ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭಾರಿ ಹಿನ್ನಡೆ ಕಂಡ ಬಳಿಕ ಭಿನ್ನಮತ ಭುಗಿಲೆದ್ದಿದೆ. ಸುಮಾರು ಮೂರು ದಶಕಗಳ ಹಿಂದೆ ರಚನೆಯಾದ ಟಿಎಂಸಿಯಲ್ಲಿ ಇದೀಗ ಆಂತರಿಕ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಈ ನಡುವೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ನಾಯಕರನ್ನು “ಸಂಪೂರ್ಣ ನಿಷ್ಪ್ರಯೋಜಕರು” ಎಂದು ಮಹುವಾ ಕರೆದಿದ್ದಾರೆ.
ಈ ಬಗ್ಗೆ ಇಂಡಿಯಾ ಟುಡೇ ಜತೆಗೆ ಮಾತನಾಡಿರುವ ಮೊಯಿತ್ರಾ, ಬಿಜೆಪಿಯು ಬಲವಂತ ಮತ್ತು ಬೆದರಿಕೆಯ ಮೂಲಕ ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. “ಬಂಧನ, ಕೇಂದ್ರ ಸಂಸ್ಥೆಯನ್ನು ಬಳಸಿ ದಾಳಿ ನಡೆಸುವ ಬೆದರಿಕೆಯನ್ನು ಬಿಜೆಪಿ ಹಾಕಿರುವ ಕಾರಣದಿಂದಾಗಿ ಈಗ ಬಂಡಾಯ ಶುರುವಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಂಗಾಳ | TMCಯೊಳಗೆ ವಿಘಟನೆ ಸೃಷ್ಟಿಸಿದ BJP; ತಲ್ಲಣಗೊಂಡಿದೆ ದೀದಿ ಸಾಮ್ರಾಜ್ಯ!
ಉಚ್ಚಾಟಿತ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ 58 ಕ್ಕೂ ಹೆಚ್ಚು ಟಿಎಂಸಿ ಶಾಸಕರು ಬಂಡಾಯವೆದ್ದಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನಿಂದ ಬಚಾವಾಗಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಇವರ ಬಳಿಯಿದೆ.
ಈ ಬಂಡಾಯದ ಬಗ್ಗೆ ಮಾತನಾಡಿರುವ ಮಹುವಾ, “ಸಂಪೂರ್ಣವಾಗಿ ನಿಷ್ಪ್ರಯೋಜಕರಾದ, ಪಕ್ಷದಲ್ಲಿಯೇ ಇದ್ದ, ಮಮತಾ ದೀದಿ ಅವರ ವರ್ಚಸ್ಸಿನಿಂದ ಮೋಡಿ ಮಾಡಿ ಪಕ್ಷದ ಲಾಭ ಪಡೆಯುತ್ತಿರುವ ಜನರನ್ನು ನಾವು ಹೊಂದಿದ್ದೇವೆ. ದಯವಿಟ್ಟು ಇಂದು ನೀವೇ ಹೋಗಿ. ನಿಮ್ಮ ಋತಬ್ರತ ಕಾಂಗ್ರೆಸ್‌ನ ಭಾಗವಾಗಿರಿ. ನೀವು ಏನು ಮಾಡಬೇಕೋ ಅದನ್ನು ಮಾಡಿ. ಆದರೆ ನಿಮ್ಮನ್ನು ನೀವು ಟಿಎಂಸಿ ನಾಯಕರು ಎಂದು ಕರೆದುಕೊಳ್ಳಬೇಡಿ” ಎಂದು ತಿಳಿಸಿದ್ದಾರೆ.
58 ಬಂಡಾಯ ಶಾಸಕರು ಪಕ್ಷದ ಶಾಸಕಾಂಗ ಘಟಕದ ನಿಯಂತ್ರಣವನ್ನು ವಶಪಡಿಸಿಕೊಂಡಿದ್ದಾರೆ. ಉಚ್ಚಾಟಿತ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಬುಧವಾರ ಟಿಎಂಸಿ ತನ್ನ 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪಷ್ಟವಾದ ವಿಭಜನೆಗೆ ಸಾಕ್ಷಿಯಾಗಿದೆ.
ಆದರೂ ಭಿನ್ನಮತೀಯರು ವಿಧಾನಸಭೆಯಲ್ಲಿ ತಮ್ಮನ್ನು “ನಿಜವಾದ” ತೃಣಮೂಲ ಕಾಂಗ್ರೆಸ್ ಎಂದು ಘೋಷಿಸಿಕೊಂಡಿದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಹೊಸದಾಗಿ ರಚಿಸಲಾದ ಶಾಸಕಾಂಗ ತಂಡದ ಮುಖ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸುವ ಮೂಲಕ ಬಂಡಾಯವನ್ನು ಮೃದುಗೊಳಿಸಲು ಪ್ರಯತ್ನದಲ್ಲಿ ರಿತಬ್ರತಾ ತೊಡಗಿದ್ದಾರೆ.
ಇದನ್ನು ಓದಿದ್ದೀರಾ? ಬಂಗಾಳದಲ್ಲಿ ‘ಮಹಾರಾಷ್ಟ್ರ ಮಾಡೆಲ್’? ಟಿಎಂಸಿ ಇಬ್ಭಾಗಕ್ಕೆ ಬಿಜೆಪಿ ಕುತಂತ್ರ; ಬೀದಿಗಿಳಿದ ಮಮತಾ
ಈ ಬೆಳವಣಿಗೆ ಬಗ್ಗೆ ಮಾತನಾಡಿದ ಮಹುವಾ, “ಈಗ ಏನಾಗುತ್ತಿದೆ? ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಕೇವಲ ಪಕ್ಷಗಳನ್ನು ಒಡೆಯುವುದರಲ್ಲಿ ತೃಪ್ತರಾಗದೆ, ಅವರು ಈಗ ತಾವು ಗೆದ್ದ ರಾಜ್ಯಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ಸಹ ಆಯ್ಕೆ ಮಾಡುತ್ತಾರೆ” ಎಂದು ಆರೋಪಿಸಿದ್ದಾರೆ.
“ಶಾಸಕರನ್ನು ವಿಭಜಿಸುವ ಕಾರ್ಯಾಚರಣೆಯಲ್ಲಿ ಬಿಜೆಪಿ ತೊಡಗಿದೆ. ಪ್ರಸ್ತುತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ಹಿಂದೆ ಟಿಎಂಸಿಯಲ್ಲಿದ್ದವರು. ಪ್ರತಿಯೊಬ್ಬ ಶಾಸಕರ ನಾಡಿಮಿಡಿತ ಬಲ್ಲವರು. ಎಲ್ಲರನ್ನೂ ಪ್ರತ್ಯೇಕವಾಗಿ ಗುರಿಯಾಗಿಸಿಕೊಂಡಿದ್ದರು” ಎಂದು ದೂರಿದ್ದಾರೆ.
“ಸಮಸ್ಯೆ ಏನೆಂದರೆ, ಹದಿನೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ, ಅವರು ಇನ್ನು ಮುಂದೆ ವಿರೋಧ ಪಕ್ಷದಲ್ಲಿರಲು ಸಾಧ್ಯವಿಲ್ಲ. ವಿರೋಧ ಪಕ್ಷದಲ್ಲಿರುವುದರ ಅರ್ಥವೇನೆಂದು ಅವರು ಮರೆತಿದ್ದಾರೆ. ಅವರು ಬಿಜೆಪಿ ವಿರುದ್ಧ ಹೋರಾಡಲು ಬಯಸಲ್ಲ. ಅವರು ಪೊಲೀಸರ ವಿರುದ್ಧ ಹೋರಾಡಲು ಬಯಸಲ್ಲ. ಇಡಿ, ಸಿಬಿಐ ವಿಚಾರವೇ ಅವರಿಗೆ ಬೇಡ. ಅವರು ಸುರಕ್ಷಿತವಾಗಿರಲು ಬಯಸುತ್ತಾರೆ” ಎಂದು ಮಹುವಾ ದೂರಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಟಿಎಂಸಿ ಖಂಡಿತವಾಗಿಯೂ ಕುಸಿಯುತ್ತಿಲ್ಲ. ಮಮತಾ ಬ್ಯಾನರ್ಜಿ ಅವರು ಹೊಸದಾಗಿ ಪಕ್ಷ ಕಟ್ಟುತ್ತಾರೆ. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ತೊರೆದಾಗ, ಪೆನ್ನು ಮತ್ತು ಕಾಗದವನ್ನು ತೆಗೆದುಕೊಂಡು, ಈ ಚಿಹ್ನೆಯನ್ನು ಚಿತ್ರಿಸಿ ಟಿಎಂಸಿ ರಚಿಸಿದವರು. ತಮ್ಮದೇ ಆದ ಚಿಹ್ನೆಯನ್ನು ರಚಿಸಿ ಜನರನ್ನು ಸೆಳೆಯಬಲ್ಲ, ಮೂರು ಅವಧಿಗೆ ಮುಖ್ಯಮಂತ್ರಿಯಾಗಬಲ್ಲ ವ್ಯಕ್ತಿ ಹೋರಾಡಿ ಮತ್ತೊಂದು ಚಿಹ್ನೆಯನ್ನು ರಚಿಸುತ್ತಾರೆ. ನಮಗೆ ಅದು ಮುಖ್ಯವಲ್ಲ. ಅವರು ಯಾವುದೇ ಚಿಹ್ನೆಯನ್ನು ತೆಗೆದುಕೊಳ್ಳಲಿ. ಆದರೆ ಅವರು ಎಂದಿಗೂ ಟಿಎಂಸಿ ಆಗಲಾರರು” ಎಂದು ಮಹುವಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವೆಲ್ಲವುದರ ನಡುವೆ ಬಂಡಾಯ ನಾಯಕರಲ್ಲಿ ಹಲವರು ಯೂಟರ್ನ್ ಹೊಡೆದಿದ್ದಾರೆ. ಹಲವಾರು ಶಾಸಕರು ಮಮತಾ ಬ್ಯಾನರ್ಜಿಯನ್ನು ಸರ್ವೋಚ್ಚ ನಾಯಕಿಯಾಗಿ ಉಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಮಮತಾ ಅವರನ್ನು ಕೇವಲ ಸಲಹೆಗಾರರನ್ನಾಗಿ ಮಾಡುವುದಕ್ಕಿಂತ ನಾಯಕರನ್ನಾಗಿಸಬೇಕು ಎಂದು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.




