ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆಯೇರಿಕೆ ನಿಲ್ಲುತ್ತಲೇ ಇಲ್ಲ. ಆಹಾರ ಪದಾರ್ಥಗಳ ಹೆಚ್ಚಳದಿಂದಾಗಿ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಕಳೆದ 9 ತಿಂಗಳಲ್ಲೇ ಅತ್ಯಂತ ಗರಿಷ್ಠ ಮಟ್ಟ ಮುಟ್ಟಿತ್ತು. ದೇಶದ ಆರ್ಥಿಕ ವ್ಯವಸ್ಥೆಯ ಪ್ರಸ್ತುತ ಹಾಗೂ ಭವಿಷ್ಯತ್ತಿನ ಸಮಸ್ಯೆಗಳನ್ನು ಪರಿಹರಿಸಲು ಏನು ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಯಾರಾದರೂ ಕೇಳಿದರೆ ಸೀತಾರಾಮನ್ ಸಿಟ್ಟು ಮಾಡಿಕೊಳ್ಳುತ್ತಾರೆ.
ನಿರ್ಮಲಾ ಸೀತಾರಾಮನ್ ಕಳೆದ ಐದೂವರೆ ವರ್ಷದಿಂದ ಕೇಂದ್ರದ ಹಣಕಾಸು ಸಚಿವೆಯಾಗಿ ಕಾರ್ಯವಿರ್ವಹಿಸುತ್ತಿದ್ದರೂ ರಾಷ್ಟ್ರದ ಆರ್ಥಿಕ ಸ್ಥಿತಿ ಕುಗ್ಗುತ್ತಲೇ ಇದೆ. ಭಾರಿ ನಿರೀಕ್ಷೆಯಿಟ್ಟು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ನಿರ್ಮಲಾ ಸೀತಾರಾಮನ್ ಅವರನ್ನು ಎರಡನೇ ಬಾರಿ ಅರ್ಥ ಸಚಿವೆಯನ್ನಾಗಿ ನೇಮಿಸಿದೆ. ಆದರೂ ಬೆಲೆ ಏರಿಕೆ, ಹಣದುಬ್ಬರ ಮಾತ್ರ ತಗ್ಗುತ್ತಿಲ್ಲ. ದಿನನಿತ್ಯದ ಅಗತ್ಯ ವಸ್ತುಗಳ ಏರಿಕೆಯಿಂದಾಗಿ ದೇಶದ ಶೇಕಡಾವಾರು ಬಹುಪಾಲು ಇರುವ ಬಡ ಜನತೆ ಹಾಗೂ ಮಧ್ಯಮ ವರ್ಗ ನಿತ್ಯವೂ ಪರಿತಪಿಸುವ ಸ್ಥಿತಿ ಎದುರಾಗಿದೆ. ಶೋಷಿತರು ಹಾಗೂ ಅಲ್ಪಸಂಖ್ಯಾತರ ಪಾಡಂತೂ ಕೇಳುವಂತಿಲ್ಲ. ಹಾಗೆ ನೋಡಿದರೆ ಬಿಜೆಪಿ ಹಾಗೂ ಎನ್‌ಡಿಎ ಸರ್ಕಾರದ ಬಹುಪಾಲು ಮತದಾರರು ಮಧ್ಯಮ ವರ್ಗದ ಜನತೆ. ಎನ್‌ಡಿಎ ಸರ್ಕಾರದ ಮೊದಲ ಎರಡು ಅವಧಿಯಲ್ಲಿ ನೀಡಿದ ಯಾವುದೇ ಭರವಸೆಗಳು ಈಡೇರದಿದ್ದರೂ ಮಗದೊಮ್ಮೆ ನಿರೀಕ್ಷೆಯಿಟ್ಟುಕೊಂಡು ಮೂರನೇ ಬಾರಿ ಬಿಜೆಪಿ ಸರ್ಕಾರಕ್ಕೆ ಅಧಿಕಾರ ನೀಡಿದ್ದಾರೆ. ಆದರೂ ಅಭಿವೃದ್ಧಿ, ಪ್ರಗತಿ ಗಗನಕುಸುಮವಾಗಿವೆ.
2019ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವೆಯಾದಾಗ ಈರುಳ್ಳಿ ಬೆಲೆ ದೇಶಾದ್ಯಂತ ತೀವ್ರವಾಗಿ ಹೆಚ್ಚಳಗೊಂಡಿತ್ತು. ಸದನದಲ್ಲಿ ಪ್ರತಿಪಕ್ಷದ ಸದಸ್ಯರು ಈರುಳ್ಳಿ ದರ ಏರಿಕೆ ವಿಚಾರ ಪ್ರಶ್ನಿಸಿದಾಗ “ನಾನು ಈರುಳ್ಳಿ-ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುವುದಿಲ್ಲ, ಆದ್ದರಿಂದ ಚಿಂತಿಸಬೇಡಿ. ನಾನು ಈರುಳ್ಳಿಯೊಂದಿಗೆ ಹೆಚ್ಚು ಸಂಬಂಧವಿಲ್ಲದ ಕುಟುಂಬದಿಂದ ಬಂದಿದ್ದೇನೆ” ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದರು. ಹಾಗೆಯೇ ಹಲವು ಬಾರಿ ತೈಲ ಬೆಲೆಗಳು, ಮತ್ತಿತ್ತರ ಪದಾರ್ಥಗಳು ಏರಿಕೆಯಾದಾಗ ತಮಗೂ ಹಾಗೂ ತಮ್ಮ ಖಾತೆಗೂ ಸಂಬಂಧವಿಲ್ಲದ ರೀತಿಯಲ್ಲಿ ಮಾತನಾಡಿದ್ದರು. ತೆರಿಗೆ ಪರಿಷ್ಕರಣೆ ವಿಚಾರಕ್ಕೆ ಯಾರಾದರೂ ಪ್ರಶ್ನೆ ಕೇಳಿದರೆ ಯಾವ ಒತ್ತಡಕ್ಕೂ ಬಾಗುವ ಮಾತೇ ಇಲ್ಲ ಎಂಬ ರೀತಿ ಸಾರ್ವಜನಿಕವಾಗಿ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡುತ್ತಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆಯೇರಿಕೆ ನಿಲ್ಲುತ್ತಲೇ ಇಲ್ಲ. ಆಹಾರ ಪದಾರ್ಥಗಳ ಹೆಚ್ಚಳದಿಂದಾಗಿ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಕಳೆದ 9 ತಿಂಗಳಲ್ಲೇ ಅತ್ಯಂತ ಗರಿಷ್ಠ ಮಟ್ಟ ಮುಟ್ಟಿತ್ತು. ದೇಶದ ಆರ್ಥಿಕ ವ್ಯವಸ್ಥೆಯ ಪ್ರಸ್ತುತ ಹಾಗೂ ಭವಿಷ್ಯತ್ತಿನ ಸಮಸ್ಯೆಗಳನ್ನು ಪರಿಹರಿಸಲು ಏನು ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಯಾರಾದರೂ ಕೇಳಿದರೆ ಸೀತಾರಾಮನ್ ಅವರು ಸಿಟ್ಟು ಮಾಡಿಕೊಳ್ಳುತ್ತಾರೆ. ಬಹುಶಃ ಮಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎನ್ನುವ ಕಾರಣದಿಂದಲೇ ಈ ರೀತಿ ಹೇಳಿಕೆ ನೀಡುತ್ತಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಕಳೆದ ಸೆಪ್ಟೆಂಬರ್‌ನಲ್ಲಿ ಸೆನ್ಸೆಕ್ಸ್ ತೀರ ಕೆಳಮಟ್ಟಕ್ಕೆ ಇಳಿದು ಹೂಡಿಕೆದಾರರು ಕೋಟ್ಯಂತರ ರೂ. ನಷ್ಟ ಮಾಡಿಕೊಂಡಿದ್ದರು. ಅಕ್ಟೋಬರ್‌ನಲ್ಲಿ ವಿದೇಶಿ ಹೂಡಿಕೆದಾರರು ನಮ್ಮ ಮಾರುಕಟ್ಟೆಯಿಂದ ಒಂದು ಲಕ್ಷ ಕೋಟಿಗೂ ಹೆಚ್ಚನ್ನು ವಾಪಸ್ ತೆಗೆದುಕೊಂಡಿದ್ದಾರೆ. ಇದರೊಂದಿಗೆ, 2020ರ ಕೋವಿಡ್ ಪರಿಸ್ಥಿತಿಯ ನಂತರ ಅತಿ ದೊಡ್ಡ ಪ್ರಮಾಣದ ವಿದೇಶಿ ಬಂಡವಾಳ ಹೊರಹೋಗಿದೆ.

ಶೇ.8ಕ್ಕಿಂತ ಹೆಚ್ಚು ಜಿಡಿಪಿ(5 ಟ್ರಿಲಿಯನ್) ಬೆಳವಣಿಗೆ ನಿರೀಕ್ಷಿಸಲಾಗುತ್ತಿದ್ದು, ನಮ್ಮದು 5 ಟ್ರಿಲಿಯನ್ ಆರ್ಥಿಕತೆ ಆಗಿಯೇ ಆಗಲಿದೆ, ತೆರಿಗೆ ಸಂಗ್ರಹ ಹೆಚ್ಚುತ್ತಿದೆ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಆದರೆ ಕಾರ್ಪೊರೇಟ್‌ಗಳಿಗಿಂತಲೂ ಮಧ್ಯಮ ವರ್ಗದವರು ಹೆಚ್ಚು ತೆರಿಗೆ ಪಾವತಿಸುತ್ತಿದ್ದಾರೆ ಎನ್ನುವ ಬಗ್ಗೆ ನಿರ್ಮಲಾ ಸೀತಾರಾಮನ್ ಗಮನ ನೀಡುತ್ತಿಲ್ಲ. ವೇತನ ಪಡೆಯುವ ವರ್ಗ ಜನಸಂಖ್ಯೆಯ ಶೇ.2ರಷ್ಟಿದ್ದು ಕಾರ್ಪೊರೇಟ್ ಉದ್ಯಮದವರಿಗಿಂತಲೂ ಹೆಚ್ಚು ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಒಂದು ಕಡೆ ಸಾವಿರಾರು ಕೋಟಿ ಲಾಭ ಪಡೆಯುವ ಶ್ರೀಮಂತ ಕಂಪನಿಗಳಿಗೆ ತೆರಿಗೆ ವಿನಾಯಿತಿ, ಸಾಲ ಮನ್ನಾ ಮಾಡಲಾಗುತ್ತದೆ. ಮತ್ತೊಂದು ಕಡೆ ಶ್ರೀಮಂತ ವರ್ಗ ಮತ್ತಷ್ಟು ಶ್ರೀಮಂತವಾಗುತ್ತಿದ್ದರೆ ಬಡವರ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ನಿತ್ಯದ ಜೀವನ ಸಾಗಿಸುವುದೇ ಅವರಿಗೆ ದುಸ್ತರವಾಗಿದೆ. ಆರ್ಥಿಕವಾಗಿ ಒಂಚೂರು ಮೇಲೇಳುವುದಂತೂ ಕನಸಿನ ಮಾತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಬಾರ್ಡ್ ಸಾಲ ಖೋತಾ ಮಾಡಿದ ಮೋದಿ ಸರ್ಕಾರ ರೈತಪರವೇ?
ಇನ್ನು ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ‘ಅತ್ತ ದರಿ ಇತ್ತ ಪುಲಿ’ ಎಂಬಂತಾಗಿದೆ. ಕಷ್ಟಪಟ್ಟು ಓದಿದರೂ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಆದಾಯ ಮಟ್ಟ ಏರಿಕೆಯಾಗುತ್ತಿಲ್ಲ. ಶಿಕ್ಷಣ, ವೈದ್ಯಕೀಯ ಖರ್ಚನ್ನು ಸರಿದೂಗಿಸುವುದರಲ್ಲಿಯೇ ಸಾಕಾಗಿ ಕೊನೆಯವರೆಗೂ ಸಾಲದ ಕೂಪದಲ್ಲಿಯೇ ಬಳಲಿ ಬೆಂಡಾಗುತ್ತಿದ್ದಾರೆ. ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವೆಂಬುದು ಕೈಗೆಟುಕದ ಕನಸಾಗಿದೆ. ಸಾಲ ಮಾಡಿ ಲಕ್ಷಗಟ್ಟಲೆ ಹಣ ಕೊಟ್ಟು ಖಾಸಗಿ ಕಾಲೇಜುಗಳಿಗೆ ಸೇರಿದರೂ ಅಲ್ಲಿನ ಶಿಕ್ಷಣದ ಗುಣಮಟ್ಟ ತೀರಾ ಕೆಟ್ಟದಾಗಿದೆ. ನಾಳೆಗಾಗಿ ಏನಾದರೂ ಉಳಿಸಿಡುವ ಸ್ಥಿತಿಯಲ್ಲಂತೂ ಜನರಿಲ್ಲ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಜೀವನ ಕಳೆದ 10 ವರ್ಷಗಳಲ್ಲಿ ಮತ್ತಷ್ಟು ಶೋಚನೀಯವಾಗಿದೆ. ಅರ್ಥ ಸಚಿವರಿಗೆ ಇವೆಲ್ಲವೂ ಅರ್ಥವೇ ಆಗುತ್ತಿಲ್ಲ.
ಇದ್ದ ಸತ್ಯವನ್ನು ಹೇಳಿದರೆ ನಿರ್ಮಲಾ ಸೀತಾರಾಮನ್ ಅವರ ಕೋಪ ನೆತ್ತಿಗೇರುತ್ತದೆ. ತಮ್ಮ ಮಾತಿನ ಶೈಲಿಯಲ್ಲಿಯೇ ಸತ್ಯ ಹೇಳುವವರ ಬಾಯ್ಮುಚ್ಚಿಸಲು ಪ್ರಯತ್ನಿಸುತ್ತಾರೆ. ಅವರು ಎಷ್ಟೇ ಸುಳ್ಳುಗಳನ್ನು ಅಡಗಿಸಿದರೂ ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ವ್ಯವಸ್ಥೆ ಹಾಗೂ ಮಾರುಕಟ್ಟೆಯ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತವಾಗಿ ಜಿಎಸ್‌ಟಿ ಅಂಕಿಅಂಶಗಳನ್ನು ಬಿಡುಗಡೆ ಮಾಡುವುದನ್ನೇ ನಿಲ್ಲಿಸಿಬಿಟ್ಟಿದೆ. ಯಾಕೆ ಎಂಬುದನ್ನು ಕಾರಣ ಹುಡುಕುತ್ತ ಹೊರಟಾಗ ಸೆಪ್ಟೆಂಬರ್‌ನಲ್ಲಿನ ಜಿಎಸ್‌ಟಿ ದರ 40 ತಿಂಗಳುಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ದೇಶದ ಆರ್ಥಿಕತೆಯ ಬೆಳವಣಿಗೆ ತನ್ನ ವೇಗವನ್ನು ಕಳೆದುಕೊಂಡಿದೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿತ್ತು. ವ್ಯವಸ್ಥಿತವಾಗಿ ಆರ್ಥಿಕ ತಜ್ಞರೊಂದಿಗೆ ಚರ್ಚಿಸದೆ ಜಿಎಸ್‌ಟಿ ಅನುಷ್ಠಾನ ಜಾರಿಗೊಳಿಸಿದರ ಪರಿಣಾಮ ಸಣ್ಣ ಉದ್ಯಮಗಳಿಗೆ ಭಾರಿ ಹೊಡೆತ ಉಂಟಾಯಿತು. ಜಿಎಸ್‌ಟಿ ಸಣ್ಣ ಉದ್ಯಮಗಳ ಪಾಲಿಗೆ ಒಂದು ಹೊರೆಯಾಗಿ ಪರಿಣಮಿಸಿತು. ಆದರೆ ಈ ಬಗ್ಗೆ ಯಾರಾದರೂ ಟೀಕಿಸಿದರೆ ದೇಶ ವಿರೋಧಿ ನಡೆ ಎಂದು ಪ್ರಶ್ನಿಸುವವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ.
ದೇಶದ ಆರ್ಥಿಕತೆ ಬೆಳೆಯುತ್ತಿದೆ ಎನ್ನುವುದೇ ಹೌದಾದರೆ, ರೂಪಾಯಿ ಮೌಲ್ಯದಲ್ಲಿ ಏರಿಕೆ ಕಾಣಬೇಕಿತ್ತು. ಮೋದಿ ಕಾಲದಲ್ಲಿ ಹಾಗಾಯಿತು, ಹೀಗಾಯಿತು ಎಂದೆಲ್ಲ ಹೇಳಿಕೊಂಡೇ ಬರಲಾಯಿತು. ಈಗ ನೋಡಿದರೆ ಡಾಲರ್‌ಗೆ 84 ರೂ. ಆಗಿದ್ದು, ಇದು ಕೂಡ ಇತಿಹಾಸದಲ್ಲೇ ದಾಖಲೆ ಕನಿಷ್ಠ ಮಟ್ಟ ರೂಪಾಯಿ ಮೌಲ್ಯ ಕುಸಿತ ತಪ್ಪಿಸಲು ಆರ್‌ಬಿಐ ಮತ್ತೆ ಮತ್ತೆ ಸಾಹಸ ಮಾಡುತ್ತಲೇ ಇದೆ. ಆದರೆ ನಿರ್ಮಲಾ ಸೀತಾರಾಮನ್ ಪ್ರಕಾರ ಇದು ರೂಪಾಯಿಯ ಸಮಸ್ಯೆಯಲ್ಲ, ಡಾಲರ್ ಹೆಚ್ಚು ಪ್ರಬಲವಾಗುತ್ತಿರುವುದು ಎನ್ನುತ್ತಾರೆ!
ಹಣದುಬ್ಬರ ತಳಕಚ್ಚುತ್ತಿರುವ ಕಾರಣ ರೂಪಾಯಿ ಎದುರು ಡಾಲರ್, ಪೌಂಡ್ ಸೇರಿದಂತೆ ಅಂತಾರಾಷ್ಟ್ರೀಯ ಕರೆನ್ಸಿಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಮಾರುಕಟ್ಟೆಯಲ್ಲಿನ ಬೇಡಿಕೆ ಕುಸಿತದಿಂದ ಆರ್ಥಿಕತೆ ಸೂಚ್ಯಂಕಗಳಲ್ಲಿ ಒಂದಾದ ಉತ್ಪಾದನಾ ವಲಯದ ಪಿಎಂಐ(ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್) ಸೆಪ್ಟೆಂಬರ್ ತಿಂಗಳಿನಲ್ಲಿ 8 ತಿಂಗಳಲ್ಲೇ ಕಡಿಮೆ ಮಟ್ಟ ದಾಖಲಿಸಿತ್ತು. ಆದರೆ ಇದಕ್ಕೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರಣ ಕೇಳಿದರೆ ತಮ್ಮದೆ ರೀತಿಯ ಜವಾಬು ನೀಡುತ್ತಾರೆ. ಅವರ ಹೇಳಿಕೆಯಂತೆ, ಆರ್ಥಿಕ ಸೂಚ್ಯಂಕವು ಕಡಿಮೆ ದಾಖಲಿಸಲು ಬೇಡಿಕೆಯ ಸಮಸ್ಯೆಯಲ್ಲವಂತೆ. ಪೂರೈಕೆಯಲ್ಲಿನ ಸಮಸ್ಯೆ ಉದ್ಯಮಿಗಳು ಹೊಸದನ್ನು ಮಾಡದೆ ಸೋಮಾರಿಗಳಾಗಿದ್ದಾರಂತೆ. ಅವರ್‍ಯಾರು ಹಣ ಹೂಡಿಕೆ ಮಾಡುತ್ತಿಲ್ಲ, ಕಾರ್ಖಾನೆಗಳನ್ನು ನಿರ್ಮಿಸುತ್ತಿಲ್ಲ ಎಂದು ಹೇಳುತ್ತಾರೆ. ಹಣಕಾಸು ಸಚಿವರ ಪ್ರಕಾರ ನಮ್ಮ ದೇಶದ ಉದ್ಯಮಿಗಳು ಹೂಡಿಕೆ ಮಾಡಲು ತಯಾರಿಲ್ಲ. ಆದರೆ ವಿದೇಶಿ ಉದ್ಯಮಿಗಳು ಕಾರ್ಖಾನೆಗಳನ್ನು ತೆರೆಯಲು ಸರದಿಯಲ್ಲಿ ನಿಂತಿದ್ದಾರೆ. ಈ ಮಾತುಗಳು ನಗು ತರಿಸುತ್ತದೆ ವಿನಾ ಮತ್ಯಾವ ಪರಿಹಾರವನ್ನು ಸೂಚಿಸುವುದಿಲ್ಲ. 2023ರಲ್ಲಿ ಭಾರತದ ವಿದೇಶಿ ನೇರ ಹೂಡಿಕೆ 10.5 ಬಿಲಿಯನ್ ಡಾಲರ್ ಇತ್ತು. ಇದು 2007ರಿಂದ ಈವರೆಗಿನ ಹೂಡಿಕೆಯಲ್ಲೇ ಅತಿ ಕಡಿಮೆ. 16 ವರ್ಷಗಳಲ್ಲೇ ಕನಿಷ್ಠ ಮಟ್ಟ. ಇದನ್ನು ನಮ್ಮ ಅರ್ಥ ಸಚಿವರಿಗೆ ಪ್ರಶ್ನಿಸಿದರೆ, ವೇಗವಾಗಿ ಬೆಳೆಯುತ್ತಿರುವ ನಮ್ಮ ಆರ್ಥಿಕತೆ ಬಗ್ಗೆ ಕೆಲವರಿಗೆ ಹೊಟ್ಟೆಕಿಚ್ಚು ಎಂದು ರಾಜಕೀಯ ಹೇಳಿಕೆ ನೀಡುತ್ತಾರೆ.
ಬಂಡವಾಳ ಬಹಳ ಅಗತ್ಯವಿರುವ ಕಡೆ ಬಂಡವಾಳ ತೊಡಗಿಸಬೇಕು. ನಿರುದ್ಯೋಗ ಈ ದೇಶದ ಅತಿ ದೊಡ್ಡ ಸಮಸ್ಯೆಯಾಗಿದೆ. ಭಾರತದ ಸುಶಿಕ್ಷಿತ ಯುವಕರು ನಿರುದ್ಯೋಗಿಗಳಾಗಿರುವ ಸ್ಥಿತಿಯೇ ಹೆಚ್ಚು ಎಂಬುದನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್)ಯ ವರದಿಗಳು ಹೇಳುತ್ತಿವೆ. ಇದಕ್ಕೆ ಕಾರಣ ದೇಶದಲ್ಲಿ ಉದ್ಯೋಗಗಳೇ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ವಾರ್ಷಿಕ ಶೇ.7ರ ಜಿಡಿಪಿ ಬೆಳವಣಿಗೆ ದರವಿದ್ದರೆ ಸಾಲ ತೀರಿಸುವುದೇ ಸಾಧ್ಯವಿಲ್ಲ ಎಂದು ಸಿಟಿ ಗ್ರೂಪ್ ವರದಿ ಹೇಳುತ್ತಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ, ದೇಶದ ಬಹುತೇಕ ಜನ ತೀವ್ರ ಬಡತನದಲ್ಲಿದ್ದಾರೆ. ನಿರ್ಮಲ ಸೀತಾರಾಮನ್ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎನ್ನುತ್ತಾರೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತದೆ. ದೇಶದ ಆರ್ಥಿಕ ಸಮಸ್ಯೆಗಳಿಗೆ ತಾವು ಹೊಣೆಯಲ್ಲ ತಮ್ಮ ಬಿಜೆಪಿ ಸರ್ಕಾರದ ತಪ್ಪಿಲ್ಲ ಎನ್ನುವ ನಿರ್ಮಲಾ ಸೀತಾರಾಮನ್ ಸಮಸ್ಯೆಗಳೇನಾದರೂ ಇದ್ದರೆ ಕಾಂಗ್ರೆಸ್ ಸರ್ಕಾರ ಮಾಡಿದೆ ಎನ್ನುತ್ತ ತಪ್ಪಿನಿಂದ ನುಣಿಚಿಕೊಳ್ಳುತ್ತಾರೆ. ಹಾಗೆಯೇ ಬೆಲೆಗಳು ಆಕಾಶಮಟ್ಟದಲ್ಲಿ ಏರಿಸಲಾಗುತ್ತಿದೆ, ತೆರಿಗೆಗಳನ್ನು ದುಪ್ಪಟ್ಟು ಮಾಡಲಾಗುತ್ತಿದೆ. ಜನರ ಜೀವನಮಟ್ಟ ಪಾತಾಳ ತಲುಪುತ್ತಿದೆ.

ಜಿಎಸ್‌ಟಿ ಹೆಚ್ಚು ಪಾವತಿಸುವವರು ಬಡವರು
ದೇಶದ ಶೇ. 10ರಷ್ಟಿರುವ ಅತಿ ಶ್ರೀಮಂತರು ಜಿಎಸ್‌ಟಿ ರೂಪದಲ್ಲಿ ಪಾವತಿಸಿದ ತೆರಿಗೆ ಪ್ರಮಾಣ ಶೇ. 3ರಷ್ಟು ಮಾತ್ರ. ಈ ವರ್ಗವು ಕಡಿಮೆ ಪ್ರಮಾಣದ ತೆರಿಗೆ ಪಾವತಿಸುತ್ತಿರುವ ಕಾರಣ, ಅವರ ಸಂಪತ್ತು ಏರಿಕೆಯಾಗುತ್ತಲೇ ಇದೆ. ಬಡವರು ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ಕಾರಣ, ಅವರ ಸಂಪತ್ತು ಏರಿಕೆಯಾಗುತ್ತಿಲ್ಲ. ಪ್ರತಿ ವರ್ಷ ಸಂಗ್ರಹವಾಗುವ ಜಿಎಸ್‌ಟಿಯಲ್ಲಿ ಅತಿ ಹೆಚ್ಚು ಪಾವತಿಸುವವರು ಬಡವರು ಹಾಗೂ ಮಧ್ಯಮವರ್ಗದವರು. ಕಡಿಮೆ ಸಂಪತ್ತು ಹೊಂದಿರುವ ಮತ್ತು ಕಡಿಮೆ ಆದಾಯ ಹೊಂದಿರುವ ಈ ವರ್ಗ ತನ್ನ ಗಳಿಕೆಯ ದೊಡ್ಡ ಭಾಗವನ್ನು ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಿದೆ. ಆದರೆ ಲಾಭ ಮಾತ್ರ ಶ್ರೀಮಂತ ವರ್ಗಕ್ಕೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡ 1ರಷ್ಟಿರುವ ಅತಿ ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ ಶೇ. 40ರಷ್ಟು ಸಂಪತ್ತು ಇದೆ. ಆದರೆ, 70 ಕೋಟಿಗೂ ಹೆಚ್ಚು ಜನರಿರುವ ಬಡವ ಮತ್ತು ಕೆಳ ಮಧ್ಯಮ ವರ್ಗದ ಬಳಿ ಇರುವ ಸಂಪತ್ತು, ದೇಶದ ಒಟ್ಟು ಸಂಪತ್ತಿನ ಶೇ. 3ರಷ್ಟು ಮಾತ್ರ. ಪ್ರತಿ ವರ್ಷವು ಇವರ ಆದಾಯ ಮಟ್ಟ ಕುಸಿಯುತ್ತಲೇ ಇದೆ. ಅತಿ ಶ್ರೀಮಂತರ ಪರವಾದ ತೆರಿಗೆ ನೀತಿಯ ಪರಿಣಾಮದಿಂದ ಈ ಜನರ ಆದಾಯ ಇಳಿಕೆಯಾಗುತ್ತಲೇ ಇದೆ. ಪರಿಣಾಮವಾಗಿ ದೇಶದ ಒಟ್ಟು ಸಂಪತ್ತಿನಲ್ಲಿ ಈ ಜನರ ಸಂಪತ್ತಿನ ಪಾಲು ಕುಸಿಯುತ್ತಿದೆ. ಇದೇ ಸಂದರ್ಭದಲ್ಲಿ ಅತಿಶ್ರೀಮಂತರ ಪಾಲು ಏರಿಕೆಯಾಗುತ್ತಿದೆ. ಇವೆಲ್ಲ ಸಮಸ್ಯೆಗಳಿಗೆ ನಿರ್ಮಲಾ ಸೀತಾರಾಮನ್ ಪರಿಹಾರ ನೀಡಬೇಕಿದೆ.