ಪ್ರಮುಖ ಕುಸ್ತಿಪಟು ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸಿ ಪ್ರಧಾನಿಗೆ ಪತ್ರ ಬರೆದ ನಂತರ ಮತ್ತೊಬ್ಬ ಅಗ್ರಮಾನ್ಯ ಕುಸ್ತಿಪಟು ವೀರೇಂದ್ರ ಸಿಂಗ್ ಅವರು ತಾನು ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್ ನೀಡುವುದಾಗಿ ಹೇಳಿ ಕ್ರೀಡೆಯನ್ನು ತ್ಯಜಿಸುವುದಾಗಿ ಘೋಷಿಸಿದ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರಿಗೆ ಬೆಂಬಲ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವೀರೇಂದ್ರ ಸಿಂಗ್, “ಪ್ರಧಾನಿ ನರೇಂದ್ರ ಮೋದಿ ಅವರೇ, ನನ್ನ ಸಹೋದರಿ ಮತ್ತು ದೇಶದ ಸುಪುತ್ರಿಯಾದ ಸಾಕ್ಷಿ ಮಲಿಕ್ ಅವರ ಬಗ್ಗೆ ಹೆಮ್ಮೆಪಡುತ್ತೇನೆ, ಪದ್ಮಶ್ರೀ ಪ್ರಶಸ್ತಿಯನ್ನು ನನ್ನ ಸಹೋದರಿ ಸಾಕ್ಷಿ ಮಲಿಕ್ ಅವರಿಗಾಗಿ ಹಿಂದಿರುಗಿಸುತ್ತೇನೆ. ದೇಶದ ಅಗ್ರ ಕ್ರೀಡಾಪಟುಗಳು ಈ ರೀತಿಯ ನಿರ್ಧಾರ ಕೈಗೊಳ್ಳುವಂತೆ ವಿನಂತಿಸುತ್ತೇನೆ” ಎಂದು ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುವುದಾಗಿ ಪ್ರಧಾನಿಗೆ ಪತ್ರ ಬರೆದ ನಂತರ ದೆಹಲಿಯ ಪ್ರಧಾನ ಮಂತ್ರಿ ಕಚೇರಿ ಮಾರ್ಗದ ಪಾದಚಾರಿ ರಸ್ತೆಯಲ್ಲಿ ಪದಕವನ್ನು ಇರಿಸಿದರು. ನಂತರ ಪೊಲೀಸರು ಅದನ್ನು ವಶಕ್ಕೆ ಪಡೆದರು.
”ಮಹಿಳಾ ಕುಸ್ತಿಪಟುಗಳಿಗೆ ಗೌರವ ಸಿಗದಿದ್ದಾಗ ನಾನು ಈ ಗೌರವಕ್ಕೆ ಅರ್ಹನಲ್ಲ, 40 ದಿನಗಳಿಂದ ರಸ್ತೆಗಿಳಿದಿದ್ದೇವೆ, ಆದರೆ ಸರ್ಕಾರ ನೀಡಿದ ಭರವಸೆ ಈಡೇರಿಲ್ಲ. ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ, ಒಬ್ಬ ವ್ಯಕ್ತಿ ವಿರುದ್ಧ. ನಾನು ನ್ಯಾಯಾಂಗವನ್ನು ನಂಬುತ್ತೇನೆ. ಆದರೆ ಇತ್ತೀಚಿಗೆ ನನಗೆ ವ್ಯವಸ್ಥೆಯಲ್ಲಿ ನಂಬಿಕೆಯಿಡಲು ಸಾಧ್ಯವಾಗುತ್ತಿಲ್ಲ” ಎಂದು ಬಜರಂಗ್ ಪೂನಿಯಾ ಪದಕವಿರಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಮಡಿಲಿನಲ್ಲಿರುವ ಕುಸ್ತಿಪಟುಗಳು: ಬ್ರಿಜ್ ಭೂಷಣ್ ಸಿಂಗ್
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ವಿಜೇಂದರ್ ಸಿಂಗ್ ಕೂಡ ನಿನ್ನೆ ಕುಸ್ತಿ ತ್ಯಜಿಸಿದ ಸಾಕ್ಷಿ ಮಲಿಕ್‌ಗೆ ಬೆಂಬಲ ಘೋಷಿಸಿದ್ದಾರೆ.
“ಒಲಿಂಪಿಕ್ ಪದಕ ವಿಜೇತರಿಗೆ ನ್ಯಾಯ ನೀಡದಿದ್ದರೆ, ನಾವು ಅದನ್ನು ಹೇಗೆ ಪಡೆಯುತ್ತೇವೆ ಎಂದು ಹೆಣ್ಣುಮಕ್ಕಳ ಪೋಷಕರು ಚಿಂತಿಸುತ್ತಾರೆ? ಪ್ರಧಾನಿ, ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಎಲ್ಲರೂ ಬಂದು ಇದು ಏಕೆ ಸಂಭವಿಸಿತು ಎಂದು ಉತ್ತರಿಸಬೇಕು. ನ್ಯಾಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಚನೆಯ ಮೇಲೆ ಇದು ಬಹಳಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ” ಎಂದು ವಿಜೇಂದರ್ ಸಿಂಗ್ ತಿಳಿಸಿದ್ದಾರೆ.
ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಭಾರತದ ಅಗ್ರಗಣ್ಯ ಕುಸ್ತಿಪಟುಗಳು ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಕುಸ್ತಿಪಟುಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಹಲವು ತಿಂಗಳುಗಳ ಕಾಲ ನವದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ನಂತರ ಅವರು ಜೂನ್‌ನಲ್ಲಿ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
मैं भी अपनी बहन और देश की बेटी के लिए पदम् श्री लौटा दूँगा, माननीय प्रधानमंत्री श्री @narendramodi जी को, मुझे गर्व है आपकी बेटी और अपनी बहन @SakshiMalik पर… जी क्यों…?
पर देश के सबसे उच्च खिलाड़ियों से भी अनुरोध करूँगा वो भी अपना निर्णय दे…@sachin_rt @Neeraj_chopra1 pic.twitter.com/MfVeYdqnkL
— Virender Singh (@GoongaPahalwan) December 22, 2023