ಪಹಲ್ಗಾಮ್ ದಾಳಿಯ ಬಳಿಕ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಅನ್ನು ಉದ್ದೇಶಿಸಿ ಮೊದಲ ಬಾರಿಗೆ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಪರಮಾಣು ಅಣ್ವಸ್ತ್ರ ದಾಳಿಯಂತಹ ಯಾವುದೇ ಬೆದರಿಕೆಗೆ ಭಾರತ ಹೆದರುವುದಿಲ್ಲ” ಎಂದು ಹೇಳಿದ್ದಾರೆ.
‘ಆಪರೇಷನ್ ಸಿಂಧೂರ್’ ಅನ್ನು ಯಶಸ್ವಿಯಾಗಿ ನಡೆಸಿದ ಭಾರತದ ಸಶಸ್ತ್ರ ಪಡೆಗಳಿಗೆ ಮೊದಲು ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ, “ಯುದ್ಧರಂಗದಲ್ಲಿ ಪಾಕಿಸ್ತಾನಕ್ಕೆ ಭಾರತ ಎಂದಿಗೂ ಸೋತಿಲ್ಲ. ಭಯೋತ್ಪಾದನೆ ಮತ್ತು ಮಾತುಕತೆ ಯಾವತ್ತೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಕೂಡ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಅದೇ ರೀತಿ ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
“ಭಾರತದ ಮೇಲೆ ಪರಮಾಣು ಅಣ್ವಸ್ತ್ರ ದಾಳಿ ಮಾಡುತ್ತೇವೆ ಎಂಬ ಬೆದರಿಕೆ ಹಾಕಿ, ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಆದರೆ, ಅಂತಹ ಯಾವುದೇ ಬೆದರಿಕೆಗೆ ಭಾರತ ಹೆದರಲ್ಲ. ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ, ನಾವು ಸ್ಪಷ್ಟವಾದ ಉತ್ತರ ನೀಡಲು ಸಾಧ್ಯವಿದೆ ಎಂದು ಆಪರೇಷನ್ ಸಿಂಧೂರ್ ಮೂಲಕ ತೋರಿಸಿಕೊಟ್ಟಿದ್ದೇವೆ” ಎಂದು ಪ್ರಧಾನಿ ತಿಳಿಸಿದ್ದಾರೆ.
“ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟ, ಪ್ರಯತ್ನಗಳನ್ನು ಪಾಕಿಸ್ತಾನ ಬೆಂಬಲಿಸಬೇಕಿತ್ತು. ಆದರೆ, ಅದರ ಬದಲು, ಪಾಕಿಸ್ತಾನವು ನಮ್ಮ ದೇಶದ ಶಾಲೆಗಳು, ಕಾಲೇಜುಗಳು, ಗುರುದ್ವಾರಗಳು, ದೇವಾಲಯಗಳು, ವಸತಿ ಪ್ರದೇಶಗಳು ಮತ್ತು ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿದೆ. ಈ ಕ್ರಮಗಳು ಪಾಕಿಸ್ತಾನವು ಭಯೋತ್ಪಾದನೆಗೆ ನೆರವು ನೀಡುತ್ತಿರುವುದನ್ನು ಸಂಪೂರ್ಣವಾಗಿ ಜಗತ್ತಿನ ಮುಂದೆ ಬಹಿರಂಗಪಡಿಸಿದವು” ಎಂದು ತಮ್ಮ 20 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ.
“ಭಾರತದ ಉನ್ನತ ವಾಯು ರಕ್ಷಣಾ ವ್ಯವಸ್ಥೆಗಳ ವಿರುದ್ಧ ಅವರ ಡ್ರೋನ್ಗಳು ಮತ್ತು ಕ್ಷಿಪಣಿಗಳು ಹೇಗೆ ವಿಫಲವಾದವು ಎಂಬುದನ್ನು ಜಗತ್ತು ಕಂಡಿದೆ. ಅವರ ಡ್ರೋನ್ಗಳನ್ನು ಗಾಳಿಯಲ್ಲಿಯೇ ತಡೆದು ನಾಶಪಡಿಸಿತು. ಪಾಕಿಸ್ತಾನ ನಮ್ಮ ಗಡಿಗಳ ಮೇಲೆ ದಾಳಿ ಮಾಡಲು ಗುರಿಯನ್ನು ಹೊಂದಿದ್ದರೂ, ಭಾರತವು ಅವುಗಳ ಕೇಂದ್ರಭಾಗದಲ್ಲಿ ಅವುಗಳನ್ನು ಹೊಡೆಯುವ ಮೂಲಕ ಪ್ರತಿಕ್ರಿಯಿಸಿತು. ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್ಗಳು ಪಾಕಿಸ್ತಾನದ ಪ್ರಮುಖ ವಾಯುಪಡೆಯ ನೆಲೆಗಳನ್ನು ಯಶಸ್ವಿಯಾಗಿ ನಾಶಪಡಿಸಿದವು. ಕೇವಲ ಮೂರು ದಿನಗಳಲ್ಲಿ, ಭಾರತವು ಪಾಕಿಸ್ತಾನ ಎಂದಿಗೂ ನಿರೀಕ್ಷಿಸದ ಪ್ರಮಾಣದಲ್ಲಿ ಹಾನಿಯನ್ನುಂಟುಮಾಡಿತು. ಇದರ ನಂತರ, ಪಾಕಿಸ್ತಾನವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿತು. ಮೇ 10 ರಂದು ಅವರ ಪಡೆಗಳು ನಮ್ಮ ಡಿಜಿಎಂಒ ಅವರನ್ನು ಸಂಪರ್ಕಿಸುವ ಹೊತ್ತಿಗೆ, ಭಾರತವು ಅದಾಗಲೇ ಪಾಕಿಸ್ತಾನದ ಪ್ರಮುಖ ಭಯೋತ್ಪಾದಕ ಕೇಂದ್ರಗಳನ್ನು ನಾಶಪಡಿಸಿತ್ತು,” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
“ನಮ್ಮ ಸಶಸ್ತ್ರ ಪಡೆಗಳಿಗೆ ನಾನು ನಮಸ್ಕರಿಸುತ್ತೇನೆ. ನಮ್ಮ ಧೈರ್ಯಶಾಲಿ ಸೈನಿಕರು ಆಪರೇಷನ್ ಸಿಂಧೂರ್ ಸಮಯದಲ್ಲಿ ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಯಶಸ್ಸನ್ನು ಸಾಧಿಸಿದರು. ಈ ವಿಜಯವನ್ನು ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಸಮರ್ಪಿಸಲಾಗಿದೆ. ಸೈನ್ಯವು ಕಷ್ಟಪಟ್ಟು ಕೆಲಸ ಮಾಡಿತು. ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ನಡೆದ ಗುಂಡಿನ ದಾಳಿಯು ನನಗೆ ವೈಯಕ್ತಿಕವಾಗಿ ನೋವುಂಟು ಮಾಡಿದೆ. ಅಮಾಯಕ ಜನರನ್ನು ಅವರ ಕುಟುಂಬಗಳ ಮುಂದೆಯೇ ಕೊಲ್ಲಲಾಯಿತು. ಭಯೋತ್ಪಾದಕರಿಗೆ ಭಾರೀ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.