ಜಮ್ಮು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾನುವಾರ ಸಂಜೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ವೈದ್ಯ ಮತ್ತು ಆರು ಕಾರ್ಮಿಕರು ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಾರ್ಮಿಕರಲ್ಲಿ ಸ್ಥಳೀಯರು ಮತ್ತು ಇತರೆ ರಾಜ್ಯದವರು ಇದ್ದರು. ಗುಂಡ್‌ನಲ್ಲಿರುವ ನಿರ್ಮಾಣ ಸ್ಥಳದಲ್ಲಿ ಕೆಲಸ ಮುಗಿಸಿ ತಮ್ಮ ಶಿಬಿರಕ್ಕೆ ಮರಳುತ್ತಿದ್ದಾಗ ಈ ದಾಳಿ ನಡೆದಿದೆ. ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ಭಯೋತ್ಪಾದಕ ದಾಳಿಯಿಂದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ವೈದ್ಯ ಸೇರಿ ಇತರ ಗಾಯಾಳುಗಳು ಬಳಿಕ ಮೃತಪಟ್ಟಿದ್ದಾರೆ. ಇನ್ನೂ ಐವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರನ್ನು ಡಾ. ಶಾನವಾಜ್, ಫಹೀಮ್ ನಜೀರ್, ಕಲೀಂ, ಮೊಹಮ್ಮದ್ ಹನೀಫ್, ಶಶಿ ಅಬ್ರೋಲ್, ಅನಿಲ್ ಶುಕ್ಲಾ ಮತ್ತು ಗುರ್ಮೀತ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕಾರ
ಈ ನಡುವೆ ಭಯೋತ್ಪಾದಕ ದಾಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಖಂಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ ಜೆ & ಕೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, “ನಾಗರಿಕರ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಯು ಹೇಡಿತನದ ಕೃತ್ಯವಾಗಿದೆ. ಹೊಣೆಗಾರರು ನಮ್ಮ ಭದ್ರತಾ ಪಡೆಗಳಿಂದ ಕಠಿಣ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯೋಧನ ಮೃತದೇಹ ಪತ್ತೆ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. “ಈ ಕೃತ್ಯವು ಮಾನವೀಯತೆ ವಿರುದ್ದದ ಅಪರಾಧವಾಗಿದೆ. ಇಂತಹ ದುಷ್ಕೃತ್ಯಗಳ ವಿರುದ್ಧ ಇಡೀ ರಾಷ್ಟ್ರ ಒಗ್ಗಟ್ಟಾಗಿ ನಿಂತಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ” ಎಂದು ಹಾರೈಸಿದರು.
ಇನ್ನು “ಹಲವು ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ಶ್ರೀನಗರದ ಎಸ್‌ಕೆಐಎಂಎಸ್‌ಗೆ ಸ್ಥಳಾಂತರಿಸಲಾಗಿದೆ. ಆದ್ದರಿಂದ ಸಾವುನೋವುಗಳ ಅಂಕಿಅಂಶಗಳು ಹೆಚ್ಚಾಗಬಹುದು” ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ. ಹಾಗೆಯೇ ಪ್ರತ್ಯೇಕ ಹೇಳಿಕೆಯಲ್ಲಿ ಈ ದಾಳಿಯನ್ನು ‘ಭೀಕರ’ ಕೃತ್ಯ ಎಂದು ವಿವರಿಸಿದ್ದಾರೆ.
