ತಮಿಳುನಾಡಿನಲ್ಲಿ ‘ಇಂಡಿಯಾ’ ಒಕ್ಕೂಟದ ಒಳಗಿನ ಬಿರುಕು ಈಗ ಮತ್ತಷ್ಟು ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಹಾಗೂ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಒಗ್ಗೂಡಿ ಬಿಜೆಪಿಯನ್ನು ಎದುರಿಸಬೇಕು ಎಂಬ ಮಾಜಿ ಮಿತ್ರಪಕ್ಷ ವಿಸಿಕೆ ಪ್ರಸ್ತಾವನೆಯನ್ನು ಡಿಎಂಕೆ ತಿರಸ್ಕರಿಸಿದೆ.
ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಅವರು ಇತ್ತೀಚೆಗೆ ಕೇರಳ ಮತ್ತು ಪಶ್ಚಿಮ ಬಂಗಾಳದ ರಾಜಕೀಯ ಮಾದರಿಯೊಂದನ್ನು ಪ್ರಸ್ತಾಪಿಸಿದ್ದರು. ರಾಜ್ಯ ರಾಜಕೀಯದಲ್ಲಿ ಎದುರಾಳಿಗಳಾಗಿರುವ ಪಕ್ಷಗಳು, ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಒಕ್ಕೂಟದ ಪಾಲುದಾರರಾಗಿ ಒಟ್ಟಾಗಿ ಕೆಲಸ ಮಾಡುವ ಮಾದರಿ ಇದಾಗಿತ್ತು. ಈ ಪ್ರಸ್ತಾವನೆಗೆ ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿತ್ತು. ರಾಜ್ಯ ಮಟ್ಟದ ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಬಿಜೆಪಿಯ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.
ಈ ಸಲಹೆಯನ್ನು ಡಿಎಂಕೆ ಸ್ಪಷ್ಟವಾಗಿ ತಳ್ಳಿಹಾಕಿದೆ. ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷವು ಮೈತ್ರಿಕೂಟಕ್ಕೆ ದ್ರೋಹ ಬಗೆದಿದೆ ಎಂದು ಡಿಎಂಕೆ ಆರೋಪಿಸಿದೆ. ಅಲ್ಲದೆ, ರಾಜ್ಯದ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಂತಹ ಮಾದರಿ ಕೆಲಸ ಮಾಡುವ ಸಾಧ್ಯತೆಯಿಲ್ಲ ಎಂದು ಅದು ಖಡಾಖಂಡಿತವಾಗಿ ಹೇಳಿದೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿಎಂಕೆ ಸಂಸದ ಗಣಪತಿ ಪಿ. ರಾಜಕುಮಾರ್, “ಚುನಾವಣೆಯ ನಂತರ ಕೇವಲ ಸಚಿವ ಸ್ಥಾನಗಳನ್ನು ಪಡೆಯುವ ಉದ್ದೇಶದಿಂದ ಕಾಂಗ್ರೆಸ್, ಟಿವಿಕೆ ಜೊತೆ ಕೈಜೋಡಿಸುವ ಮೂಲಕ ಡಿಎಂಕೆಗೆ ಬೆನ್ನಿಗೆ ಚೂರಿ ಹಾಕಿದೆ. ಕಾಂಗ್ರೆಸ್, ಇಂಡಿಯಾ ಒಕ್ಕೂಟದ ವಿಶಾಲ ಹಿತಾಸಕ್ತಿಗಳ ಮೂಲಕ ಪರಿಸ್ಥಿತಿಯನ್ನು ಅರಿಯುವಲ್ಲಿ ವಿಫಲವಾಗಿದೆ ಮತ್ತು ಈಗ ಡಿಎಂಕೆಯ ಮನವೊಲಿಸಲು ವಿಸಿಕೆಯನ್ನು ರಾಯಭಾರಿಯಾಗಿ ಬಳಸಿಕೊಳ್ಳುತ್ತಿದೆ” ಎಂದು ತೀವ್ರ ವಾಗ್ದಾಳಿ ನಡೆಸಿದರು. “ಕೇರಳ ಮತ್ತು ಪಶ್ಚಿಮ ಬಂಗಾಳದ ಮಾದರಿಯು ತಮಿಳುನಾಡಿನಲ್ಲಿ ಕೆಲಸ ಮಾಡುವುದಿಲ್ಲ. ವಿಸಿಕೆಯ ಈ ಪ್ರಸ್ತಾವನೆಯನ್ನು ಡಿಎಂಕೆ ನಾಯಕತ್ವ ಒಪ್ಪುತ್ತದೆ ಎಂದು ನನಗನ್ನಿಸುತ್ತಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಡಿಎಂಕೆ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಕಾಂಗ್ರೆಸ್, ತನ್ನ 9 ವರ್ಷಗಳ ಹಳೆಯ ಮೈತ್ರಿಯನ್ನು ಮುರಿದುಕೊಂಡು ಅಲ್ಪಮತದ ಟಿವಿಕೆ ಸರ್ಕಾರಕ್ಕೆ ಬೆಂಬಲ ಸೂಚಿಸಿತ್ತು. ವಿಸಿಕೆ ಮತ್ತು ಐಯುಎಂಎಲ್ ಕೂಡ ಸರ್ಕಾರವನ್ನು ಸೇರಿಕೊಂಡರೆ, ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಹೊರಗಿನಿಂದ ಬೆಂಬಲ ನೀಡಿವೆ. ತಮಿಳುನಾಡಿನ ರಾಜಕೀಯ ಇದೀಗ ಬದಲಾಗಿದ್ದು, ಟಿವಿಕೆ ಮೂರನೇ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿ ಅಧಿಕಾರದಲ್ಲಿದೆ. ಪ್ರಸ್ತುತ ಸಂಸತ್ತಿನಲ್ಲಿ ಯಾವುದೇ ಸಂಸದರನ್ನು ಹೊಂದಿಲ್ಲದ ಟಿವಿಕೆಯನ್ನು ಇಂಡಿಯಾ ಒಕ್ಕೂಟದ ಭಾಗವೆಂದು ಪರಿಗಣಿಸಬೇಕೇ ಎಂಬ ಬಗ್ಗೆಯೂ ಡಿಎಂಕೆ ಪ್ರಶ್ನಿಸಿದೆ. ಹಾಗಿದ್ದರೂ, ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ಬಿಜೆಪಿಯೇ ತಮ್ಮ ಪ್ರಮುಖ ಸೈದ್ಧಾಂತಿಕ ವಿರೋಧಿ ಎಂಬುದನ್ನು ಡಿಎಂಕೆ ಎತ್ತಿಹಿಡಿದಿದೆ.
ಈ ನಡುವೆ, ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಅವರು ವಿಸಿಕೆ ಪ್ರಸ್ತಾವನೆಯನ್ನು ಬೆಂಬಲಿಸಿ, “ಇದು ಭಾರತ ಮತ್ತು ಅದರ ಭವಿಷ್ಯದ ಪ್ರಶ್ನೆ. ಪ್ರಜಾಪ್ರಭುತ್ವದ ಪ್ರತಿಯೊಂದು ಅಡಿಪಾಯವನ್ನು ನಿಯಂತ್ರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ದೇಶವನ್ನು ಉಳಿಸಲು ನಾವು ಒಟ್ಟಾಗಿ ನಡೆಯಬೇಕಿದೆ” ಎಂದು ಹೇಳಿದ್ದಾರೆ.
ಆದರೆ ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್ ಅವರು, “ತಿರುಮಾವಳವನ್ ಅವರು ಮೊದಲು ಮುಖ್ಯಮಂತ್ರಿ ವಿಜಯ್ ಅವರ ಬಳಿ ಮಾತನಾಡಲಿ. ವಿಜಯ್ ಅವರು ಡಿಎಂಕೆಯನ್ನು ತಮ್ಮ ಪ್ರಮುಖ ರಾಜಕೀಯ ಶತ್ರು ಎಂದು ಪದೇ ಪದೇ ಹೇಳುತ್ತಿದ್ದಾರೆ, ಹೀಗಿರುವಾಗ ನಾವು ಅವರೊಂದಿಗೆ ಹೇಗೆ ಇರಲು ಸಾಧ್ಯ?” ಎಂದು ಮರುಪ್ರಶ್ನಿಸಿದ್ದಾರೆ.




