ಕಳೆದ ತಿಂಗಳು ಚಲಿಸುತ್ತಿದ್ದ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಕಾನ್‌ಸ್ಟೆಬಲ್ ಚೇತನ್ ಸಿಂಗ್ ಚೌಧರಿ ಎಂಬಾತನನ್ನು ಸೇವೆಯಿಂದ ವಜಾ ಗೊಳಿಸಲಾಗಿದೆ.
ಮುಂಬೈ ಸೆಂಟ್ರಲ್‌ನ ಆರ್‌ಪಿಎಫ್ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಚೌಧರಿಯನ್ನು ವಜಾ ಗೊಳಿಸುವ ಆದೇಶವನ್ನು ಆಗಸ್ಟ್ 14 ರಂದು ಹೊರಡಿಸಿದ್ದಾರೆ. ಅಧಿಕಾರಿಯ ಪ್ರಕಾರ, ಚೌಧರಿ ಈ ಹಿಂದೆ ಕನಿಷ್ಠ ಮೂರು ಶಿಸ್ತು-ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದ
ಆರೋಪಿ ಚೇತನ್ ಸಿಂಗ್ ಜುಲೈ 31ರಂದು ತನ್ನ ಹಿರಿಯ ಅಧಿಕಾರಿ, ಎಎಸ್‌ಐ ಟಿಕಾರಾಂ ಮೀನಾ ಮತ್ತು ಇತರ ಮೂವರು ಮುಸ್ಲಿಂ ಪ್ರಯಾಣಿಕರನ್ನು ಮುಂಬೈ ಹೊರ ವಲಯದ ಪಾಲ್ಘರ್ ರೈಲು ನಿಲ್ದಾಣದ ಸಮೀಪ ಜೈಪುರ – ಮುಂಬೈ ಎಕ್ಸ್‌ಪ್ರೆಸ್‌ನ ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದ.
ಈ ಸುದ್ದಿ ಓದಿದ್ದೀರಾ? ಚೀನಾದೊಂದಿಗೆ ಮೋದಿ ಸರ್ಕಾರ ರಾಜಿ ಮಾಡಿಕೊಂಡಿದೆಯೇ: ಗಡಿ ವಿವಾದಕ್ಕೆ ಕಾಂಗ್ರೆಸ್ ಪ್ರಶ್ನೆ
ರೈಲಿನ ಬೇರೆ ಬೇರೆ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಹುಸೇನ್, ಭಾನ್‌ಪುರ್‌ವಾಲಾ, ಸಯ್ಯದ್ ಸಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಕನಿಷ್ಠ ಮೂರು ಶಿಸ್ತು ಕ್ರಮ ಸಂಬಂಧಿತ ಘಟನೆಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಚೌಧರಿ ನ್ಯಾಯಾಂಗ ಬಂ ಧನದಲ್ಲಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.
ಬುರ್ಖಾಧಾರಿ ಮಹಿಳೆಗೆ ‘ಜೈ ಮಾತಾ ದಿ’ ಎನ್ನುವಂತೆ ಒತ್ತಾಯ
ಜುಲೈ 31ರಂದು ಜೈಪುರ್-ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಮಂದಿ ಪ್ರಯಾಣಿಕರನ್ನು ಗುಂಡಿಟ್ಟು ಹತ್ಯೆಗೈದ ಆರೋಪ ಎದುರಿಸುತ್ತಿರುವ ರೈಲ್ವೆ ರಕ್ಷಣಾ ದಳದ ಪೊಲೀಸ್ ಪೇದೆ ಚೇತನ್ ಸಿಂಗ್ ಚೌಧರಿ, ಬುರ್ಖಾಧಾರಿ ಮಹಿಳಾ ಪ್ರಯಾಣಿಕರೊಬ್ಬರನ್ನು ಬೆದರಿಸಿ, “ಜೈ ಮಾತಾ ದಿ” ಎಂದು ಪಠಿಸುವಂತೆಯೂ ಒತ್ತಾಯಸಿದ್ದ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಪ್ರಕರಣದ ತನಿಖೆ ನಡೆಸುತ್ತಿರುವ ಬೊರಿವಿಲಿ ಸರ್ಕಾರಿ ರೈಲ್ವೆ ಪೊಲೀಸರು ಸದರಿ ಮಹಿಳೆಯನ್ನು ಪತ್ತೆ ಹಚ್ಚಿದ್ದು, ಆಕೆಯನ್ನು ಪ್ರಮುಖ ಸಾಕ್ಷಿಯನ್ನಾಗಿಸಿದ್ದಾರೆ. ಪೊಲೀಸರು ಆಕೆಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಈ ಘಟನೆಯು ರೈಲಿನಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲೂ ಸೆರೆಯಾಗಿದೆ.
ಈ ಘಟನೆ ಕಂಡು ಆಘಾತಗೊಂಡ ಪ್ರಯಾಣಿಕರು ರೈಲಿನ ಚೈನನ್ನು ಎಳೆದಿದ್ದರಿಂದ ಮೀರಾ ರಸ್ತೆ ನಿಲ್ದಾಣದ ಬಳಿ ರೈಲು ನಿಲುಗಡೆಯಾಗಿತ್ತು. ಆಗ ಘಟನಾ ಸ್ಥಳದಿಂದ ಪಾರಾಗಲು ಚೌಧರಿ ಯತ್ನಿಸುವಾಗ ಆತನನ್ನು ಶಸ್ತ್ರಾಸ್ತ ಸಮೇತ ಸೆರೆ ಹಿಡಿಯಲಾಗಿತ್ತು.