ಸದ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ, ನ್ಯಾಯಾಂಗದ ವ್ಯಾಜ್ಯಗಳಿಗೆ ಕಾರಣವಾಗುವ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳ ಮೇಲೆ ಹಿಡಿತ ಸಾಧಿಸಲು ನೆರವಾಗುವ ರಾಜ್ಯಪಾಲರು ನಿಜಕ್ಕೂ ಬೇಕೇ ಎನ್ನುವಂಥ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಅದು 2001, ಜೂನ್ 30. ಸಮಯ ಮಧ್ಯರಾತ್ರಿ 2 ಗಂಟೆ. ತಮಿಳುನಾಡಿನ ಪೊಲೀಸರು ಡಿಎಂಕೆ ಮುಖಂಡ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮನೆಗೆ ನುಗ್ಗಿದ್ದರು. ಭ್ರಷ್ಟಾಚಾರ ಪ್ರಕರಣದ ಸಂಬಂಧ ಕರುಣಾನಿಧಿಯವರನ್ನು ಬಂಧಿಸಲು ಬಂದಿದ್ದ ಪೊಲೀಸರು, 78 ವರ್ಷದ ವಯೋವೃದ್ಧನನ್ನು ಅಕ್ಷರಶಃ ದರದರನೆ ಎಳೆದುಕೊಂಡು ಹೋಗಿದ್ದರು.
2023. ಜೂನ್ 14. ಮಧ್ಯರಾತ್ರಿ 1.45ರ ಸಮಯ. ತಮ್ಮ ಮನೆಯಿಂದ ಇಡಿ ಅಧಿಕಾರಿಗಳೊಂದಿಗೆ ಹೊರಬಂದ ತಮಿಳುನಾಡಿನ ವಿದ್ಯುತ್ ಸಚಿವ ಸೆಂಥಿಲ್ ಬಾಲಾಜಿ, ಜಾರಿ ನಿರ್ದೇಶನಾಲಯದ ಕಾರಿನಲ್ಲಿಯೇ ಎದೆ ಹಿಡಿದುಕೊಂಡು ಕುಸಿದರು. ಆ ದೃಶ್ಯವು 22 ವರ್ಷದ ಹಿಂದೆ ಕರುಣಾನಿಧಿಯವರನ್ನು ಬಂಧಿಸಿದ ದೃಶ್ಯದಂತೆಯೇ ಕಂಡಿದ್ದು ಕೇವಲ ಕಾಕತಾಳೀಯವಿರಲಾರದು.
ವಿಚಿತ್ರ ಎಂದರೆ, ಕರುಣಾನಿಧಿಯವರ ಬಂಧನವಾದಾಗ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಕರುಣಾನಿಧಿಯವರ ಮೇಲೆ ಜಯಲಿಲಿತಾ ಅವರಿಗೆ ಸೇಡಿತ್ತು. ಅವರ ರಾಜಕೀಯ ಸೇಡು ಅಂಥದ್ದೊಂದು ಪ್ರಕ್ಷುಬ್ಧ ಪರಿಸ್ಥಿತಿಯ ಸೃಷ್ಟಿಗೆ ಕಾರಣವಾಗಿತ್ತು. ಆದರೆ, ಈಗ ಅಂಥದ್ಧೇ ಭ್ರಷ್ಟಾಚಾರ ಆರೋಪದ ಮೇಲೆ ಅದೇ ರೀತಿ ಬಂಧನಕ್ಕೆ ಒಳಗಾಗಿರುವ ಸೆಂಥಿಲ್ ಬಾಲಾಜಿ ಸ್ವತಃ ಅಲ್ಲಿನ ಸಚಿವರು. ಸ್ಟಾಲಿನ್ ಸಂಪುಟದಲ್ಲಿ ಅವರು ವಿದ್ಯುತ್ ಸಚಿವರು ಮತ್ತು ತಮಿಳುನಾಡಿನ ಪ್ರಭಾವಿ ರಾಜಕಾರಣಿ. ಹೀಗಿದ್ದರೂ ಅವರನ್ನು ಅಪರಾತ್ರಿಯಲ್ಲಿ ಬಂಧಿಸಿ ಕರೆದೊಯ್ಯಲು ಕಾರಣರಾದವರೊಬ್ಬರಿದ್ದಾರೆ ಎಂದು ಸ್ಟಾಲಿನ್ ಸರ್ಕಾರ ಒಬ್ಬ ವ್ಯಕ್ತಿಯತ್ತ ಕೈ ತೋರಿಸುತ್ತಿದೆ.
ಅವರೇ ತಮಿಳುನಾಡಿನ ರಾಜ್ಯಪಾಲ ರವೀಂದ್ರ ನಾರಾಯಣ್ ರವಿ.
ಅಧಿಕಾರರೂಢ ಸರ್ಕಾರದ ಪ್ರಭಾವಿ ಮಂತ್ರಿ ಬಂಧನವಾದ ರೀತಿಯನ್ನು ಕಂಡೇ ಅನೇಕರು ದಂಗುಬಡಿದ್ದಿದರು. ಆದರೆ, ಪ್ರಕರಣ ಅಷ್ಟಕ್ಕೇ ನಿಲ್ಲಲಿಲ್ಲ. ಅವರನ್ನು ಸಂಪುಟದಿಂದ ವಜಾಗೊಳಿಸುವ ಮೂಲಕ ಹೊಸದೊಂದು ಪರಂಪರೆಗೂ ರಾಜ್ಯಪಾಲ ರವಿ ಕಾರಣಕರ್ತರಾದರು.
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ತಮ್ಮ ಸಂಪುಟದ ಸಚಿವರಿಗೆ ಒದಗಿದ ಪರಿಸ್ಥಿತಿಯನ್ನು ಕಂಡು ಆಕ್ರೋಶಗೊಂಡರು. ರಾಜ್ಯಪಾಲರಿಗೆ ಚುನಾಯಿತ ಸರ್ಕಾರದ ಮಂತ್ರಿಯೋರ್ವರನ್ನು ವಜಾಗೊಳಿಸುವ ಅಧಿಕಾರ ಇಲ್ಲ ಎಂದು ಘೋಷಿಸಿ, ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಹೇಳಿದರು. ತಮಿಳುನಾಡಿನ ಹಾಗೂ ಬಹುತೇಕ ದೇಶದ ಸಂವಿಧಾನ ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಇದೊಂದು ಸಾಂವಿಧಾನಿಕ ಬಿಕ್ಕಟ್ಟಾಗುವ ಲಕ್ಷಣಗಳು ಕಂಡುಬಂದ ತಕ್ಷಣವೇ ಎಚ್ಚೆತ್ತಿರುವ ರಾಜ್ಯಪಾಲ ರವಿ, ಸೆಂಥಿಲ್ ಬಾಲಾಜಿ ವಜಾ ಆದೇಶವನ್ನು ತಡೆಹಿಡಿದಿದ್ದು, ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ರವಿ ರಾಜ್ಯಪಾಲರಾಗಿ ಬಂದಾಗ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸ್ವಾಗತಿಸಿದ್ದರು. ಆದರೆ, ಡಿಎಂಕೆಯ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ವಿಡುದಲೈ ಚಿರುತೈಗಳ್ ಕಚ್ಚಿ ಪಕ್ಷಗಳು ರವಿ ಅವರನ್ನು ಕೇಂದ್ರ ಸರ್ಕಾರವು ತಮಿಳುನಾಡಿನ ರಾಜ್ಯಪಾಲರನ್ನಾಗಿ ಕಳುಹಿಸಿದ್ದರ ಉದ್ದೇಶವನ್ನು ಪ್ರಶ್ನಿಸಿದ್ದವು. ಸದ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಅದಕ್ಕೆ ಪುಷ್ಟಿ ನೀಡುವಂತಿವೆ. ಬಂದ ಗಳಿಗೆಯಿಂದಲೂ ರವಿ ಅವರು ತಮಿಳುನಾಡಿನ ವಿರೋಧ ಪಕ್ಷದಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರವಿ ಅವರು ತಮಿಳುನಾಡಿನ ರಾಜ್ಯಪಾಲರಾಗಿ ಬಂದಿದ್ದು ಸೆಪ್ಟೆಂಬರ್ 9, 2021ರಂದು. ಅಂದಿನಿಂದ ಏಪ್ರಿಲ್ 2022ರವರೆಗೆ ರಾಜ್ಯಪಾಲರು ಸ್ಟಾಲಿನ್ ಸಂಪುಟದ 19 ಮಸೂದೆಗಳನ್ನು ತಿರಸ್ಕರಿಸಿದ್ದಾರೆ. ಇನ್ನು ಸರ್ಕಾರ ಸಂಪುಟದಲ್ಲಿ ನಿರ್ಣಯಿಸಿ ರಾಜ್ಯಪಾಲರ ಅಂಕಿತಕ್ಕೆಂದು ಕಳಿಸಿರುವ 20ಕ್ಕೂ ಹೆಚ್ಚು ಮಸೂದೆಗಳು ರಾಜ್ಯಪಾಲರ ಅನುಮೋದನೆಗಾಗಿ ಕಾಯುತ್ತಾ, ಅವರ ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ.
ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ನಿಗದಿಪಡಿಸಿದ್ದ ಭಾಷಣವನ್ನು ಯಥಾವತ್ತಾಗಿ ಓದದೇ, ಅದರಲ್ಲಿನ ಕೆಲವು ಅಂಶಗಳನ್ನು ಕೈಬಿಟ್ಟಿದ್ದವರು ರವಿ. ರಾಜ್ಯಪಾಲರ ಈ ನಡೆ ವಿರುದ್ಧ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ಈ ನಿರ್ಣಯ ಅಂಗೀಕಾರವಾಗುತ್ತಿದ್ದಂತೆಯೇ, ರಾಜ್ಯಪಾಲರು ಅರ್ಧದಲ್ಲೇ ವಿಧಾನಸಭೆಯಿಂದ ಹೊರನಡೆದಿದ್ದರು. ಇನ್ನೊಮ್ಮೆ ‘ದ್ರಾವಿಡ ಚಳವಳಿಯಿಂದ ತಮಿಳುನಾಡು ನಲುಗಿಹೋಗಿದೆ’ ಎಂದಿದ್ದ ರಾಜ್ಯಪಾಲರು, ‘ತಮಿಳುನಾಡಿಗೆ ತಮಿಳಗಂ ಎನ್ನುವ ಹೆಸರು ಸೂಕ್ತ’ ಎಂದಿದ್ದರು. ರಾಜ್ಯಪಾಲರು ರಾಜ್ಯಕ್ಕೆ ಮರುನಾಮಕಾರಣದ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಬಿಜೆಪಿ ಹೊರತುಪಡಿಸಿ ತಮಿಳುನಾಡಿನ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದ್ದವು.
ರಾಜ್ಯಪಾಲರ ನಿವಾಸ ರಾಜಭವನದಲ್ಲಿ ಆಯೋಜಿಸಲಾಗಿದ್ದ ಪೊಂಗಲ್ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ‘ತಮಿಳುನಾಡು’ ಬದಲು ‘ತಮಿಳಗಂ’ ಪದ ಬಳಸಿದ್ದು ಕೂಡ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಜೊತೆಗೆ ತಮಿಳು ಭಾಷೆಯಲ್ಲಿದ್ದ ಆ ಆಹ್ವಾನ ಪತ್ರದಲ್ಲಿ ರಾಜ್ಯ ಸರ್ಕಾರದ ಚಿಹ್ನೆ ಇರಲೇ ಇಲ್ಲ. ಅದರ ಬದಲಿಗೆ ಭಾರತ ಸರ್ಕಾರದ ಚಿಹ್ನೆ ಮಾತ್ರ ಇತ್ತು. ಆಹ್ವಾನ ಪತ್ರದ ಇಂಗ್ಲಿಷ್ ಆವೃತ್ತಿಯಲ್ಲಿ ಮಾತ್ರ ತಮಿಳುನಾಡು ಎಂದು ಬಳಸಲಾಗಿತ್ತು. ಇಂಥವೇ ನೂರೆಂಟು ಕಿರಿಕಿರಿ, ರಗಳೆಗಳು.
ರವೀಂದ್ರ ನಾರಾಯಣ್ ರವಿ ಅವರು ಮೂಲತಃ ಐಪಿಎಸ್ ಅಧಿಕಾರಿ. ಬಿಹಾರದ ಪಾಟ್ನಾ ಮೂಲದ ರವಿ ಭೌತಶಾಸ್ತ್ರದಲ್ಲಿ ಸ್ಣಾತಕೋತ್ತರ ಪದವೀಧರರು. ನಂತರ ಕೇರಳ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದವರು. ಸಿಬಿಐನಲ್ಲಿಯೂ ಕೆಲಸ ಮಾಡಿರುವ ರವಿ, ಪೊಲೀಸ್ ಅಧಿಕಾರಿಯಾಗುವುದಕ್ಕೆ ಮುಂಚೆ ಅಲ್ಪಕಾಲದ ಮಟ್ಟಿಗೆ ಪತ್ರಕರ್ತರೂ ಆಗಿದ್ದರಂತೆ. 2012ರಲ್ಲಿ ನಿವೃತ್ತಿಯಾದ ನಂತರ ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದರು.
ನಾಗಾ ಬಂಡುಕೋರರು ಸೇರಿದಂತೆ ಹಲವು ಪ್ರತ್ಯೇಕತಾವಾದಿ ಗುಂಪುಗಳ ಜೊತೆ ಸಂಧಾನಕಾರರಾಗಿ ಕೆಲಸ ಮಾಡಿದ ಅನುಭವ ರವಿ ಅವರಿಗಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ರವಿಯವರು ಮೊದಲು ಜಂಟಿ ಬೇಹುಗಾರಿಕಾ ಸಮಿತಿಯ ಅಧ್ಯಕ್ಷರಾದರು. ನಂತರ 2018ರಲ್ಲಿ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರಾಗಿಯೂ ಕೆಲಸ ಮಾಡಿದರು. ಆರ್.ಎನ್.ರವಿ, 2014ರಿಂದ ನಾಗಾ ಶಾಂತಿ ಮಾತುಕತೆಗೆ ಕೇಂದ್ರದ ಸಮಾಲೋಚಕರಾಗಿದ್ದರು. ನಾಗಾಲ್ಯಾಂಡ್ ಶಾಂತಿ ಒಪ್ಪಂದ ಏರ್ಪಟ್ಟಿದ್ದು ಆ ಅವಧಿಯಲ್ಲಿಯೇ. ನಂತರ ಕೇಂದ್ರ ಸರ್ಕಾರವು 2019ರ ಜುಲೈನಲ್ಲಿ ರವಿಯವರನ್ನು ನಾಗಾಲ್ಯಾಂಡ್ ರಾಜ್ಯಪಾಲರಾಗಿ ನೇಮಿಸಿತು. ಅಲ್ಲಿನ ನಾಗಾಗಳು ಮತ್ತು ಇತರ ಗುಂಪುಗಳ ನಡುವೆ ಸಂಧಾನಕಾರರಾಗಿ ಕೆಲಸ ಮಾಡಿದ ರವಿ ನಿರ್ದಿಷ್ಟ ಗುಂಪುಗಳ ಪರ ಪಕ್ಷಪಾತದಿಂದ ವರ್ತಿಸುತ್ತಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಕೇವಲ ಎರಡೇ ವರ್ಷಗಳಲ್ಲಿ, 2021ರಲ್ಲಿ, ಕೇಂದ್ರ ಸರ್ಕಾರ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ಕಳುಹಿಸಿತು.
ಈ ಸುದ್ದಿ ಓದಿದ್ದೀರಾ: ‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ…
ಬಿಜೆಪಿಯೇತರ ಪಕ್ಷಗಳು ರಾಜ್ಯಪಾಲ ರವಿ ಅವರ ಕಾರ್ಯವೈಖರಿಯನ್ನು ಟೀಕಿಸಿವೆ. ‘ರಾಜ್ಯಪಾಲರ ಸ್ಥಾನವು ಸಾಂವಿಧಾನಿಕವಾಗಿದೆ ಮತ್ತು ಅವರು ರಾಜ್ಯದ ಕಾವಲುಗಾರರ ಸ್ಥಾನದಲ್ಲಿ ತಟಸ್ಥವಾಗಿ ಕಾರ್ಯ ನಿರ್ವಹಿಸಬೇಕು. ಆದರೆ, ಇತ್ತೀಚೆಗೆ ಕೇಂದ್ರದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯ್ಕೆಯಾದ ರಾಜ್ಯಪಾಲರು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಿಗಿಂತಲೂ ರಾಜಕೀಯ ಪಕ್ಷವೊಂದರ ಪ್ರತಿನಿಧಿಯಂತೆ ವರ್ತಿಸಿದ್ದಾರೆ’ ಎಂದು ಎನ್‌ಸಿಪಿ ಟೀಕಿಸಿದೆ.
ಸದ್ಯ ತಮಿಳುನಾಡು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯಪಾಲರ ಹುದ್ದೆಯ ಬಗೆಗೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ, ನ್ಯಾಯಾಂಗದ ದಾವೆಗಳಿಗೆ ಕಾರಣವಾಗುವ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳ ಮೇಲೆ ಹಿಡಿತ ಸಾಧಿಸಲು ನೆರವಾಗುವ ರಾಜ್ಯಪಾಲರ ಹುದ್ದೆ ನಿಜಕ್ಕೂ ಬೇಕೇ ಎಂದು ಕೂಡ ಕೆಲವರು ಪ್ರಶ್ನಿಸುತ್ತಿದ್ದಾರೆ.
ಐಪಿಎಸ್ ಅಧಿಕಾರಿಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ ರವಿ ತಮ್ಮ ಜೀವನದುದ್ದಕ್ಕೂ ಒಂದಿಲ್ಲೊಂದು ಹುದ್ದೆಯಲ್ಲಿ ಅಧಿಕಾರ ಚಲಾವಣೆ ಮಾಡಿದವರು. ಕಿರಿಯ ಅಧಿಕಾರಿಗಳಿಂದ ಸಲಾಂ ಹಾಕಿಸಿಕೊಳ್ಳುವುದು, ಹುಕುಂ ಜಾರಿ ಮಾಡುವುದು ಅವರ ಕಾರ್ಯಶೈಲಿ. ಆದರೆ, ಪ್ರಜಾತಾಂತ್ರಿಕ ವ್ಯವಸ್ಥೆ ಭಿನ್ನ ರೀತಿಯಲ್ಲಿ ಕೆಲಸ ಮಾಡುವಂಥದ್ದು. ಪ್ರಜೆಗಳ ಆಶಯ, ತತ್ವ, ಭಿನ್ನತೆ, ಪ್ರತಿರೋಧ ಎಲ್ಲವೂ ಮುಖ್ಯವಾಗಿರುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ರವಿಯಂಥವರು ಅರ್ಥಪೂರ್ಣವಾಗಿ ತೊಡಗಲಾರರು ಎನ್ನುವ ವಾದಗಳಿವೆ. ಅಂಥವರಿಂದ ಪ್ರಜಾತಂತ್ರಕ್ಕೆ ಅಪಾಯವಿದೆ ಎನ್ನುವ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ.