ಲೋಕಸಭೆ ಸ್ಥಾನಗಳನ್ನು ಹೆಚ್ಚಿಸುವ ‘ಕ್ಷೇತ್ರ ಮರುವಿಂಗಡಣಾ ಮಸೂದೆ’ಯನ್ನು ಸುಗಮವಾಗಿ ಅಂಗೀಕರಿಸಿಕೊಳ್ಳಲು ಕೇಂದ್ರ ಸರ್ಕಾರ ತನ್ನ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದು, ಇದರ ಮಧ್ಯೆ ಸಂಸತ್ತಿನಲ್ಲಿ ವಿವಾದ ಸೃಷ್ಟಿಸಿದ್ದ ’30 ದಿನಗಳ ಜೈಲುವಾಸದ ನಂತರ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಹುದ್ದೆಯಿಂದ ವಜಾಗೊಳಿಸುವ’ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ನೇತೃತ್ವದ ಜಂಟಿ ಸಂಸದೀಯ ಸಮಿತಿಯು ಈ ಮಸೂದೆಯನ್ನು ಪರಿಶೀಲಿಸುತ್ತಿದೆ. ಕಳೆದ ಜುಲೈ 10ರಂದು ಸಮಿತಿಗೆ ಕರಡು ವರದಿ ನೀಡಲಾಗಿತ್ತು. ಶುಕ್ರವಾರ (ಜುಲೈ 17) ನಡೆದ ಸಭೆಯಲ್ಲಿ ಕರಡಿನಲ್ಲಿರುವ ಐದು ಶಿಫಾರಸುಗಳ ಪೈಕಿ ಎರಡರ ಮೇಲೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದಂತೆಯೇ, ಸದಸ್ಯರ ನಡುವೆ ಭಿನ್ನಮತ ಉಂಟಾದ ಹಿನ್ನೆಲೆ ವರದಿಯ ಅಂಗೀಕಾರವನ್ನು ಮುಂದೂಡಲು ನಿರ್ಧರಿಸಲಾಗಿದೆ.
“ಈ ಮಸೂದೆಯು ದೇಶದ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ. ಸರ್ಕಾರದ ಉದ್ದೇಶ ಒಳ್ಳೆಯದೇ ಇದ್ದರೂ, ಈ ಬಗ್ಗೆ ಹೆಚ್ಚಿನ ಚರ್ಚೆ ಮತ್ತು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ಅಗತ್ಯವಿದೆ” ಎಂದು ಸಮಿತಿಯ ಅಧ್ಯಕ್ಷೆ ಅಪರಾಜಿತಾ ಸಾರಂಗಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಆಡಳಿತ ಪಕ್ಷದ ಕೆಲವೇ ಸದಸ್ಯರು ಸಮಿತಿಯ ಕೆಲವು ಶಿಫಾರಸುಗಳ ವಿರುದ್ಧ ಮತ ಚಲಾಯಿಸಿದ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಮಿತಿಯಲ್ಲಿ ಇಂಡಿಯಾ ಮೈತ್ರಿಕೂಟದ ಏಕೈಕ ಪ್ರತಿನಿಧಿಯಾಗಿರುವ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಅವರು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ:
30 ದಿನಗಳ ಕಾಲ ಜೈಲಿನಲ್ಲಿ ಇರುವುದರಿಂದಲೇ ಹುದ್ದೆಯಿಂದ ವಜಾಗೊಳಿಸುವುದು ನ್ಯಾಯಸಮ್ಮತವಲ್ಲ. ಇದು ಆರೋಪಿಯ ಅಪರಾಧ ಸಾಬೀತಾಗುವ ಮೊದಲೇ ದಂಡಿಸುವ ಪ್ರಕ್ರಿಯೆಯಾಗಿದೆ. ವಿರೋಧ ಪಕ್ಷದ ನಾಯಕರ ವಿರುದ್ಧ ರಾಜಕೀಯ ದ್ವೇಷ ಸಾಧಿಸಲು ಈ ಕಾಯ್ದೆಯನ್ನು ಆಯುಧವಾಗಿ ಬಳಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ʼಕ್ಷೇತ್ರ ಮರುವಿಂಗಡಣೆʼ ಮಸೂದೆಗೆ ಬಿಜೆಪಿ ತಂತ್ರ; ಒಡೆದಿದ್ದ ಎನ್ಸಿಪಿಯನ್ನ ಜೋಡಿಸಲು ಮೋಶಾ ಕಸರತ್ತು
ಕರಡು ವರದಿಯಲ್ಲಿರುವ ‘ವಜಾ’ ಬದಲು ‘ಅಮಾನತು’ ಎಂಬ ಪದ ಬಳಸುವ ಪ್ರಸ್ತಾವನೆಯನ್ನೂ ಸುಪ್ರಿಯಾ ಸುಳೆ ತಳ್ಳಿಹಾಕಿದ್ದಾರೆ. ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರಶಾಹಿಗಳೊಂದಿಗೆ (Bureaucrats) ಹೋಲಿಸಲು ಸಾಧ್ಯವಿಲ್ಲ, ಇದು ಪ್ರಜಾಪ್ರಭುತ್ವದ ಆದೇಶಕ್ಕೆ ಅವಮಾನ ಎಂದು ಅವರು ವಾದಿಸಿದ್ದಾರೆ.
ಈ ಮಸೂದೆಯು ಪ್ರಧಾನಿ, ಸಿಎಂ ಅಥವಾ ಸಚಿವರು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ 30 ದಿನಗಳ ಕಾಲ ಜೈಲಿನಲ್ಲಿದ್ದರೆ, ಅವರನ್ನು ಹುದ್ದೆಯಿಂದ ತೆಗೆದುಹಾಕುವ ಅಥವಾ ಅಮಾನತುಗೊಳಿಸುವ ಅಧಿಕಾರ ನೀಡಲು ಉದ್ದೇಶಿಸಿದೆ. ಅಲ್ಲದೆ, ಗಂಭೀರ ಅಪರಾಧಗಳ ವ್ಯಾಖ್ಯಾನವನ್ನು ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳು ಎಂದು ಮಸೂದೆಯಲ್ಲಿ ವ್ಯಾಖ್ಯಾನಿಸಲು ಸಮಿತಿ ಪ್ರಸ್ತಾಪಿಸಿತ್ತು.





