ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ವರ್ಷವೂ ನಾವು ಗಿಡ ನೆಡುವ, ಪ್ರಕೃತಿ ಕುರಿತು ದೊಡ್ಡ ಭಾಷಣ ಬಿಗಿಯುವ, ಪ್ರಬಂಧ ಬರೆಯುವ, ಪರಿಸರ ರಕ್ಷಣೆಯ ಶಪಥ ಮಾಡುವ ಅದೇ ಹಳೇ ಆಚರಣೆಯನ್ನ ಮುಂದುವರಿಸಿದ್ದೇವೆ. ಆದರೆ, ಅವುಗಳನ್ನ ಕಾರ್ಯರೂಪಕ್ಕೆ ತರುವ ಕುರಿತು ಎಂದೂ ಮಾತನಾಡಲ್ಲ. ಮತ್ತೊಂದೆಡೆ ಪರಿಸರ ರಕ್ಷಣೆಯ ಮುಂಚೂಣಿಯಲ್ಲಿರಬೇಕಾದ ಸರ್ಕಾರಗಳು ‘ಅಭಿವೃದ್ಧಿ ಹೆಸರಿನಲ್ಲಿ ಜಾರಿಗೆ ತರುತ್ತಿರುವ ಬೃಹತ್ ಯೋಜನೆಗಳು ಭಾರತದ ಹಸಿರು ಸಿರಿಯನ್ನ ವೇಗವಾಗಿ ಬರಿದು ಮಾಡುತ್ತಿವೆ. ಮೆಗಾ ಪ್ರಾಜೆಕ್ಟ್‌ಗಳನ್ನ ತಂದು ಇಡೀ ಪರಿಸರ ವ್ಯವಸ್ಥೆಯನ್ನೇ ಆಹುತಿ ಕೊಡಲು ಹೊರಟಿವೆ!
ಕೈಗಾರಿಕೆಗಳು, ಹೆದ್ದಾರಿಗಳು, ಗಣಿಗಳು ಮತ್ತು ಮೂಲಸೌಕರ್ಯ ಯೋಜನೆಗಳಿಗಾಗಿ ಲಕ್ಷಾಂತರ ಹೆಕ್ಟೇರ್ ದಟ್ಟ ಅರಣ್ಯವನ್ನು ಬಲಿ ಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಪರಿಸರ ಸಮತೋಲನವನ್ನು ಏರುಪೇರು ಮಾಡುತ್ತಿರುವ ಪ್ರಮುಖ ಯೋಜನೆಗಳು ಮತ್ತು ಅವುಗಳ ಆತಂಕಕಾರಿ ಪರಿಣಾಮಗಳ ಕುರಿತು ಚರ್ಚಿಸುವುದು ಅಗತ್ಯ.
1. ಗ್ರೇಟ್ ನಿಕೋಬಾರ್ ಮೆಗಾ ಪ್ರಾಜೆಕ್ಟ್
ಕೇಂದ್ರ ಸರ್ಕಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿ ಜಾರಿಗೆ ತರುತ್ತಿರುವ ಈ ಬೃಹತ್ ಯೋಜನೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಹಾಗೂ ವಿವಾದಕ್ಕೆ ಒಳಗಾಗಿದೆ. ಅಂತಾರಾಷ್ಟ್ರೀಯ ಕಂಟೈನರ್ ಸಾಗಣೆ ಟರ್ಮಿನಲ್, ಮಿಲಿಟರಿ-ನಾಗರಿಕ ಜಂಟಿ ವಿಮಾನ ನಿಲ್ದಾಣ, ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರ ಮತ್ತು ಪ್ರವಾಸೋದ್ಯಮ ನಗರವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಜನೆಗಾಗಿ ಸುಮಾರು 130 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ದಟ್ಟವಾದ ಮಳೆಕಾಡುಗಳನ್ನು ನಾಶಪಡಿಸಲಾಗುತ್ತಿದೆ. ಇಲ್ಲಿ ವಾಸಿಸುವ ಜಗತ್ತಿನ ಅಪರೂಪದ ಪ್ರಾಣಿ ಸಂಕುಲ ಮತ್ತು ನಶಿಸಿಹೋಗುತ್ತಿರುವ ‘ಶೋಂಪೆನ್’ ಬುಡಕಟ್ಟು ಜನಾಂಗದ ಅಸ್ತಿತ್ವಕ್ಕೆ ಕುತ್ತು ತಂದಿದೆ.

2. ಪನ್ನಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೆನ್-ಬೆಟ್ವಾ ನದಿ ಜೋಡಣೆ
ಭಾರತದ ಮೊದಲ ಪ್ರಮುಖ ನದಿ ಜೋಡಣೆ ಯೋಜನೆ ಇದಾಗಿದ್ದು, ಇದು ಪರಿಸರದ ಮೇಲೆ ಭಾರಿ ನಕಾರಾತ್ಮಕ ಪ್ರಭಾವ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಯೋಜನೆಯಡಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಬರಪೀಡಿತ ಬುಂದೇಲ್‌ಖಂಡ್ ಪ್ರದೇಶಕ್ಕೆ ನೀರು ಒದಗಿಸಲು ಕೆನ್ ಮತ್ತು ಬೆಟ್ವಾ ನದಿಗಳನ್ನು ಜೋಡಿಸಲಾಗುತ್ತಿದೆ. ಮಧ್ಯಪ್ರದೇಶದ ಪ್ರಸಿದ್ಧ ಪನ್ನಾ ಹುಲಿ ಸಂರಕ್ಷಿತ ಪ್ರದೇಶದ ಸುಮಾರು 6,000 ಹೆಕ್ಟೇರ್‌ಗಿಂತಲೂ ಅಧಿಕ ಅರಣ್ಯ ಭೂಮಿ ನಾಶವಾಗಲಿದೆ. ಈ ಯೋಜನೆಯಿಂದಾಗಿ ಲಕ್ಷಾಂತರ ಮರಗಳ ಮಾರಣಹೋಮ ನಡೆಸಲಾಗುತ್ತಿದ್ದು, ಹುಲಿಗಳು, ರಣಹದ್ದುಗಳು ಮತ್ತು ಇತರ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನ ಸಂಪೂರ್ಣವಾಗಿ ನಾಶವಾಗುತ್ತದೆ.

3. ಚಾರ್ ಧಾಮ್ ಹೆದ್ದಾರಿ ಯೋಜನೆ
ಹಿಮಾಲಯದ ಸೂಕ್ಷ್ಮ ಪರಿಸರ ವಲಯದಲ್ಲಿ ಸಾಗುವ ಈ ಯೋಜನೆ ಇತ್ತೀಚಿನ ವರ್ಷಗಳಲ್ಲಿ ಉತ್ತರಾಖಂಡದಲ್ಲಿ ಸಂಭವಿಸುತ್ತಿರುವ ಭೀಕರ ಭೂಕುಸಿತಗಳಿಗೆ ನೇರ ಕಾರಣ ಎಂದು ಹೇಳಲಾಗುತ್ತಿದೆ. ಚಾರ್ ಧಾಮ್ ಯಾತ್ರಾ ಸ್ಥಳಗಳಾದ ಬದರಿನಾಥ್, ಕೇದಾರ್‌ನಾಥ್, ಗಂಗೋತ್ರಿ ಮತ್ತು ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ 889 ಕಿ.ಮೀ ಉದ್ದದ ಹೆದ್ದಾರಿ ಅಗಲೀಕರಣ ಯೋಜನೆ ಇದು. ಈ ರಸ್ತೆಗಾಗಿ ಹಿಮಾಲಯದ ಸೂಕ್ಷ್ಮ ಪರ್ವತ ಶ್ರೇಣಿಗಳಲ್ಲಿ ಲಕ್ಷಾಂತರ ದೇವದಾರು ಮತ್ತು ಪೈನ್ ಮರಗಳನ್ನು ಕೆಡವಲಾಗುತ್ತಿದೆ. ಹೆದ್ದಾರಿ ನಿರ್ಮಾಣಕ್ಕಾಗಿ ಪರ್ವತಗಳನ್ನು ಅವೈಜ್ಞಾನಿಕವಾಗಿ ಸ್ಫೋಟಿಸುತ್ತಿರುವುದರಿಂದ ಇಡೀ ಹಿಮಾಲಯದ ಭೂಪ್ರದೇಶ ದುರ್ಬಲಗೊಂಡಿದೆ. ಜೋಶಿಮಠದಲ್ಲಿ ಭೂಮಿ ಕುಸಿಯುತ್ತಿರುವುದು ಮತ್ತು ಇತ್ತೀಚಿನ ಸುರಂಗ ಕುಸಿತದ ದುರಂತಗಳು ಇದಕ್ಕೆ ಸ್ಪಷ್ಟ ಉದಾಹರಣೆ.
4. ಪಶ್ಚಿಮ ಘಟ್ಟಗಳ ಅರಣ್ಯನಾಶ ಯೋಜನೆಗಳು
ಜಾಗತಿಕ ಜೀವವೈವಿಧ್ಯತೆಯ ತಾಣವಾಗಿರುವ ಪಶ್ಚಿಮ ಘಟ್ಟಗಳು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಿವಿಧ ಯೋಜನೆಗಳಿಂದಾಗಿ ತೀವ್ರ ಆಪತ್ತಿನಲ್ಲಿವೆ. ಹೊಸಪೇಟೆ-ವಾಸ್ಕೋಡಗಾಮಾ ರೈಲು ಮಾರ್ಗ ದ್ವಿಗುಣಗೊಳಿಸುವಿಕೆ ಮತ್ತು ಹೆದ್ದಾರಿ ಅಗಲೀಕರಣಕ್ಕಾಗಿ ದಾಂಡೇಲಿ ಹಾಗೂ ಅನ್ಶಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಸಾವಿರಾರು ಮರಗಳನ್ನು ಕತ್ತರಿಸಲಾಗುತ್ತಿದೆ. ಕರ್ನಾಟಕದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ದಟ್ಟ ಕಾಡಿನ ನಡುವೆ ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಪ್ರಸ್ತಾಪದಲ್ಲಿದ್ದು, ಇದು ಜಲಾನಯನ ಪ್ರದೇಶದ ಜೀವವೈವಿಧ್ಯತೆಗೆ ಭಾರಿ ಆಘಾತ ನೀಡಲಿದೆ.

ಉರಿಯುವ ಬೆಂಕಿಗೆ ತುಪ್ಪ ಸುರಿದ ಅರಣ್ಯ ಕಾಯ್ದೆ ತಿದ್ದುಪಡಿ (2023)
ಪರಿಸರವಾದಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿರುವುದು ಕೇಂದ್ರ ಸರ್ಕಾರ ತಂದಿರುವ ‘ಅರಣ್ಯ ಸಂರಕ್ಷಣಾ (ತಿದ್ದುಪಡಿ) ಕಾಯ್ದೆ 2023’. ಈ ಹೊಸ ತಿದ್ದುಪಡಿಯ ಪ್ರಕಾರ, ದೇಶದ ಗಡಿಭಾಗದ 100 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಕ್ಷಣಾತ್ಮಕ ಮತ್ತು ಕಾರ್ಯತಂತ್ರದ ಯೋಜನೆಗಳಿಗಾಗಿ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಯಾವುದೇ ಕಠಿಣ ಪರಿಸರ ಅನುಮತಿಯ ಅಗತ್ಯವಿಲ್ಲ. ಇದು ಈಶಾನ್ಯ ಭಾರತದ ರಾಜ್ಯಗಳು ಮತ್ತು ಹಿಮಾಲಯದ ಅತ್ಯಂತ ಸೂಕ್ಷ್ಮ ಕಾಡುಗಳನ್ನು ಕಾನೂನುಬದ್ಧವಾಗಿಯೇ ನಾಶಪಡಿಸಲು ಕಾರ್ಪೊರೇಟ್ ಕಂಪನಿಗಳಿಗೆ ಹಾದಿ ಮಾಡಿಕೊಟ್ಟಂತಾಗಿದೆ ಎಂಬುದು ತಜ್ಞರ ವಾದ.
ಇದನ್ನೂ ಓದಿ: ವಿಶ್ವ ಪರಿಸರ ದಿನ ವಿಶೇಷ | ಕಾಕ್ರೋಚ್‌ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇಕಾಲಜಿಯ ಒಂದು ಪ್ರಶ್ನೆ
ಕಾಡುಗಳು ನಾಶವಾಗುತ್ತಿದ್ದಂತೆ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ಪ್ರಮಾಣ ಕಡಿಮೆಯಾಗಿ, ದೇಶಾದ್ಯಂತ ತಾಪಮಾನ ಭೀಕರವಾಗಿ ಏರಿಕೆಯಾಗುತ್ತದೆ. ಈ ವರ್ಷ ಭಾರತದ ಹಲವು ನಗರಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿರುವುದೇ ಇದಕ್ಕೆ ಸಾಕ್ಷಿ. ಅರಣ್ಯನಾಶದಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳು ಭೀಕರ ನೀರಿನ ಕೊರತೆ ಎದುರಿಸುತ್ತಿವೆ. ಕಾಡುಗಳು ಇಲ್ಲದಾಗ ಆನೆಗಳು, ಚಿರತೆಗಳು ನಾಡಿಗೆ ಲಗ್ಗೆ ಇಡುತ್ತಿದ್ದು, ನಿತ್ಯವೂ ಜೀವಹಾನಿ ಸಂಭವಿಸುತ್ತಿದೆ.
ʼಪ್ರಕೃತಿಯು ಮನುಷ್ಯನ ಅಗತ್ಯವನ್ನು ಪೂರೈಸಬಲ್ಲದೇ ಹೊರತು ಆತನ ದುರಾಸೆಯನ್ನಲ್ಲʼ ಎಂಬ ಮಹಾತ್ಮ ಗಾಂಧೀಜಿಯವರ ಮಾತು ಇಂದು ಹೆಚ್ಚು ಪ್ರಸ್ತುತವಾಗಿದೆ.
ರಸ್ತೆ, ರೈಲು, ವಿದ್ಯುತ್ ನಮಗೆ ಬೇಕು ನಿಜ. ಆದರೆ, ಶುದ್ಧ ಗಾಳಿ ಮತ್ತು ಕುಡಿಯುವ ನೀರೇ ಇಲ್ಲದ ಜಗತ್ತಿನಲ್ಲಿ ಈ ಭೌತಿಕ ಸೌಕರ್ಯಗಳಿಂದ ಏನು ಪ್ರಯೋಜನ? ಸರ್ಕಾರಗಳು ʼಗಿಡ ನೆಡುವ’ ಅಭಿಯಾನಗಳನ್ನು ಮಾಡುವ ಬದಲು, ಪ್ರಕೃತಿಯನ್ನು ಉಳಿಸಿಕೊಂಡೇ ಪ್ರಗತಿ ಸಾಧಿಸುವ ‘ಸುಸ್ಥಿರ ಅಭಿವೃದ್ಧಿ’ ಮಾದರಿಯನ್ನು ಗಂಭೀರವಾಗಿ ಅಳವಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ, ಪ್ರಕೃತಿಯ ಮುನಿಸಿಗೆ ನಾವು ಕೊಡಬೇಕಾದ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರವಾಗಿರಲಿದೆ.





