ಸೂಕ್ಷ್ಮವಾಗಿರುವ ಸರ್ಕಾರಿ ಮಾಹಿತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ ಸರ್ಕಾರವು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಯುಎಸ್‌ಬಿ ಮತ್ತು ಪೆನ್‌ಡ್ರೈವ್‌ಗಳ ಬಳಕೆಯನ್ನು ನಿಷೇಧಿಸಿದೆ. ಸರ್ಕಾರದ ಆಯುಕ್ತ ಕಾರ್ಯದರ್ಶಿ ಎಂ ರಾಜು ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ಸೈಬರ್ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಈ ಕ್ರಮವು ಹೊಂದಿದೆ.
“ಜಮ್ಮು ಕಾಶ್ಮೀರದಲ್ಲಿ ಸೈಬರ್ ಭದ್ರತೆಯನ್ನು ಹೆಚ್ಚಿಸಲು, ಸೂಕ್ಷ್ಮ ಸರ್ಕಾರಿ ಮಾಹಿತಿಯನ್ನು ರಕ್ಷಿಸಲು, ಡೇಟಾ ಉಲ್ಲಂಘನೆ, ಮಾಲ್‌ವೇರ್ ಎರರ್, ಅನಧಿಕೃತ ಪ್ರವೇಶದ ಅಪಾಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಮ್ಮು ಮತ್ತು ಶ್ರೀನಗರದ ನಾಗರಿಕ ಸಚಿವಾಲಯದ ಎಲ್ಲಾ ಆಡಳಿತ ಸರ್ಕಾರಿ ಇಲಾಖೆಗಳಲ್ಲಿ, ಎಲ್ಲಾ ಜಿಲ್ಲೆಗಳ ಉಪಾಯುಕ್ತ ಕಚೇರಿಗಳಲ್ಲಿ ಅಧಿಕೃತ ಸಾಧನಗಳಲ್ಲಿ ಪೆನ್‌ಡ್ರೈವ್ ಬಳಕೆಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಮೋದಿಯ ಬಿಜೆಪಿ, ಕೇಂದ್ರ ಸರ್ಕಾರದ ದಮನನೀತಿಗೆ ಉತ್ತರ ಕೊಟ್ಟ ಜಮ್ಮು-ಕಾಶ್ಮೀರ
ಆದಾಗ್ಯೂ ಕಾರ್ಯಾಚರಣೆಗೆ ಅಗತ್ಯವಾಗಿರುವ ಕಾರಣಕ್ಕೆ ಕೆಲವು ಸಂದರ್ಭಗಳಲ್ಲಿ ಪ್ರತಿ ಇಲಾಖೆಯಲ್ಲಿ ಎರಡರಿಂದ ಮೂರು ಪೆನ್‌ಡ್ರೈವ್‌ಗಳ ಬಳಕೆಗೆ ಅನುಮತಿಸಬಹುದು. ಆದರೆ ಅದಕ್ಕೂ ಮುನ್ನ ರಾಷ್ಟ್ರೀಯ ಮಾಹಿತಿ ಕೇಂದ್ರದ ರಾಜ್ಯ ಮಾಹಿತಿ ಅಧಿಕಾರಿ (SIO) ಮನವಿ ಸಲ್ಲಿಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಸೂಚನೆಯನ್ನು ಪಾಲಿಸದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು. ಈ ಸಂಬಂಧ ಜಾರಿಯಲ್ಲಿರು ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಮ್ಮು ಕಾಶ್ಮೀರ ಸರ್ಕಾರವು ಎಚ್ಚರಿಕೆ ನೀಡಿದೆ.
