ಲೆಬನಾನ್ ಮತ್ತು ಸಿರಿಯಾದ ಮೇಲೆ ಇಸ್ರೇಲ್ ನಿರಂತರ ದಾಳಿ ಮಾಡುತ್ತಿದೆ. ಆ ದೇಶಗಳಲ್ಲಿ ಸಾವಿರಾರು ಪೇಜರ್‌ಗಳನ್ನು ಇಸ್ರೇಲ್ ಸ್ಪೋಟಿಸಿದೆ. ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೆ, ಕಳೆದೊಂದು ವರ್ಷದಿಂದ ಇಸ್ರೇಲ್ ಎಸಗುತ್ತಿರುವ ಕ್ರೌರ್ಯಕ್ಕೆ ಪ್ಯಾಲೆಸ್ತೀನ್ ಸೇರಿದಂತೆ ನಾನಾ ರಾಷ್ಟ್ರಗಳ 45,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಇತ್ತೀಚೆಗೆ ನಡೆದಿರುವ ಪೇಜರ್ ಸ್ಫೋಟಗಳಿಂದ ಭಾರತದ ಮೋದಿ ಸರ್ಕಾರ ಬೆಚ್ಚಿಬಿದ್ದಿದೆ. ಭಯಭೀತಗೊಂಡಿದೆ. ದೇಶದಲ್ಲಿ ಯಾವುದೇ ದಾಳಿಗಳು ನಡೆಯದಂತೆ ಎಚ್ಚರವಹಿಸಲು ಕೆಲವು ಕ್ರಮಗಳನ್ನೂ ತೆಗೆದುಕೊಳ್ಳುತ್ತಿದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಪ್ರಮುಖ ನಿರ್ಧಾರಗಳಲ್ಲಿ ಒಂದು, ಚೀನಾದಲ್ಲಿ ತಯಾರಾಗುವ ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ಕಣ್ಗಾವಲು ಉಪಕರಣಗಳಿಗೆ ನಿರ್ಬಂಧ ಹೇರುವುದು. ಈ ನಿರ್ಬಂಧಕ್ಕೆ ಮೋದಿ ಸರ್ಕಾರ ಕೊಡುತ್ತಿರುವ ಕಾರಣ – ಲೆಬನಾನ್ ಮತ್ತು ಸಿರಿಯಾದಲ್ಲಿ ಪೇಜರ್ ದಾಳಿ ನಡೆದಂತೆ, ಚೀನಾ ಕೂಡ ಸಿಸಿಟಿವಿ ಕ್ಯಾಮೆರಾ ಮತ್ತು ಕಣ್ಗಾವಲು ಉಪಕರಣಗಳ ಮೂಲಕ ಭಾರತದಲ್ಲಿನ ಚಲನ-ವಲನಗಳನ್ನು ಗಮನಿಸಿ, ಭಾರತದಲ್ಲೂ ಪೇಜರ್ ದಾಳಿ ನಡೆಸಬಹುದು ಎಂದು ವಾದ ಮಂಡಿಸುತ್ತಿದೆ.
ಮಾತ್ರವಲ್ಲದೆ, ಈ ನಿರ್ಬಂಧವು ಕಣ್ಗಾವಲು ಉದ್ಯಮದಲ್ಲಿ ಸ್ಥಳೀಯ ಮಾರಾಟಗಾರರಿಗೆ ಅನುಕೂಲ ಮಾಡಿಕೊಡುತ್ತದೆ. ಸ್ವದೇಶಿ ಕಂಪನಿಗಳಿಗೆ ಸಹಾಯವಾಗುತ್ತದೆ. ಚೀನಾ ನಿರ್ಮಿತ ಉಪಕರಣಗಳ ಮೇಲಿನ ಅವಲಂಬನೆಯನ್ನು ತಪ್ಪಿಸುತ್ತದೆ ಹಾಗೂ ಮೇಕ್ ಇನ್ ಇಂಡಿಯಾಕ್ಕೆ ಬಲ ಬರುತ್ತದೆ ಎಂದೂ ಹೇಳುತ್ತಿದೆ. ಕೇಂದ್ರ ಸರ್ಕಾರದ ‘ಹೊಸ ಕಣ್ಗಾವಲು ನೀತಿ’ಯು ಅಕ್ಟೋಬರ್ 8ರಂದು ಜಾರಿಗೆ ಬರುವ ಸಾಧ್ಯತೆಯೂ ಇದೆ.
ಭಾರತದ ಮಾರುಕಟ್ಟೆಯಲ್ಲಿ ಸ್ವದೇಶಿ ಕಂಪನಿ CP Plus ಹಾಗೂ ಚೀನಾದ Hikvision ಮತ್ತು Dahua ಕಂಪನಿಗಳ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಮೂರು ಕಂಪನಿಗಳು ಭಾರತದ ಕಣ್ಗಾವಲು ಮಾರುಕಟ್ಟೆಯಲ್ಲಿ ಶೇ. 60ರಷ್ಟು ಉತ್ಪನ್ನಗಳನ್ನು ಒಳಗೊಂಡಿವೆ. ಇನ್ನುಳಿದಂತೆ ಇಸ್ರೇಲಿ ಕಂಪನಿಗಳ ಸಿಸಿಟಿವಿ ಕ್ಯಾಮೆರಾ ಮತ್ತು ಕಣ್ಗಾವಲು ವ್ಯವಸ್ಥೆಯ ಮೇಲೂ ಭಾರತ ಅವಲಂಬಿತವಾಗಿದೆ. ಮಾತ್ರವಲ್ಲದೆ, ಯುದ್ಧೋಪಕರಣಗಳು ಸೇರಿದಂತೆ ರಕ್ಷಣಾ ವ್ಯವಸ್ಥೆಯ ಪ್ರಮುಖ ಸಾಮಗ್ರಿಗಳನ್ನೂ ಇಸ್ರೇಲ್‌ನಿಂದ ಭಾರತ ಖರೀದಿಸುತ್ತಿದೆ.
ಹಾಗೆ ನೋಡಿದರೆ, ಸಿಸಿಟಿವಿ ಕ್ಯಾಮೆರಾ, ಕಣ್ಗಾವಲು ಹಾಗೂ ರಕ್ಷಣಾ ಉಪಕರಣಗಳ ಮಾರಾಟದ ಮೇಲೆ ನಿರ್ಬಂಧ ಹೇರುವುದೇ ಆದರೆ, ಮೊದಲು ಇಸ್ರೇಲಿ ಉಪಕರಣಗಳ ಮೇಲೆಯೇ ಹೇರಬೇಕು. ಯಾಕೆಂದರೆ, ಲೆಬನಾನ್ ಮತ್ತು ಸಿರಿಯಾ ಮೇಲೆ ಪೇಜರ್ ದಾಳಿ ನಡೆಸಿದ್ದು, ಇದೇ ಇಸ್ರೇಲ್. ಗಾಜಾದಲ್ಲಿ 40,000ಕ್ಕೂ ಹೆಚ್ಚು ಜನರನ್ನು ಕೊಂದಿರುವುದು ಕೂಡ ಇದೇ ಇಸ್ರೇಲ್. ಲೆಬನಾನ್, ಪ್ಯಾಲೆಸ್ತೀನ್, ಸಿರಿಯಾ, ಇರಾನ್ ಮೇಲೆ ದಾಳಿ ನಡೆಸಿ ಕ್ರೌರ್ಯ ಮೆರೆಯುತ್ತಿರುವುದೂ ಇದೇ ಇಸ್ರೇಲ್.
ಪ್ರಪಂಚದಲ್ಲಿಯೇ ಬೇಹುಗಾರಿಕೆ ಉದ್ಯಮದಲ್ಲಿ ಇಸ್ರೇಲ್ ಅಗ್ರಸ್ಥಾನದಲ್ಲಿದೆ. ಇದೇ ಬೇಹುಗಾರಿಕೆ ಅರ್ಥಾತ್ ಕಣ್ಗಾವಲು ಉದ್ಯಮವನ್ನು ಬಳಸಿಯೇ ಲೆಬನಾನ್ ಮತ್ತು ಸಿರಿಯಾ ಮೇಲೆ ಇಸ್ರೇಲ್ ಪೇಜರ್ ದಾಳಿ ನಡೆಸಿದೆ. ಹೀಗಿರುವಾಗ, ಭಾರತ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ್ದು ಇಸ್ರೇಲ್ ವಿಚಾರದಲ್ಲಿ. ಆದರೆ, ಇಸ್ರೇಲ್ ಹಿಂದೆ ಅಮೆರಿಕಾ ಇರುವುದರಿಂದ ಮೋದಿ ಅವರು ಇಸ್ರೇಲ್ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಚೀನಾ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ.
ಅಂದಹಾಗೆ, ಮೋದಿ ಅವರು ಭಾರತದ ಪ್ರಧಾನಿಯಾದ ಮೇಲೆ ಭಾರತ ಸರ್ಕಾರ ಮತ್ತು ಇಸ್ರೇಲ್ ನಡುವಿನ ಸಂಬಂಧ ಒಂದು ಹೆಜ್ಜೆ ಮುಂದೆ ಹೋಗಿದೆ. ಇಸ್ರೇಲ್‌ನಿಂದ ರಕ್ಷಣಾ ಸಲಕರಣೆಗಳನ್ನು ಖರೀದಿಸಲು ಮೋದಿ ಸರ್ಕಾರ ಹೆಚ್ಚು ಉತ್ಸುಕವಾಗಿದೆ. ಗಾಜಾ ಮೇಲೆ ಇಸ್ರೇಲ್ ಎಸಗಿದ ಕ್ರೌರ್ಯವನ್ನು ಇಡೀ ಭಾರತ ಖಂಡಿಸಿದರೂ, ಮೋದಿ ಸರ್ಕಾರ ಇಸ್ರೇಲ್ ಪರವಾಗಿ ನಿಲುವು ತಳೆದಿತ್ತು. ಇಂತಹ ಸಂದರ್ಭದಲ್ಲಿ ಭಾರತದ ಸಖ್ಯವನ್ನು ಉಳಿಸಿಕೊಳ್ಳುವುದು ಇಸ್ರೇಲ್‌ಗೆ ಅತ್ಯಗತ್ಯವಾಗಿದೆ.
ಈ ವರದಿ ಓದಿದ್ದೀರಾ?: ಇಸ್ರೇಲ್ – ಇರಾನ್ ಯುದ್ಧ ಛಾಯೆ ಬಾಪುವಿನ ನಾಡಿನಿಂದ ಕಾಣುವುದು ಹೀಗೆ…
ಹೀಗಾಗಿಯೇ, ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು, ಭಾರತದೊಂದಿಗೆ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ಇಸ್ರೇಲ್ ಯಾವುದೇ ಕ್ರಮಕ್ಕೂ ಮುಂದಾಗಬಹುದು. ಹೇಳಿಕೇಳಿ, ಬೇಹುಗಾರಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹಾಗೂ ಮುಂದಿರುವ ಇಸ್ರೇಲ್, ತನ್ನ ಮಾರುಕಟ್ಟೆ ವಿಸ್ತರಣೆಗಾಗಿ, ಭಾರತವನ್ನು ತನ್ನತ್ತ ಸೆಳೆದುಕೊಳ್ಳುವುದಕ್ಕಾಗಿ ಭಾರತದಲ್ಲೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸ್ಪೋಟಿಸಿ, ಆ ದಾಳಿಯನ್ನ ಬೇರೆ ಯಾರೋ ನಡೆಸಿದ್ದಾರೆಂದು ಮತ್ತೊಬ್ಬರ ತಲೆಗೆ ಕಟ್ಟುವಷ್ಟು ಇಸ್ರೇಲ್ ಸಮರ್ಥವಾಗಿದೆ.
ಅಂತಹ ಕೃತ್ಯಗಳನ್ನು ಈಗಾಗಲೇ ನಡೆಸಿದೆ. ಅಂಥದ್ದೇ ವಿಧ್ವಂಸಕ ಕೃತ್ಯಗಳಿಂದ ಕುಖ್ಯಾತಿ ಪಡೆದಿರುವ ಇಸ್ರೇಲ್ ವಿಚಾರದಲ್ಲಿ ಭಾರತ ಹೆಚ್ಚು ಎಚ್ಚರಿಕೆ ವಹಿಸಬೇಕು. ಇಸ್ರೇಲ್‌ಗೂ ‘ಹೊಸ ಕಣ್ಗಾವಲು ನೀತಿ’ ಅನ್ವಯವಾಗಬೇಕು. ಇಸ್ರೇಲಿ ಸಿಸಿಟಿವಿ ಕ್ಯಾಮೆರಾ, ಕಣ್ಗಾವಲು ಉಪಕರಣಗಳು ಹಾಗೂ ಇತರ ವಿದ್ಯುನ್ಮಾನ ಸಲಕರಣೆಗಳಿಗೂ ಭಾರತ ಸರ್ಕಾರ ನಿರ್ಬಂಧ ಹೇರಬೇಕು.
ಅದು ಬಿಟ್ಟು, ಕೇವಲ ಚೀನಾದ ಉಪಕರಣಗಳಿಗೆ ನಿರ್ಬಂಧ ಹೇರುವುದು, ಕಳೆದ ವರ್ಷ ಚೀನಾ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದಾಗ, 56 ಚೀನಾ ಆ್ಯಪ್‌ಗಳನ್ನು ನಿಷೇಧಿಸಿ, ಆಮೇಲೆ ಅದರ ಬಗ್ಗೆ ಮಾತನಾಡದೆ ಸುಮ್ಮನಾಗಿದ್ದಕ್ಕೆ ಸಮವಾಗುತ್ತದೆ. ಮತ್ತು ಮೂರ್ಖ ನಡೆ ಎಂದು ಗೇಲಿಗೊಳಗಾಗುತ್ತದೆ.