ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಆರ್ಥಿಕ ದುಷ್ಪರಿಣಾಮಗಳಿಂದ ದೇಶದ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸುವ ನಿಟ್ಟಿನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐಐ) ಬೃಹತ್ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿರುವ ಸಾಧ್ಯತೆಯಿದೆ. ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿರುವ ಹಾಗೂ ‘ಬ್ಲೂಮ್ಬರ್ಗ್ ಎಕನಾಮಿಕ್ಸ್’ನ ವಿಶ್ಲೇಷಣಾ ವರದಿಯ ಪ್ರಕಾರ, ಬಾಹ್ಯ ಆರ್ಥಿಕ ಆಘಾತಗಳನ್ನು ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಬ್ಯಾಂಕ್ ಅಂದಾಜು 12 ಶತಕೋಟಿ ಡಾಲರ್ ಮೌಲ್ಯದ(1.14 ಲಕ್ಷ ಕೋಟಿ ರೂ) ಚಿನ್ನದ ನಿಧಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ ಎಂದು ಅಂದಾಜಿಸಲಾಗಿದೆ.
ಇಷ್ಟು ಮೊತ್ತದ ಚಿನ್ನದ ಹಣವು ಉತ್ತರಾಖಂಡ, ಜಮ್ಮು ಕಾಶ್ಮೀರ, ದೆಹಲಿ, ಹಿಮಾಚಲ ಪ್ರದೇಶ ರಾಜ್ಯಗಳ ಒಂದು ವರ್ಷದ ವಾರ್ಷಿಕ ಬಜೆಟ್ಗೆ ಸಮನಾಗುತ್ತದೆ.
ಬ್ಲೂಮ್ಬರ್ಗ್ ಎಕನಾಮಿಕ್ಸ್ನ ಹಿರಿಯ ಭಾರತೀಯ ಅರ್ಥಶಾಸ್ತ್ರಜ್ಞ ಅಭಿಷೇಕ್ ಗುಪ್ತಾ ಅವರ ಮೌಲ್ಯಮಾಪನದ ಪ್ರಕಾರ, ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ನೋಡಿದಾಗ ಮೇ 22ಕ್ಕೆ ಅಂತ್ಯಗೊಂಡ ಎರಡು ವಾರಗಳ ಅವಧಿಯಲ್ಲಿ ಈ ಮಾರಾಟ ಪ್ರಕ್ರಿಯೆ ನಡೆದಿದೆ. ಇದೇ ಅವಧಿಯಲ್ಲಿ ಆರ್.ಬಿ.ಐ ತನ್ನ ವಿದೇಶಿ ಕರೆನ್ಸಿ ಸ್ವತ್ತುಗಳಿಗೆ (Foreign Currency Assets) ಅಂದಾಜು 7.5 ಶತಕೋಟಿ ಡಾಲರ್(71,250 ಕೋಟಿ ರೂಪಾಯಿ) ಮೊತ್ತವನ್ನು ಸೇರ್ಪಡೆ ಮಾಡಿದೆ. ದೇಶದಲ್ಲಿ ಬೆಲೆಬಾಳುವ ಲೋಹಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ್ದರೂ ಸಹ, ಆರ್.ಬಿ.ಐ ಬಳಿ ಇರುವ ಚಿನ್ನದ ಮೌಲ್ಯದಲ್ಲಿ ಏರಿಕೆಯಾಗುವ ಬದಲು ಇಳಿಕೆ ಕಂಡುಬಂದಿರುವುದು, ಕೇಂದ್ರ ಬ್ಯಾಂಕ್ ಚಿನ್ನ ಮಾರಾಟ ಮಾಡಿರುವ ಸಾಧ್ಯತೆಯನ್ನು ಬಲವಾಗಿ ದೃಢಪಡಿಸುವಂತಿದೆ.
ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿರುವ ಭಾರತಕ್ಕೆ, ಇರಾನ್ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯ ಕಾರ್ಯಾಚರಣೆ ವ್ಯತ್ಯಯವು ಭಾರೀ ಹೊಡೆತ ನೀಡಿದೆ. ಇದರಿಂದಾಗಿ ಇಂಧನ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ದೇಶೀಯ ಕರೆನ್ಸಿಯ ಮೇಲೆ ತೀವ್ರ ಒತ್ತಡ ಬಿದ್ದಿದೆ. ಮೇ 20ರಂದು ಸಾರ್ವಕಾಲಿಕ ಕುಸಿತ ಕಂಡಿದ್ದ ರೂಪಾಯಿ, ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಶೇಕಡಾ 0.2ರಷ್ಟು ಇಳಿಕೆಯಾಗಿ 95.17ಕ್ಕೆ ತಲುಪಿತ್ತು. ಈ ಬಿಕ್ಕಟ್ಟಿನಿಂದ ಹೊರಬರಲು ಇಂಧನ ಬೆಲೆ ಏರಿಕೆ ಹಾಗೂ ಆಮದು ಸುಂಕ ಹೆಚ್ಚಳದಂತಹ ಕ್ರಮಗಳ ಜೊತೆಗೆ, ಆರ್.ಬಿ.ಐ ಡಾಲರ್ ಸಂಗ್ರಹವನ್ನು ಬಲಪಡಿಸಿಕೊಳ್ಳುವ ತಂತ್ರಗಾರಿಕೆ ಅನುಸರಿಸುತ್ತಿದೆ.
ಇದನ್ನು ಓದಿದ್ದೀರಾ? ಒಡಿಶಾ | ‘ವೇದಾಂತ’ ಗಣಿಗಾರಿಕೆಯಡಿ ಸಮಾಧಿಯಾಗಲಿದೆ ಸಿಜಿಮಲಿ ಗುಡ್ಡದ ಆದಿವಾಸಿಗಳ ಆಸ್ಥೆ-ಅಸ್ಮಿತೆ
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಮಾರ್ಚ್ ಅಂತ್ಯದ ವೇಳೆಗೆ ಆರ್.ಬಿ.ಐ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನವನ್ನು ಹೊಂದಿತ್ತು. ಈ ಪೈಕಿ ಶೇ 77ರಷ್ಟು ಚಿನ್ನವನ್ನು ದೇಶದೊಳಗೇ ಸುರಕ್ಷಿತವಾಗಿಡಲಾಗಿದೆ (ಆರು ತಿಂಗಳ ಹಿಂದೆ ಇದು ಶೇ 66ರಷ್ಟಿತ್ತು). ಬ್ಯಾಂಕ್ ಆಫ್ ಇಂಗ್ಲೆಂಡ್ ಹಾಗೂ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) ಬಳಿಯಿದ್ದ ಬಹುಪಾಲು ಚಿನ್ನವನ್ನು ಆರ್.ಬಿ.ಐ ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ವಾಪಸ್ ತಂದಿದೆ. ಉಕ್ರೇನ್ ಯುದ್ಧದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೀಸಲು ನಿಧಿಯನ್ನು ಮುಟ್ಟುಗೋಲು ಹಾಕಿಕೊಂಡ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು.
ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಆರ್.ಬಿ.ಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹಲವು ಕಠಿಣ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲು ಪರಿಶೀಲನೆ ನಡೆಸುತ್ತಿದ್ದಾರೆ. ಬಡ್ಡಿ ದರಗಳನ್ನು ಹೆಚ್ಚಿಸುವುದು ಮತ್ತು ವಿದೇಶಿ ಹೂಡಿಕೆದಾರರಿಂದ ಹೆಚ್ಚಿನ ಡಾಲರ್ ಹರಿವನ್ನು ಆಕರ್ಷಿಸುವ ನಿಟ್ಟಿನಲ್ಲಿ ಬ್ಯಾಂಕ್ ಹೆಜ್ಜೆ ಇಡುತ್ತಿದೆ ಎಂದು ವರದಿಗಳು ತಿಳಿಸಿವೆ. ಮಾರುಕಟ್ಟೆ ಪರಿಸ್ಥಿತಿಗಳು ಅನುಕೂಲಕರವಾದಾಗ (ಡಾಲರ್ ಮೌಲ್ಯ ಕಡಿಮೆಯಾದಾಗ ಅಥವಾ ಕಚ್ಚಾ ತೈಲ ಬೆಲೆ ಇಳಿದಾಗ) ಕೇಂದ್ರ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲನ್ನು ಬಲಪಡಿಸುವ ಕಾರ್ಯಾಚರಣೆಯನ್ನು ಮುಂದುವರಿಸುವ ನಿರೀಕ್ಷೆಯಿದೆ.
ತೀವ್ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ರೂಪಾಯಿ ರಕ್ಷಣೆಗಾಗಿ ಆರ್.ಬಿ.ಐ ಚಿನ್ನವನ್ನು ಬಳಸಿಕೊಂಡಿರುವುದು ಇದೇ ಮೊದಲಲ್ಲ. 1991ರಲ್ಲಿ ಭಾರತವು ತೀವ್ರ ವಿದೇಶಿ ವಿನಿಮಯದ ಕೊರತೆಯನ್ನು (BoP Crisis) ಎದುರಿಸಿದಾಗ, ಕೇವಲ ಕೆಲವೇ ವಾರಗಳ ಆಮದಿಗೆ ಮಾತ್ರ ಡಾಲರ್ ಮೀಸಲು ಉಳಿದಿತ್ತು. ಆ ಸಂದರ್ಭದಲ್ಲಿ ದೇಶವನ್ನು ಆರ್ಥಿಕ ದಿವಾಳಿತನದಿಂದ ಪಾರು ಮಾಡಲು, ಆರ್.ಬಿ.ಐ ತನ್ನ ಬಳಿಯಿದ್ದ 67 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಜಪಾನ್ ಬ್ಯಾಂಕ್ಗಳಿಗೆ ಕಳುಹಿಸಿ (ಮಾರಾಟ ಹಾಗೂ ಮರುಖರೀದಿ ಒಪ್ಪಂದದೊಂದಿಗೆ) ಸಾಲ ಪಡೆದಿತ್ತು. ಆದರೆ, ಅಂದಿನ ಆರ್ಥಿಕ ದುರ್ಬಲತೆಗೆ ಹೋಲಿಸಿದರೆ, ಇದು ಹಲವು ಪಟ್ಟು ಚಿನ್ನ ಮಾರಾಟವಾಗಿರುವ ಸಾಧ್ಯತೆಯಿದೆ.





