ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ತಮ್ಮ ಜೀವನದ ಉಳಿತಾಯವೆಲ್ಲ ಮಣ್ಣಲ್ಲಿ ಕರಗಿ ಹೋಗಿರುವವರೆಲ್ಲರೂ ಮುಂದೆ ಏನಾಗುವುದೋ ಎಂದು ಎದುರು ನೋಡುತ್ತಿದ್ದಾರೆ.
ಕೇರಳ ಕಂಡ ಅತ್ಯಂತ ದೊಡ್ಡ ದುರಂತ ವಯನಾಡ್ ಜಿಲ್ಲೆಯಲ್ಲಿ ನಡೆದಿದೆ. ಜುಲೈ 30ರಂದು ಮುಂಡಕೈ ಹಾಗೂ ಚೂರಲ್ ಮಲದಲ್ಲಿ ನಡೆದ ಭೂಕುಸಿತ ದುರಂತದ ಕಡೆ ಎಲ್ಲರ ನೋಟ ನೆಟ್ಟಿದೆ. ಬದುಕಿ ಉಳಿದಿರುವ ಕೊನೆಯ ವ್ಯಕ್ತಿಯನ್ನು ರಕ್ಷಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ.

ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆಯು ಕಷ್ಟಕರವಾಗಿದ್ದರೂ, ರಕ್ಷಣಾ ತಂಡಗಳು ಸಾಧ್ಯವಿರುವ ಎಲ್ಲ ಮಾರ್ಗಗಳ ಮೂಲಕ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ನಡುವೆ ಪರಿಹಾರ ಕಾರ್ಯಕ್ಕೂ ಕೂಡ ಹಲವಾರು ಜನರು ಮುಂದೆ ಬಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ವಿಭಿನ್ನವಾದ ಮನವಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು. “ಚಿಕ್ಕ ಮಕ್ಕಳಿಗೆ ಎದೆಹಾಲು ಬೇಕಾದರೆ ತಿಳಿಸಿ. ನನ್ನ ಹೆಂಡತಿ ರೆಡಿ ಇದ್ದಾಳೆ” ಎಂಬ ಸಂದೇಶವೊಂದರ ಸ್ಕ್ರೀನ್ ಶಾಟ್ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

‘ಪುಟ್ಟ ಮಕ್ಕಳಿಗೆ ಎದೆಹಾಲು ಬೇಕಿದ್ದರೆ ತಿಳಿಸಿ…ನನ್ನ ಪತ್ನಿ ಸಿದ್ಧವಾಗಿದ್ದಾಳೆ’ ಎಂದು ವ್ಯಕ್ತಿಯೊಬ್ಬರು ವಾಟ್ಸಾಪ್ ಸಂದೇಶದ ಮೂಲಕ ಸ್ವಯಂ ಸೇವಕರಿಗೆ ತಿಳಿಸಿದ್ದಾರೆ. ಈ ಸಂದೇಶವನ್ನು ಮಲಯಾಳಂನಲ್ಲಿ ಕಳುಹಿಸಲಾಗಿದ್ದು, ಕಳುಹಿಸಿದ ವ್ಯಕ್ತಿಯ ವಿವರ ಎಲ್ಲೂ ಲಭ್ಯವಾಗಿಲ್ಲ. ಆದರೂ, ಮಲಯಾಳಂ ಮಾಧ್ಯಮಗಳು ಇದನ್ನು ವರದಿ ಮಾಡಿದ್ದು, ವ್ಯಕ್ತಿ ಹಾಗೂ ಆತನ ಪತ್ನಿಯ ಮಾನವೀಯತೆಯ ಈ ಸಂದೇಶ ಹಲವಾರು ಮಂದಿಯ ಹೃದಯ ಕಲಕಿದೆ.
ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ಅನಾಮಧೇಯ ಸಂದೇಶವನ್ನು ಜನರು ಹಂಚಿಕೊಂಡಿದ್ದು, ಶ್ಲಾಘಿಸಿದ್ದಾರೆ.
224 ಮಂದಿ ಮೃತ್ಯು:
ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೆ ಮತ್ತು ಚೂರಲ್ ಮಲಾವನ್ನು ಧ್ವಂಸಗೊಳಿಸಿದ ಭೂಕುಸಿತಗಳಲ್ಲಿ ಕನಿಷ್ಠ 224 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಜುಲೈ 30 ರಂದು ವಯನಾಡ್ ನಲ್ಲಿ ಸಂಭವಿಸಿದ ಭಾರೀ ಭೂಕುಸಿತದ ಬಳಿಕ ಮಂಗಳವಾರ 20 ಗಂಟೆಗಳ ಕಾಲ ತಡರಾತ್ರಿಯವರೆಗೂ ನಡೆದ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಗ್ಗೆ ಮುಂಡಕೈನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದೆ. ಈ ಘಟನೆಯಲ್ಲಿ ಸುಮಾರು 225 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ 89 ಮೃತದೇಹಗಳನ್ನು ಗುರುತಿಸಲಾಗಿದೆ. 143 ಮೃತ ದೇಹಗಳ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳು ಕೂಡ ಪೂರ್ಣಗೊಂಡಿವೆ. ಈ ಪೈಕಿ 32 ಮೃತದೇಹಗಳನ್ನು ಮಂಗಳವಾರ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಮೇಪ್ಪಾಡಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.