ಇವುಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆಯೇ ಅಥವಾ ಬೇರೆಯವರಿಗೆ ಬಿಟ್ಟುಕೊಡುತ್ತಾರೆಯೇ ಎನ್ನುವ ಪ್ರಶ್ನೆ ಎದ್ದಿದೆ. ಇದರ ಜೊತೆಗೆ ಎಸ್ಟಿ ಕೋಟಾದಡಿ ಸಚಿವರಾಗಿರುವ ಕೆ.ಎನ್. ರಾಜಣ್ಣ, ನಾಗೇಂದ್ರ ಹಾಗೂ ಇನ್ನೊರ್ವ ಸಚಿವ ಸುಧಾಕರ್ ಅವರ ಸ್ಥಾನಮಾನ, ಹಾಗೂ ಯತೀಂದ್ರ ಅವರಿಗೂ ಮಂತ್ರಿಗಿರಿ ಒಲಿಯುವ ಕುರಿತು ಚರ್ಚೆಗಳು ಬಿರುಸುಗೊಂಡಿವೆ. ಸಿದ್ದರಾಮಯ್ಯನವರು ರಾಜ್ಯಸಭಾ ಸ್ಥಾನ ನಿರಾಕರಿಸಿರುವ ಕಾರಣ ಪುತ್ರ ಯತೀಂದ್ರ ಅವರು ಕೂಡ ನೂತನ ಸಂಪುಟದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಹೊಸ ಡಿಸಿಎಂ ಹುದ್ದೆಗಳ ಸೃಷ್ಟಿಯಿಂದಾಗಿ ಜಾತಿ ಸಮೀಕರಣದ ಲೆಕ್ಕಾಚಾರಗಳು ಗರಿಗೆದರಿವೆ. ಒಕ್ಕಲಿಗ ಸಮುದಾಯದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದರಿಂದ, ದಲಿತ ಕೋಟಾದಡಿ ಡಿಸಿಎಂ ಸ್ಥಾನಕ್ಕೆ ಸಿಎಂ ಆಕಾಂಕ್ಷಿಯಾಗಿದ್ದ ಡಾ. ಜಿ ಪರಮೇಶ್ವರ್ ಹಾಗೂ ಪ್ರಿಯಾಂಕ್ ಖರ್ಗೆ ಪ್ರಬಲ ಪೈಪೋಟಿಯಲ್ಲಿದ್ದಾರೆ. ಎಸ್ಟಿ ಕೋಟಾದಡಿ ಸತೀಶ್ ಜಾರಕಿಹೊಳಿ ಅವರು, ಮಂತ್ರಿ ಸ್ಥಾನದ ಜೊತೆಗೇ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಕೂ” ಎಂದು ಪಟ್ಟು ಹಿಡಿದರೆ, ಡಿಸಿಎಂ ರೇಸ್ನಿಂದ ಹೊರಗುಳಿಯಬಹುದು.
ಲಿಂಗಾಯತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ; ಹೀಗಾಗಿ ಎಂ ಬಿ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ, ಇದೇ ವೇಳೆ, ಅಲ್ಪಸಂಖ್ಯಾತರಿಗೂ ಡಿಸಿಎಂ ಸ್ಥಾನ ನೀಡಲೇಬೇಕು ಎನ್ನುವ ಕೂಗು ಪ್ರಬಲವಾಗಿದೆ. ದಾವಣಗೆರೆ ಉಪಚುನಾವಣೆಯ ಘಟನೆಯ ಆರೋಪಗಳ ನಡುವೆಯೂ ಜನಪ್ರಿಯ ನಾಯಕ ಜಮೀರ್ ಅಹ್ಮದ್ ಖಾನ್ ಡಿಸಿಎಂ ರೇಸ್ನಲ್ಲಿದ್ದಾರೆ; ಒಂದು ವೇಳೆ ಅವರಿಗೆ ಡಿಸಿಎಂ ಕೈತಪ್ಪಿದರೆ, ರಿಜ್ವಾನ್ ಅರ್ಷದ್, ತನ್ವೀರ್ ಸೇಟ್, ಯು.ಟಿ ಖಾದರ್ ಹಾಗೂ ಎನ್ ಎ ಹ್ಯಾರಿಸ್ ಅವರಿಗೆ ಮಂತ್ರಿ ಸ್ಥಾನದ ಮೂಲಕ ಪ್ರಾತಿನಿಧ್ಯ ನೀಡಬೇಕಾಗುತ್ತದೆ.
ಹೊಸ ಸಂಪುಟದಲ್ಲಿ ಹಳಬರ ಪೈಕಿ ಶೇ.90ರಷ್ಟು ಮಂದಿ ಉಳಿಯುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಕನಿಷ್ಠ ಅರ್ಧಕ್ಕಿಂತ ಹೆಚ್ಚು ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಾಲ್ಕೈದು ಬಾರಿ ಶಾಸಕರಾದ ಹಲವು ಪ್ರಬಲ ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ. ಮುಂದಿನ ಚುನಾವಣೆಗೆ ಕೇವಲ ಎರಡು ವರ್ಷ ಬಾಕಿ ಇರುವುದರಿಂದ, ಎಲ್ಲರಿಗೂ ಅಧಿಕಾರ ಹಂಚುವುದು ಅಸಾಧ್ಯ. ಪರಿಣಾಮವಾಗಿ, ಸಚಿವ ಸ್ಥಾನ ವಂಚಿತರಿಂದ ನಾಳೆಯಿಂದಲೇ ರಾಜ್ಯದಲ್ಲಿ ಅಧಿಕೃತ ‘ಭಿನ್ನಮತೀಯರ ಗುಂಪೊಂದು’ ಸೃಷ್ಟಿಯಾಗುವುದು ನಿಶ್ಚಿತ.
ರಾಜ್ಯ ರಾಜಕಾರಣದ ಮುಂದಿನ ದಿನಗಳ ಚಿತ್ರಣದಲ್ಲಿ ಈ ಭಿನ್ನಮತೀಯರ ನಡೆ ಅತ್ಯಂತ ನಿರ್ಣಾಯಕವಾಗಲಿದೆ. ಅಚ್ಚರಿಯ ವಿಚಾರವೆಂದರೆ, ಅಧಿಕೃತವಾಗಿ ಸೃಷ್ಟಿಯಾಗಲಿರುವ ಈ ಅತೃಪ್ತ ಶಾಸಕರು ಮತ್ತು ನಾಯಕರ ಗುಂಪು ಸತತವಾಗಿ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪರ್ಕಕಕ್ಕೆ ಬರುವುದು ಖಚಿತ. ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರವು ಈ ಆಂತರಿಕ ಭಿನ್ನಮತವನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ಇಡೀ ಕರ್ನಾಟಕವೇ ಕಾದು ನೋಡಬೇಕಿದೆ.




