ಈ ದಿನ ಸಂಪಾದಕೀಯ | ‘ಭ್ರಷ್ಟರು ಬೇಕಾಗಿದ್ದಾರೆ’ ಇದು ಬಿಜೆಪಿಯ ಹೊಸ ಜಾಹೀರಾತು

Date:

ಬಿಜೆಪಿ ಎಂದರೆ ದೇಶಭಕ್ತರ ಪಕ್ಷವಲ್ಲ, ಹಿಂದುತ್ವ ಪ್ರತಿಪಾದಿಸುವ ಪಕ್ಷವಲ್ಲ, ಮುಸ್ಲಿಮರು ಮತ್ತು ಪಾಕಿಸ್ತಾನವನ್ನು ವಿರೋಧಿಸುವ ಪಕ್ಷವೂ ಅಲ್ಲ. ವಾಷಿಂಗ್ ಪೌಡರ್ ನಿರ್ಮಾ ಪಕ್ಷ. ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆದ ಕಳ್ಳರು, ಕೊಳಕರು, ಭ್ರಷ್ಟರು, ಲೂಟಿಕೋರರನ್ನು ಒಳ ಕರೆದುಕೊಂಡು ಶುದ್ಧ ಮಾಡುವ ಪಕ್ಷ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದೆ. ವಿಧಾನಸಭಾ ಚುನಾವಣೆಯನ್ನೂ ಗೆಲ್ಲದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಅಭ್ಯರ್ಥಿ ಮಾಡಿದೆ.

ಈ ಹಿಂದೆ ಅನಂತಕುಮಾರ್ ಹೆಗಡೆ, ‘ನಾವು ಬಂದಿರುವುದೇ ಸಂವಿಧಾನ ಬದಲಿಸಲಿಕ್ಕೆ’ ಎಂದಿದ್ದರು. ಇತ್ತೀಚೆಗೆ ‘400ಕ್ಕೂ ಹೆಚ್ಚಿನ ಸ್ಥಾನಗಳಿಂದ ಬಿಜೆಪಿ ಗೆಲ್ಲಿಸಿ, ಅದರ ಬಲದಿಂದ ಸಂವಿಧಾನ ಬದಲಿಸಲು ಸಾಧ್ಯವಾಗುತ್ತದೆ’ ಎಂದು ಸತ್ಯ ಬಿಚ್ಚಿಟ್ಟಿದ್ದರು.

ಆರು ಬಾರಿ ಸಂಸದರಾಗಿ, ಒಂದು ಸಲ ಕೇಂದ್ರ ಸಚಿವರಾದರೂ ಗೆಲ್ಲಿಸಿದ ಜನಕ್ಕೆ, ಕ್ಷೇತ್ರಕ್ಕೆ ಏನೂ ಮಾಡದ ಅನಂತಕುಮಾರ್ ಹೆಗಡೆ, ಸಮಾಜದಲ್ಲಿ ಒಡಕುಂಟುಮಾಡುವ ಭಾಷಣದಿಂದಲೇ ‘ಖ್ಯಾತಿ’ ಗಳಿಸಿದ್ದರು. ಹಿಂದುತ್ವ ಪ್ರತಿಪಾದಕರಾಗಿ ಬಿಜೆಪಿಗೆ ಬೇಕಾದವರಾಗಿದ್ದರು. ಸಣ್ಣ ಸಾವರ್ಕರ್ ಪುಸ್ತಕ ಬಿಡುಗಡೆಗೂ ದೆಹಲಿಯಿಂದ ಬೆಂಗಳೂರಿಗೆ ಬಂದು ವೀರಾವೇಷದ ಮಾತುಗಳನ್ನಾಡುತ್ತಿದ್ದರು. ಗೋದಿ ಮೀಡಿಯಾದ ಪತ್ರಕರ್ತರು, ಆ ಮಾತುಗಳನ್ನು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಬಿತ್ತರಿಸಿ, ವಿವಾದದ ಕಿಡಿ ಎಬ್ಬಿಸಿ, ತಮಾಷೆ ನೋಡುತ್ತಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂತಹ ಅನಂತಕುಮಾರ್ ಹೆಗಡೆ ಈಗ ಬಿಜೆಪಿಗೆ ಬೇಡವಾಗಿದ್ದಾರೆ. ಇದು ಚುನಾವಣಾ ಕಾಲವಾದ್ದರಿಂದ ಅಂಬೇಡ್ಕರ್ ಮತ್ತವರ ಸಂವಿಧಾನದ ವಿರುದ್ಧ ಮಾತನಾಡುವ ಹೆಗಡೆ ಈಗ ಬೇಡವಂತೆ. ಮತದಾರನನ್ನು ಮರೆತು ಬರೀ ದ್ವೇಷ ಕಾರುತ್ತಿದ್ದ ಹೆಗಡೆ ಸ್ಥಿತಿ ಈಗ ಹೇಳತೀರದಾಗಿದೆ.

ಇದೇ ವರ್ಗಕ್ಕೆ ಸೇರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್‌ರಿಗೂ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ಇಂಥದ್ದೇ ಮಾತುಗಳಿಗೆ ಹೆಸರಾದ ‘ಫೈರ್ ಬ್ರಾಂಡ್’ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ, ‘ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಆದಷ್ಟು ಗೋ ಬ್ಯಾಕ್ ಬೇರೆ ಎಲ್ಲಿಯೂ ಆಗಿಲ್ಲ. ಅಂತಹ ಶೋಭಾಗೆ ಟಿಕೆಟ್ ಕೊಡಿಸಿದ್ದಾರೆ. ಶೋಭಾಗೆ ಹಠ ಹಿಡಿದಂಗೆ, ನನ್ನ ಮಗನಿಗೆ ಯಾಕೆ ಹಠ ಹಿಡಿಯಲಿಲ್ಲ. ಯಡಿಯೂರಪ್ಪ ನನಗೆ ಮೋಸ ಮಾಡಿದ್ದಾರೆ’ ಎಂದು ಹರಿಹಾಯ್ದರು. ಮುಂದುವರೆದು ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಶಿವಮೊಗ್ಗಕ್ಕೆ ಪ್ರಧಾನಿ ಮೋದಿಯವರು ಬಂದರೂ, ಹೋಗದೆ ಮುನಿಸು ದಾಖಲಿಸಿದರು.

ಇವರಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಗಣ್ಣ ಕರಡಿ, ಮಂಗಳಾ ಅಂಗಡಿ, ಸಿದ್ದೇಶ್ವರ್ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ. ಟಿಕೆಟ್‌ಗಾಗಿ ಸ್ಪರ್ಧೆಯಲ್ಲಿದ್ದ ಸಿ.ಟಿ. ರವಿ, ಮಾಧುಸ್ವಾಮಿ, ರೇಣುಕಾಚಾರ್ಯ, ರವೀಂದ್ರನಾಥ್, ಅರವಿಂದ ಲಿಂಬಾವಳಿ, ಎಸ್.ಆರ್. ವಿಶ್ವನಾಥ್, ಬಿ.ಸಿ. ಪಾಟೀಲ್, ಸುಮಲತಾಗೂ ಟಿಕೆಟ್ ಕೊಡದೆ ಕಡೆಗಣಿಸಲಾಗಿದೆ. ಇದರಿಂದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಬಿಜೆಪಿಗರೇ ಬಂಡಾಯವೆದ್ದು, ಶಮನ ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಜೊತೆಗೆ, ಬಿಜೆಪಿಯಲ್ಲಿ ಹಿರಿಯರಿಗೂ ಇಲ್ಲ, ಆರೆಸೆಸ್ ಮಾತು ಕೇಳಿ ಬೆಂಕಿ ಉಗುಳುತ್ತಿದ್ದವರಿಗೂ ಇಲ್ಲ, ಛಾತಿ ಮತ್ತು ಚಾಲ್ತಿಯಲ್ಲಿ ಇರುವವರಿಗೂ ಇಲ್ಲ- ಬಿಜೆಪಿಯ ಮಾನದಂಡ ಬಿಜೆಪಿಗರಿಗೇ ಅರ್ಥವಾಗುತ್ತಿಲ್ಲ ಎನ್ನುವಂತಾಗಿದೆ.

ಆದರೆ, ಬಳ್ಳಾರಿಯ ಬೆಟ್ಟಗಳನ್ನು ಬರಿದಾಗಿಸಿದ ಗಣಿ ಲೂಟಿಕೋರ ಗಾಲಿ ಜನಾರ್ದನ ರೆಡ್ಡಿಯವರನ್ನು ಬಹಳ ಅದ್ದೂರಿಯಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇದು ಬಿಜೆಪಿಯ ನಾಯಕರಿಗೆ ಅಗಿಯಲು ಆಗದ, ನುಂಗಲು ಆಗದ ಸ್ಥಿತಿ ತಂದೊಡ್ಡಿದೆ. ಹೈಕಮಾಂಡಿನ ರಾಜಕೀಯ ನಡೆ ಬಗ್ಗೆ ಬೇಸರವಿದ್ದರೂ, ಬಹಿರಂಗವಾಗಿ ಬಾಯ್ಬಿಡದಂತೆ ಮಾಡಿದೆ.

ಈಗ ಬಿಜೆಪಿಗೆ ಉರಿಗೌಡ-ನಂಜೇಗೌಡರು ಬೇಡ, ಕುವೆಂಪು, ಅಂಬೇಡ್ಕರ್, ಬಸವಣ್ಣರ ಪಠ್ಯ ತಿರುಚುವ ವಕ್ರರು ಬೇಡ, ಹಿಜಾಬ್-ಹಲಾಲ್ ಬೆಂಕಿ ಹಚ್ಚುವವರು ಬೇಡ, ಆರೆಸ್ಸೆಸ್ ಕೂಡ ಬೇಡ. ಬದಲಿಗೆ ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರು ಬೇಕಾಗಿದ್ದಾರೆ. ತಾವೇ ಹೊರಗಿಟ್ಟಿದ್ದ ಯಡಿಯೂರಪ್ಪನವರನ್ನು ಒಳ ಕರೆದುಕೊಂಡಿದ್ದಾರೆ. ದೇವೇಗೌಡರ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಯಡಿಯೂರಪ್ಪನವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಬೇರೂರಲು, ಪಕ್ಷದೊಳಗಿನ ವಿರೋಧಿಗಳ ಹಲ್ಲು ಕೀಳಲು ಮುಂದಾಗಿದ್ದಾರೆ.

ಆ ನಿಟ್ಟಿನಲ್ಲಿ ಪ್ರಲ್ಹಾದ್ ಜೋಶಿ ವಿರುದ್ಧವಿದ್ದ ಜಗದೀಶ್ ಶೆಟ್ಟರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತಂದು, ಬೆಳಗಾವಿ ಟಿಕೆಟ್ ಕೊಡಿಸಿದ್ದಾರೆ. ಹಾರಾಡುತ್ತಿದ್ದ ರವಿ, ಸಿಂಹಗಳಿಗೆ ಟಿಕೆಟ್ ಇಲ್ಲದಂತೆ ನೋಡಿಕೊಂಡಿದ್ದಾರೆ. ಸದಾನಂದಗೌಡರನ್ನು ಸುಮ್ಮನಿರಿಸಿದ್ದಾರೆ. ಬಳ್ಳಾರಿಯ ಗಣಿ ಲೂಟಿಕೋರ ಜನಾರ್ದನ ರೆಡ್ಡಿಯನ್ನು ಪಕ್ಷಕ್ಕೆ ಕರೆತಂದಿದ್ದಾರೆ.

ಈ ಜನಾರ್ದನ ರೆಡ್ಡಿ 2004ರಲ್ಲಿ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಕೂಡಾವಳಿ ಸರ್ಕಾರಕ್ಕೆ ಶಾಸಕರನ್ನು ಖರೀದಿಸಿ ಜೆಸಿಬಿಯಲ್ಲಿ ತುಂಬಿಕೊಂಡು ಬಂದವರು. ಕರ್ನಾಟಕ ರಾಜಕಾರಣದಲ್ಲಿ ಗಣಿ ದೂಳೆಬ್ಬಿಸಿದವರು. ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ ಎಂಎಲ್ಸಿ ಆಗಿ, ಮಂತ್ರಿಯಾಗಿ, ಬಳ್ಳಾರಿ, ಗಂಗಾವತಿ, ಸೊಂಡೂರು ಭಾಗದ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿದವರು. ಸಹಕರಿಸಿದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿ ಜೈಲಿಗೂ ಕರೆದುಕೊಂಡು ಹೋದವರು.

ಒಂದಂತೂ ಸ್ಪಷ್ಟ: ಬಿಜೆಪಿಗೆ ಭ್ರಷ್ಟರು ಬೇಕಾಗಿದ್ದಾರೆ. ಬಿಜೆಪಿ ಎಂದರೆ ದೇಶಭಕ್ತರ ಪಕ್ಷವಲ್ಲ, ಹಿಂದುತ್ವ ಪ್ರತಿಪಾದಿಸುವ ಪಕ್ಷವಲ್ಲ, ಮುಸ್ಲಿಮರು ಮತ್ತು ಪಾಕಿಸ್ತಾನವನ್ನು ವಿರೋಧಿಸುವ ಪಕ್ಷವೂ ಅಲ್ಲ. ವಾಷಿಂಗ್ ಪೌಡರ್ ನಿರ್ಮಾ ಪಕ್ಷ. ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆದ ಕಳ್ಳರು, ಕೊಳಕರು, ಭ್ರಷ್ಟರು, ಲೂಟಿಕೋರರನ್ನು ಒಳ ಕರೆದುಕೊಂಡು ಶುದ್ಧ ಮಾಡುವ ಪಕ್ಷ.

ಕರ್ನಾಟಕದ ಪ್ರಜ್ಞಾವಂತ ಮತದಾರರು ಬಿಜೆಪಿಗರು ಮತ ಕೇಳಲು ಮನೆಬಾಗಿಲಿಗೆ ಬಂದಾಗ, ಚುನಾವಣಾ ಬಾಂಡ್ ಮತ್ತು ಭ್ರಷ್ಟರ ಬಗ್ಗೆ ಕೇಳಿ. ಮೋದಿಯವರ ‘ನಾ ಕಾವೂಂಗ ನಾ ಕಾನೇ ದೂಂಗ’ ಅಂದರೆ ಏನು ಎಂದು ಕೇಳಿ. ಪ್ರಶ್ನಿಸುವ ಹಕ್ಕನ್ನು ಸಂವಿಧಾನ ನಮಗೆ ಕಲ್ಪಿಸಿಕೊಟ್ಟಿದೆ, ಕಳೆದುಕೊಳ್ಳಬೇಡಿ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವೇಗೌಡರ ಧೃತರಾಷ್ಟ್ರ ಸಿಂಡ್ರೋಮ್ ಮತ್ತು ಮೋದಿ ವಾಷಿಂಗ್ ಮಷೀನ್

ಪ್ರಜ್ವಲ್ ರೇವಣ್ಣರ ಕೊಳಕು ಕೃತ್ಯ ಇಡೀ ಕುಟುಂಬಕ್ಕೇ ಗೊತ್ತಿತ್ತು. ಬಿಜೆಪಿ ರಾಷ್ಟ್ರೀಯ...

ಈ ದಿನ ಸಂಪಾದಕೀಯ | ವಾಟ್ಸ್ಯಾಪ್ ಯೂನಿವರ್ಸಿಟಿಯ ಭಕ್ತರೂ ಮತ್ತು ಮಹಾಪ್ರಭು ಮೋದಿಯೂ

ಸಂಪತ್ತಿನ ಸಮಾನ ಹಂಚಿಕೆ ಎನ್ನುವುದು ಒಂದು ಉದಾತ್ತ ಚಿಂತನೆಯಾಗಿದೆ. ಇದು ನಮ್ಮ...

ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ

ಮೋದಿಯವರು ಅಧಿಕಾರಲಾಲಸೆಯ ದುರಾಸೆಗೆ ಬಿದ್ದು ಸುಳ್ಳು ಹೇಳಿದರೆ, ಆ ಸುಳ್ಳಿನ ಹೇಳಿಕೆಗಳಿಗೆ...

ಈ ದಿನ ಸಂಪಾದಕೀಯ | ಸೂರತ್ ಸಂಸದನ ಅವಿರೋಧ ಆಯ್ಕೆಯ ಈ ಪ್ರಹಸನ ಅಪಾಯಕಾರಿ

ದೇಶದ ಸಂವಿಧಾನ ಪ್ರತಿಪಕ್ಷಕ್ಕೆ ಎತ್ತರದ ಸ್ಥಾನಮಾನ ಕಲ್ಪಿಸಿದೆ. ಪ್ರತಿಪಕ್ಷಗಳಿಲ್ಲದ ಜನತಂತ್ರ ಅಪೂರ್ಣ...