“ನೀನು ವಿಮಾನ ಹಾರಿಸಲು ಯೋಗ್ಯನಲ್ಲ, ಚಪ್ಪಲಿ ಹೊಲಿ” ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪೈಲಟ್‌ಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಪರಿಶಿಷ್ಟ ಜಾತಿಗೆ ಸೇರಿದ 35 ವರ್ಷದ ತರಬೇತಿ ಪಡೆಯುತ್ತಿರುವ ಪೈಲಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂಡಿಗೋ ಅಧಿಕಾರಿಗಳಾದ ತಪಸ್ ದೇ, ಮನೀಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಜಾತಿ ನಿಂದನೆ ಪ್ರಕರಣ | ಬಿಜೆಪಿ ಶಾಸಕ ಮುನಿರತ್ನ ಜಾಮೀನು ಭವಿಷ್ಯ ನಾಳೆ ನಿರ್ಧಾರ
ದೂರುದಾರರು ಮೊದಲು ಬೆಂಗಳೂರಿನಲ್ಲಿ ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಝೀರೋ ಎಫ್‌ಐಆರ್(ಅಪರಾಧ ಎಲ್ಲಿ ನಡೆದರೂ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದಾದ ಎಫ್‌ಐಆರ್) ದಾಖಲಿಸಿದ್ದಾರೆ. ಈ ಎಫ್‌ಐಆರ್ ಅನ್ನು ಈಗ ಇಂಡಿಗೋ ಪ್ರಧಾನ ಕಚೇರಿ ಇರುವ ಗುರುಗ್ರಾಮಕ್ಕೆ ವರ್ಗಾಯಿಸಲಾಗಿದೆ.
ಈವರೆಗೂ ಈ ವಿಚಾರದ ಕುರಿತು ಇಂಡಿಗೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ವೆಬ್‌ಸೈಟ್‌ನಲ್ಲಿ, “ನಮ್ಮ ಉದ್ಯೋಗಿಗಳು, ಗ್ರಾಹಕರು ಯಾವುದೇ ಒಂದು ಲಿಂಗ, ಜನಾಂಗ, ಬಣ್ಣ, ಧರ್ಮ, ಜಾತಿ, ಮತ, ಜನಾಂಗೀಯತೆ, ಮೂಲ, ಭಾಷೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ಲೈಂಗಿಕ ದೃಷ್ಟಿಕೋನ, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ, ವಯಸ್ಸು, ಕುಟುಂಬದ ಸ್ಥಿತಿಗೆ ಸೀಮಿತವಾಗಿಲ್ಲ. ಎಲ್ಲರನ್ನೂ ನಮ್ಮ ಸಂಸ್ಥೆ ಒಳಗೊಂಡಿದೆ” ಎಂದು ಉಲ್ಲೇಖಿಸಲಾಗಿದೆ.
ಏಪ್ರಿಲ್ 28ರಂದು ಇಂಡಿಗೋದ ಗುರುಗ್ರಾಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರಲಾಗಿದೆ. 30 ನಿಮಿಷಗಳ ಸಭೆಯಲ್ಲಿ, “ನೀವು ವಿಮಾನ ಹಾರಿಸಲು ಯೋಗ್ಯರಲ್ಲ, ಹಿಂತಿರುಗಿ ಚಪ್ಪಲಿಗಳನ್ನು ಹೊಲಿಯಿರಿ. ನೀವು ಇಲ್ಲಿ ಕಾವಲುಗಾರನಾಗಿ ಕೆಲಸ ಮಾಡಲೂ ಯೋಗ್ಯರಲ್ಲ” ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? 10 ಗಂಟೆ ಇಂಡಿಗೋ ವಿಮಾನ ವಿಳಂಬ: ಪೈಲಟ್ ಮೇಲೆ ಹಲ್ಲೆಗೈದ ಪ್ರಯಾಣಿಕ; ವಿಡಿಯೋ ವೈರಲ್
ರಾಜೀನಾಮೆ ನೀಡಲು ಒತ್ತಡ ಹೇರುವ ಉದ್ದೇಶದಿಂದ ಕಿರುಕುಳ ನೀಡಲಾಗಿದೆ. ತಾನು ಪರಿಶಿಷ್ಟ ಜಾತಿಗೆ ಸೇರಿದವನಾದ ಕಾರಣ ನನ್ನ ಜಾತಿ ಗುರುತನ್ನು ಅವಮಾನಿಸಿ ಅವಹೇಳನಕಾರಿ ಮಾತನಾಡಲಾಗಿದೆ ಎಂದು ದೂರದಾರ ಪೈಲಟ್ ಹೇಳಿದ್ದಾರೆ.
ಹಾಗೆಯೇ ಅನ್ಯಾಯವಾಗಿ ವೇತನ ಕಡಿತ ಮಾಡಲಾಗುತ್ತಿದೆ. ಬಲವಂತವಾಗಿ ಮರುತರಬೇತಿ ಮಾಡಿಸಲಾಗುತ್ತಿದೆ. ಅನಗತ್ಯವಾಗಿ ಎಚ್ಚರಿಕೆಯ ಪತ್ರಗಳನ್ನು ನೀಡಲಾಗುತ್ತಿದೆ ಎಂದೂ ದೂರುದಾರರು ತಿಳಿಸಿದ್ದಾರೆ. ಈ ವಿಚಾರವನ್ನು ಉನ್ನತ ಅಧಿಕಾರಿಗಳು ಮತ್ತು ಇಂಡಿಗೋದ ನೈತಿಕ ಸಮಿತಿಯೊಂದಿಗೆ ಪ್ರಸ್ತಾಪಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿರುವುದಾಗಿ ದೂರುದಾರ ಪೈಲಟ್ ತಿಳಿಸಿದ್ದಾರೆ.
