ಬಂಗಾಳದ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ಮೀನು ಮತ್ತು ಝಲ್ಮುರಿ (ಮಂಡಕ್ಕಿ ಖಾದ್ಯ) ಈಗ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವಿನ ರಾಜಕೀಯ ಯುದ್ಧಕ್ಕೆ ಅಸ್ತ್ರಗಳಾದಂತೆ ಕಾಣುತ್ತಿವೆ.
ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಒಂದು ವೇಳೆ ಪ್ರಧಾನಿಯವರು ಮೀನು ತಿನ್ನಲು ಬಯಸಿದರೆ, ನಾನೇ ಸ್ವತಃ ಅವರಿಗಾಗಿ ಅಡುಗೆ ಮಾಡಿ ಬಡಿಸುತ್ತೇನೆ. ಆದರೆ ಅವರು ಪಶ್ಚಿಮ ಬಂಗಾಳಕ್ಕೆ ಬಂದು ನಮ್ಮ ಆಹಾರ ಸಂಸ್ಕೃತಿಯ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು” ಎಂದಿದ್ದಾರೆ. ವರದಿಗಳ ಪ್ರಕಾರ, ಪ್ರಧಾನಿ ಮೋದಿ ಸಸ್ಯಾಹಾರಿ.
“ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ನಮ್ಮ ಆಹಾರ ಸಂಸ್ಕೃತಿಯ ಮೇಲೆ ನಿರ್ಬಂಧಗಳನ್ನು ಹೇರಲಿದೆ. ಊಟದಲ್ಲೂ ಜಾತಿ-ಧರ್ಮ ನೋಡುವ ಬಿಜೆಪಿಯನ್ನು ಪಶ್ಚಿಮ ಬಂಗಾಳದ ಜನತೆ ತಿರಸ್ಕರಿಸಲಿದ್ದಾರೆ” ಎಂದು ಮಮತಾ ಗುಡುಗಿದ್ದಾರೆ.
ಕಳೆದ ಭಾನುವಾರ ಜಾರ್‌ಗ್ರಾಮ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ರಸ್ತೆ ಬದಿಯ ಸಣ್ಣ ಅಂಗಡಿಯೊಂದರಲ್ಲಿ ಮಂಡಕ್ಕಿ ಸೇವಿಸಿದ್ದರು. ಈ ಬಗ್ಗೆ ಟೀಕಿಸಿದ ಮಮತಾ, ʼಅದೊಂದು ಕೇವಲ ನಾಟಕ. ಪ್ರಧಾನಿ ಸೇವಿಸಿದ ಝಲ್ಮುರಿಯನ್ನು ಆ ಅಂಗಡಿಯವನು ತಯಾರಿಸಿರುವುದಿಲ್ಲ. ಬಹುಶಃ ಅವರ ಭದ್ರತಾ ಪಡೆಯಾದ ಎಸ್‌ಪಿಜಿ ಅದನ್ನು ಮೊದಲೇ ಸಿದ್ಧಪಡಿಸಿರಬಹುದು” ಎಂದು ಸಂಶಯ ವ್ಯಕ್ತಪಡಿಸಿದ್ದರು.
ಇತ್ತ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಮತಾ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಪ್ರಧಾನಿಯವರು ಸಾಮಾನ್ಯ ಜನರಂತೆ ರಸ್ತೆ ಬದಿಯ ತಿಂಡಿ ಸೇವಿಸುವುದು ಸಣ್ಣ ವ್ಯಾಪಾರಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಕಳೆದ 15 ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಇಂತಹ ಸಣ್ಣ ವ್ಯಾಪಾರಿಗಳನ್ನು ತಲುಪುವ ಪ್ರಯತ್ನ ಮಾಡಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ | ಮೊದಲ ಹಂತದ ಚುನಾವಣೆಯಲ್ಲಿ ಹಿಂಸಾಚಾರ, ಬಿಜೆಪಿ ಅಭ್ಯರ್ಥಿ ಮೇಲೆ ದಾಳಿ
ಜೊತೆಗೆ, ಬಂಗಾಳದಲ್ಲಿ ಆಹಾರ ಪದ್ಧತಿಯ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ಸದ್ಯ ಬಂಗಾಳದ ಚುನಾವಣೆ ಜನರ ತಟ್ಟೆಯಲ್ಲಿರುವ ಆಹಾರದ ವಿಚಾರವಾಗಿಯೂ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.





