ಅಂತಾರಾಷ್ಟ್ರೀಯ ಮಟ್ಟದ ಪೀಠೋಪಕರಣಗಳ ಬೃಹತ್ ಮಳಿಗೆ ಬೆಂಗಳೂರಿನ ನಾಗಸಂದ್ರದ ಐಕಿಯಾ ಫುಡ್‌ಕೋರ್ಟ್‌ನಲ್ಲಿ ಗ್ರಾಹಕರೊಬ್ಬರು ಊಟ ಮಾಡುತ್ತಿರುವ ಸಂದರ್ಭದಲ್ಲಿ ಸತ್ತ ಇಲಿಯೊಂದು ಆಹಾರದ ತಟ್ಟೆ ಬಳಿ ಬಿದ್ದ ಘಟನೆ ನಡೆದಿದೆ.
ಶರಣ್ಯಶೆಟ್ಟಿ ಎಂಬ ಗ್ರಾಹಕರು ಐಕಿಯಾ ಬೆಂಗಳೂರಿನಲ್ಲಿ ತಮಗಾದ ಅನುಭವವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ತಾನು ಊಟ ಮಾಡುತ್ತಿರುವ ಸಂದರ್ಭದಲ್ಲಿ ಐಕಿಯಾ ಫುಡ್ ಟೇಬಲ್ ಮೇಲೆ ಏನು ಬಿದ್ದಿದೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ನಾವು ಆಹಾರ ಸೇವಿಸುತ್ತಿದ್ದಾಗ ಮೇಲಿಂದ ಸತ್ತ ಇಲಿ ಬಿದ್ದಿತು. ಅತ್ಯಂತ ವಿಲಕ್ಷಣ ಕ್ಷಣ ಇದಾಗಿತ್ತು” ಎಂದು ಐಕಿಯಾ ಸಂಸ್ಥೆಗೆ ಟ್ಯಾಗ್ ಮಾಡಿದ್ದಾರೆ.
ಐಕಿಯಾದ ಘಟನೆಯ ಬಗ್ಗೆ ಶರಣ್ಯ ಪೋಸ್ಟ್ ಮಾಡಿರುವ ಟ್ವೀಟ್‌ಗೆ ಹಲವರು ಆಕ್ರೋಶ ವ್ಯಕ್ತಪಡಿಸಿ ಮರುಟ್ವೀಟ್ ಮಾಡಿರುವುದಲ್ಲದೆ ಶೇರ್ ಕೂಡ ಮಾಡಿದ್ದಾರೆ.
ಓ ದೇವರೆ ಇದೇನಿದು, ಈ ಚಿತ್ರ ನೋಡಿದರೆ ಮತ್ತೆ ಅಲ್ಲಿಗೆ ಹೋಗಬಾರದು ಅನಿಸುತ್ತದೆ ಎಂದು ಒಬ್ಬರು ಟ್ವೀಟ್ ಮಾಡಿದರೆ, ಮತ್ತೊಬ್ಬರು ಇನ್ನು ಮುಂದೆ ಅಲ್ಲಿಗೆ ಹೋಗದಿರಲು ಇದೊಂದು ಚಿತ್ರ ಸಾಕು ಎಂದು ಎಂದು ಟ್ವೀಟ್ ಮಾಡಿದ್ದಾರೆ. ಆಹಾರದಲ್ಲಿ ಇಲಿ ಸೇರಿಸಿ ಕೊಡುತ್ತಾರೆಯೆ? ಪೀಠೋಪಕರಣಗಳಲ್ಲಿ ಇಲಿ ಇರುತ್ತದೆಯೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಲಾಗಿದೆ.
ಹಲವರು ಸಂಸ್ಥೆಯವರು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಐಕಿಯಾವನ್ನು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಒಬ್ಬರೇ ಸಾಕು ಎನ್ನುತ್ತಿದ್ದವರು 30 ಮೇಲ್ಪಟ್ಟು ಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ: ಖರ್ಗೆ ವಾಗ್ದಾಳಿ
ಶರಣ್ಯ ಅವರು ಪೋಸ್ಟ್ ಶೇರ್ ಮಾಡಿಕೊಂಡ ನಂತರ, ಟ್ವೀಟ್ ಅನ್ನು 71,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 267 ಮಂದಿ ಲೈಕ್ ಮಾಡಿದ್ದಾರೆ. 81 ಮಂದಿ ರೀಟ್ವೀಟ್ ಮಾಡಿದ್ದಾರೆ.
ಊಟದ ಟೇಬಲ್ ಬಳಿ ಸತ್ತ ಇಲಿ ಬಿದ್ದಿರುವುದಕ್ಕೆ ಐಕಿಯಾ ಕ್ಷಮೆ ಯಾಚಿಸಿದೆ. ”ನಾಗಸಂದ್ರದಲ್ಲಿ ನಡೆದ ಅಹಿತಕರ ಘಟನೆಗೆ ನಾವು ಕ್ಷಮೆ ಯಾಚಿಸುತ್ತೇವೆ. ನಾವು ಘಟನೆಯ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಮತ್ತು ಎಲ್ಲ ಮುನ್ನೆಚ್ಚರಿಕೆಯ ಪ್ರಯತ್ನಗಳನ್ನು ತೆಗೆದುಕೊಳ್ಳುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಗ್ರಾಹಕರು ಯಾವಾಗಲೂ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ” ಎಂದು ಟ್ವೀಟ್ ಮಾಡಲಾಗಿದೆ.