ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್‌ನ 500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ವಶಪಡಿಸಿಕೊಂಡಿರುವ ಆಸ್ತಿಯಲ್ಲಿ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್, ಪತ್ನಿ ಅನಿತಾ ಗೋಯಲ್ ಮತ್ತು ಪುತ್ರ ನಿವಾನ್ ಗೋಯಲ್ ಸೇರಿದಂತೆ ಲಂಡನ್, ದುಬೈ ಮತ್ತು ಭಾರತದ ಕೆಲವು ರಾಜ್ಯಗಳಲ್ಲಿ ಕಂಪನಿಗಳು ಮತ್ತು ಸಂಬಂಧಪಟ್ಟ ಹೆಸರಿನಲ್ಲಿ ನೋಂದಾಯಿಸಲಾದ 17 ವಸತಿ ಫ್ಲಾಟ್‌ಗಳು, ಬಂಗಲೆಗಳು ಮತ್ತು ವಾಣಿಜ್ಯ ಕಟ್ಟಡಗಳು ಸೇರಿವೆ.
ಕೇಂದ್ರ ತನಿಖಾ ಸಂಸ್ಥೆ ಕನಿಷ್ಠ 538 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಥವಾ ಪಿಎಂಎಲ್ಎ, 2002ರ ಅಡಿಯಲ್ಲಿ ಜಪ್ತಿ ಮಾಡಿದೆ.
ಗೋಯಲ್‌ಗಳ ಹೊರತಾಗಿ, ಕೆಲವು ಆಸ್ತಿಗಳನ್ನು ಜೆಟೈರ್ ಪ್ರೈವೇಟ್ ಲಿಮಿಟೆಡ್ ಮತ್ತು ಜೆಟ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.
ಕೆನರಾ ಬ್ಯಾಂಕ್ ಸಲ್ಲಿಸಿರುವ ವಂಚನೆ ಪ್ರಕರಣದಲ್ಲಿ ಇಡಿ ನಿನ್ನೆ ಗೋಯಲ್ ಮತ್ತು ಇತರ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ನಿರೀಕ್ಷಣಾ ಜಾಮೀನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಬ್ಯಾಂಕ್ ಸಲ್ಲಿಸಿರುವ ಎಫ್ಐಆರ್‌ನಲ್ಲಿ 848 ಕೋಟಿ ರೂ. ವರೆಗಿನ ಸಾಲದ ಮಿತಿಗಳನ್ನು ಮತ್ತು ಸಾಲವನ್ನು ಮಂಜೂರು ಮಾಡಿದೆ ಎಂದು ಆರೋಪಿಸಿದೆ. ಅದರಲ್ಲಿ 538 ಕೋಟಿ ರೂ. ಬಾಕಿ ಇದೆ.
ಗೋಯಲ್ ಅವರನ್ನು ಪಿಎಂಎಲ್ಎ ಅಡಿಯಲ್ಲಿ ಸೆಪ್ಟೆಂಬರ್ 1 ರಂದು ಇಡಿ ಬಂಧಿಸಿತು. ಸದ್ಯ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ.
ಜೆಟ್ ಏರ್‌ವೇಸ್ ಸಂಸ್ಥಾಪಕರು ಇತರ ದೇಶಗಳಲ್ಲಿ ಟ್ರಸ್ಟ್‌ಗಳನ್ನು ರಚಿಸುವ ಮೂಲಕ ಹಣವನ್ನು ವರ್ಗಾಯಿಸಿದ್ದಾರೆ ಎಂದು ಇಡಿ ಆರೋಪಿಸಿದೆ. ಆ ಟ್ರಸ್ಟ್ಗಳ ಮೂಲಕ ಚಿರಾಸ್ತಿಗಳನ್ನು ಖರೀದಿಸಲಾಗಿದೆ. ಆಸ್ತಿ ಮಾತ್ರವಲ್ಲ, ಈ ಸಾಲದ ಹಣವನ್ನೇ ಬಳಸಿ ಬಟ್ಟೆಬರೆ, ಪೀಠೋಪಕರಣ, ಒಡವೆ ಇತ್ಯಾದಿಗಳನ್ನು ಗೋಯಲ್ ಕುಟುಂಬ ಸದಸ್ಯರು ಖರೀದಿ ಮಾಡಿರುವುದು ಆಡಿಟಿಂಗ್ ವೇಳೆ ಬೆಳಕಿಗೆ ಬಂದಿತ್ತು.
ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಎರಡು ತಿಂಗಳ ಹಿಂದೆ ನಡೆದ ವಿಚಾರಣೆ ವೇಳೆ ನರೇಶ್ ಗೋಯಲ್ ಅವರು ತಮ್ಮ ಹಣ ಬಳಕೆಯ ರೀತಿಯನ್ನು ಸಮರ್ಥಿಸಿಕೊಂಡಿದ್ದರು. ವೈಮಾನಿಕ ವಲಯವು ಬ್ಯಾಂಕ್ ಸಾಲದ ಮೇಲೆ ನಿಂತಿರುತ್ತವೆ. ಸಾಲದ ಹಣದ ಬಳಕೆಯನ್ನು ಮನಿ ಲಾಂಡರಿಂಗ್ ಎನ್ನಲಾಗದು ಎಂಬುದು ಅವರ ವಾದ.