26/11ರ ಮುಂಬೈ ದಾಳಿಯ ಪ್ರಮುಖ ರೂವಾರಿ ಭಯೋತ್ಪಾದಕ ಹಫೀಜ್ ಸಹೀದ್ನನ್ನು ಭಾರತಕ್ಕೆ ಹಸ್ತಾಂತರಿಸಲು ವಿದೇಶಾಂಗ ಇಲಾಖೆ ಪಾಕಿಸ್ತಾನಕ್ಕೆ ಮನವಿ ಮಾಡಿದೆ.
ಈ ಬಗ್ಗೆ ಪ್ರಕಟಣೆ ಹೊಡಿಸಿರುವ ವಿದೇಶಾಂಗ ಇಲಾಖೆಯ ವಕ್ತಾರರಾದ ಅರಿಂದಮ್ ಬಗ್ಚಿ, “ಭಾರತದಲ್ಲಿ ಹಲವಾರು ಪ್ರಕರಣಗಳಿಗೆ ಬೇಕಾಗಿರುವ ಉಗ್ರಗಾಮಿ ಹಫೀಜ್ ಸಹೀದ್ನನ್ನು ವಿಚಾರಣೆ ಸಲುವಾಗಿ ಭಾರತಕ್ಕೆ ಹಸ್ತಾಂತರಿಸಬೇಕು” ಎಂದು ಮನವಿ ಮಾಡಿದ್ದಾರೆ.
2008ರ ಮುಂಬೈ ದಾಳಿಯ ಪ್ರಮುಖ ರೂವಾರಿಯಾದ ಕುಖ್ಯಾತ ಭಯೋತ್ಪಾದಕನಾದ ಹಫೀಜ್ ಸಹೀದ್ಗೆ ಅಮೆರಿಕವು 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ದಾಳಿಯಲ್ಲಿ 166 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಫೀಜ್ ಸಹೀದ್ ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಭಯೋತ್ಪಾದಕನಾಗಿದ್ದಾನೆ.
“ಭಾರತದಲ್ಲಿನ ನಿಗದಿತ ವಿಚಾರಣೆಯ ಸಲುವಾಗಿ ಆತನನ್ನು ಹಸ್ತಾಂತರಿಸುವಂತೆ ನಾವು ಸೂಕ್ತ ಬೆಂಬಲಿತ ಆಧಾರಗಳನ್ನು ಪಾಕಿಸ್ತಾನ ಸರ್ಕಾರಕ್ಕೆ ಕಳುಹಿಸಿದ್ದೇವೆ. ಇತರ ದೇಶಗಳ ಚುನಾವಣಾ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಯಿಸುವುದಿಲ್ಲ. ಆದಾಗ್ಯೂ, ತೀವ್ರಗಾಮಿಗಳು ಚುನಾವಣೆಯಲ್ಲಿ ಭಾಗವಹಿಸುವುದು, ಮುಖ್ಯವಾಹಿನಿಗೆ ಬರುವುದು ಪಾಕಿಸ್ತಾನದಲ್ಲಿ ಹೊಸದೇನಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?
“ಇಂತಹ ಘಟನೆಗಳು ನಮ್ಮ ದೇಶದ ಭದ್ರತೆಗೆ ತೀವ್ರ ಪರಿಣಾಮ ಉಂಟು ಮಾಡುತ್ತವೆ. ನಮ್ಮ ದೇಶದ ಭದ್ರತಾ ಹಿತದೃಷ್ಟಿಯಿಂದ ನಮ್ಮ ಕಡೆಯಿಂದ ಎಲ್ಲ ಬೆಳವಣಿಗೆಗಳ ಬಗ್ಗೆ ಮೇಲ್ವಿಚಾರಣೆಗೊಳಿಸುತ್ತೇವೆ” ಎಂದು ಅರಿಂದಮ್ ಬಗ್ಚಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಪಿಎಂಎಂಎಲ್ ಪಕ್ಷದಿಂದ ಹಫೀಜ್ ಸಯೀದ್ ಪುತ್ರ ಸ್ಪರ್ಧಿಸುತ್ತಿರುವ ವರದಿಗಳು ಬಂದ ನಂತರದಲ್ಲಿ ಭಾರತದಿಂದ ಪ್ರತಿಕ್ರಿಯೆ ಬಂದಿದೆ. ಹಫೀಜ್ ಸಯೀದ್ ಪುತ್ರ ತಹ್ಲಾ ಸಹೀದ್ ಲಾಹೋರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾನೆ.
ಹಫೀಜ್ ಸಹೀದ್ ಉಗ್ರಗಾಮಿ ಸಂಘಟನೆಯಾದ ಎಲ್ಇಟಿಯ ಪ್ರಮುಖ ನಾಯಕನಾಗಿದ್ದು, ಆತನ ಪುತ್ರ ತಹ್ಲಾ ಸಹೀದ್ ಕೂಡ ಎಲ್ಇಟಿಯ ಎರಡನೇ ಪ್ರಮುಖ ನಾಯಕನಾಗಿದ್ದಾನೆ.