ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಸಂಬಂಧಿಸಿದಂತೆ ಭಾರತದ ರಾಯಭಾರಿ ಕಚೇರಿಯು ಬುಧವಾರ(ಮಾ.26) ಅಮೆರಿಕ ರಾಯಭಾರಿ ಕಚೇರಿಯ ಉಸ್ತುವಾರಿ ಉಪ ಮುಖ್ಯ ಅಧಿಕಾರಿ ಗ್ಲೋರಿಯಾ ಬಾರ್ಬೇನಾ ಅವರಿಗೆ ಸಮನ್ಸ್ ನೀಡಿ 40 ನಿಮಿಷಗಳ ಸಭೆ ಏರ್ಪಡಿಸಿತ್ತು.
ಸಭೆಯ ವಿವರಗಳು ಬಿಡುಗಡೆಯಾಗಿಲ್ಲ, ಆದರೆ ಮಾತನಾಡಿದ ರಾಯಭಾರಿ ಕಚೇರಿಯ ವಕ್ತಾರರು, ಅಬಕಾರಿ ಹಗರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಬಗ್ಗೆ ‘ನ್ಯಾಯೋಚಿತ ಹಾಗೂ ಪಾರದರ್ಶಕತೆ ನ್ಯಾಯ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುತ್ತೇವೆ ಎನ್ನುವ ಹೇಳಿಕೆಯ ಬಗ್ಗೆ ಮೇಲ್ವಿಚಾರಣೆಯ ಬಗ್ಗೆ ಸಭೆ ಕರೆಯಲಾಗಿತ್ತು ಎಂದು ತಿಳಿಸಿದರು.
ಕೇಜ್ರಿವಾಲ್ ಬಂಧನದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳ ನಂತರ ಇತ್ತೀಚಿಗಷ್ಟೆ ಜರ್ಮನಿ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೆ ಅಮೆರಿಕ ಕೂಡ ತನ್ನ ಪ್ರತಿಕ್ರಿಯೆ ನೀಡಿತ್ತು.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಗ್ಗೆ ನಾವು ನ್ಯಾಯೋಚಿತ ಹಾಗೂ ಪಾರದರ್ಶಕ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುತ್ತೇವೆ ಎಂದು ಅಮೆರಿಕ ವಕ್ತಾರರು ಇಮೇಲ್ ಮಾಡಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು.
ಜರ್ಮನಿ ಹೇಳಿಕೆ ನೀಡಿದ ನಂತರ ಭಾರತದ ಜರ್ಮನಿ ರಾಯಭಾರಿಯನ್ನು ಕರೆಸಿಕೊಂಡಿದ್ದ ಕೆಂದ್ರ ಸರ್ಕಾರ ತನ್ನ ಆಂತರಿಕ ವಿಷಯಗಳಲ್ಲಿ ತಲೆ ಹಾಕಿರುವುದರ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಭ್ರಷ್ಟರು ಬೇಕಾಗಿದ್ದಾರೆ’ ಇದು ಬಿಜೆಪಿಯ ಹೊಸ ಜಾಹೀರಾತು
ಜರ್ಮನಿಯ ವಿದೇಶಾಂಗ ಇಲಾಖೆಯ ವಕ್ತಾರರಾದ ಸೆಬಾಸ್ಟಿನ್ ಫಿಸ್ಚೇರ್ ಅವರು, ಕೇಜ್ರಿವಾಲರಂತೆ ಯಾರೆ ಆರೋಪಗಳನ್ನು ಎದುರಿಸುತ್ತಿದ್ದರೂ ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತ ವಿಚಾರಣೆ ನಡೆಸಬೇಕು ಎಂದು ಹೇಳಿದ್ದರು.
”ನಾವು ನ್ಯಾಯಾಂಗ ಸ್ವಾತಂತ್ರ್ಯದ ಸಂಬಂಧಿಸಿದ ಮಾನದಂಡಗಳನ್ನು ನಿರೀಕ್ಷಿಸುತ್ತೇವೆ ಹಾಗೂ ಈ ಪ್ರಕರಣದಲ್ಲಿ ಸಾಮಾನ್ಯ ಪ್ರಜಾಸತ್ತಾತ್ಮಕ ತತ್ವಗಳನ್ನು ಅಳವಡಿಸಬೇಕೆಂದು ಭಾವಿಸುತ್ತೇವೆ” ಎಂದು ಜರ್ಮನಿಯ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದರು.
ಈ ಹೇಳಿಕೆಯ ನಂತರ ಭಾರತ ಸರ್ಕಾರವು ಜರ್ಮನಿ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥರಾದ ಜಾರ್ಜ್ ಎಂಜ್ವೇಲಿಯರ್ ಅವರನ್ನು ಕರೆಸಿಕೊಂಡು ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿತ್ತು.
”ನಾವು ನಮ್ಮ ನ್ಯಾಯಾಂಗ ಪ್ರಕ್ರಿಯೆಯ ಆಂತರಿಕ ವ್ಯವಹಾರಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ಹಾಗೂ ನಮ್ಮ ನ್ಯಾಯಾಂಗ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವುದನ್ನು ಖಂಡಿಸುತ್ತೇವೆ. ಇಂತಹ ಪಕ್ಷಪಾತದ ಊಹೆಗಳು ಅನಗತ್ಯವಾದವು” ಎಂದು ಭಾರತ ಖಂಡಿಸಿತ್ತು.
