ಮಯನ್ಮಾರ್ ಗಡಿಯೊಂದಿಗೆ ಮುಕ್ತ ಸಂಚಾರ ವ್ಯವಸ್ಥೆಯನ್ನು ಭಾರತ ಸರ್ಕಾರ ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ನೂತನ ನಿಯಮದ ಹಿನ್ನೆಲೆ ಗಡಿ ಪ್ರದೇಶದಲ್ಲಿ ವಾಸಿಸುವ ಮಯನ್ಮಾರ್ ಪ್ರಜೆಗಳು ಭಾರತಕ್ಕೆ ಆಗಮಿಸಬೇಕಾದರೆ ವಿಸಾ ಪ್ರಸ್ತುತಪಡಿಸಬೇಕು.
ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಗೃಹ ಇಲಾಖೆ ಭಾರತ ಹಾಗೂ ಮಯನ್ಮಾರ್ ನಡುವೆ ಮುಕ್ತ ಸಂಚಾರ ವ್ಯವಸ್ಥೆಯನ್ನು ದೇಶದ ಆಂತರಿಕ ಭದ್ರತೆ ಹಾಗೂ ಈಶಾನ್ಯ ಭಾರತದ ಭೌಗೋಳಿಕ ರಚನೆಯ ನಿರ್ವಹಣೆ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ. ಕೇಂದ್ರ ವಿದೇಶಾಂಗ ಇಲಾಖೆ ರದ್ದುಗೊಳಿಸುವ ಪ್ರಕ್ರಿಯೆಯಲ್ಲಿರುವುದರಿಂದ, ಕೇಂದ್ರ ಗೃಹ ಇಲಾಖೆ ತತ್‌ಕ್ಷಣವೇ ಅಮಾನತುಗೊಳಿಸುವ ಶಿಫಾರಸ್ಸು ಕೈಗೊಂಡಿದೆ” ಎಂದು ತಿಳಿಸಿದ್ದಾರೆ.
ಕೆಂದ್ರ ಸರ್ಕಾರ ಗಡಿಯನ್ನು ರದ್ದುಗೊಳಿಸಲು ಕಳೆದ ತಿಂಗಳಿಂದಲೇ ಸಕ್ರಿಯ ಕಾರ್ಯಚರಣೆಯಲ್ಲಿ ತೊಡಗಿತ್ತು. ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಭಾರತ ಮಯನ್ಮಾರ್ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿ ಮುಕ್ತ ಸಂಚಾರ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ಕೇಂದ್ರ ಗೃಹ ಇಲಾಖೆಗೆ ಆಗ್ರಹಿಸಿದ್ದರು. ಉಭಯ ದೇಶಗಳ ಮುಕ್ತ ಸಂಚಾರ ವ್ಯವಸ್ಥೆಯಿಂದಾಗಿಯೆ ಮಣಿಪುರದಲ್ಲಿ ಹಿಂಸಾಚಾರ ಉಂಟಾಗಿತ್ತು ಎಂದು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ದಿಲ್ಲಿ ಚಲೋ ಮತ್ತು ಬಿಜೆಪಿಯ ಭಂಡತನ
1970ರ ದಶಕದಿಂದಲೂ ಭಾರತ ಹಾಗೂ ಮಯನ್ಮಾರ್ ದೇಶಗಳ ನಡುವೆ ಮುಕ್ತ ಸಂಚಾರ ವ್ಯವಸ್ಥೆಯಿದೆ. ಉಭಯ ದೇಶಗಳ 16 ಕಿ.ಮೀ ಗಡಿಯಲ್ಲಿ ವಾಸಿಸುವ ಬುಡಕಟ್ಟು ಜನರ ಸಂಚಾರಕ್ಕಾಗಿ ಈ ವ್ಯವಸ್ಥೆ ಜಾರಿಯಲ್ಲಿತ್ತು. ಎರಡು ದೇಶಗಳ ಜನರು ವ್ಯವಹಾರ ಸಂಬಂಧ ಗುರುತಿನ ಚೀಟಿ ತೋರಿಸಿ ಗಡಿ ದಾಟಬೇಕಿತ್ತು. ಇದು ಒಂದು ವರ್ಷದವರೆಗೂ ಮಾನ್ಯವಾಗಿತ್ತು. ಹಾಗೆ ಬಂದ ಎರಡೂ ದೇಶಗಳ ನಾಗರಿಕರು ಒಂದು ಭೇಟಿಯಲ್ಲಿ ಎರಡು ವಾರಗಳ ಕಾಲ ಉಳಿದುಕೊಳ್ಳಬಹುದಿತ್ತು.
ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆ ಮಣಿಪುರ ಸರ್ಕಾರ 2020ರಲ್ಲಿ ಮುಕ್ತ ಸಂಚಾರ ವ್ಯವಸ್ಥೆಯನ್ನು ರದ್ದುಗೊಳಿಸಿತ್ತು. ಫೆ.6 ರಂದು ಮಯನ್ಮಾರ್ ಗಡಿಗೆ ಹೊಂದಿಕೊಂಡ 1643 ಕಿ.ಮೀ ಪ್ರದೇಶದಲ್ಲಿ ತಂತಿ ಬೇಲಿ ಹಾಕುವುದಾಗಿ ಅಮಿತ್ ಶಾ ಘೋಷಿಸಿದ್ದರು.