ಜಾರ್ಖಂಡ್ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರು ಚಂಪೈ ಸೊರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಮಂತ್ ಸೊರೇನ್ ಅವರು ಇಂದು ಸಂಜೆ 5 ಗಂಟೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಸುಪ್ರಿಯೊ ಬಟ್ಟಾಚಾರ್ಯ ತಿಳಿಸಿದ್ದಾರೆ.
“ರಾಜ್ಯಪಾಲರು ನಮಗೆ ಸರ್ಕಾರ ರಚಿಸಲು ಹಾಗೂ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದಾರೆ.ಇದೇ ಸಂಪುಟದ ಜೊತೆ ಮುಖ್ಯಮಂತ್ರಿಯವರು ಇಂದು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದೇವೆ” ಎಂದು ಬಟ್ಟಾಚಾರ್ಯ ತಿಳಿಸಿದ್ದಾರೆ.
ಐದು ತಿಂಗಳ ಹಿಂದಷ್ಟೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಚಂಪೈ ಸೊರೇನ್, ಹೇಮಂತ್ ಸೊರೇನ್ ಅವರಿಗೆ ಸಿಎಂ ಆಗಲು ಪುನಃ ಅವಕಾಶ ನೀಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮತ್ತೆ ಮಳೆ ಹೊಯ್ಯುತಿದೆ, ಡೆಂಘೀ ಹರಡುತಿದೆ- ಆರೋಗ್ಯ ಇಲಾಖೆ ಏನು ಮಾಡುತ್ತಿದೆ?
ಜಾರ್ಖಂಡ್ ಮುಕ್ತಿ ಮೋರ್ಚಾದ ಕಾರ್ಯಕಾರಿ ಅಧ್ಯಕ್ಷರಾದ ಹೇಮಂತ್ ಸೊರೇನ್ ಭೂ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಜನವರಿಯಲ್ಲಿ ಬಂಧನಕ್ಕೊಳಗಾಗಿದ್ದರು. ಬಂಧನಕ್ಕೊಳಗಾಗುವ ಮುನ್ನ ಸಿಎಂ ಹುದ್ದೆಗೆ ಹೇಮಂತ್ ರಾಜೀನಾಮೆ ನೀಡಿದ್ದರು. ಜಾರ್ಖಂಡ್ ಹೈಕೋರ್ಟ್ ಜೂನ್ 28 ರಂದು ಹೇಮಂತ್ ಸೊರೇನ್ ಅವರಿಗೆ ಜಾಮೀನು ನೀಡಿತ್ತು.
ಪ್ರಕರಣದ ಒಟ್ಟಾರೆ ದೃಷ್ಟಿಕೋನದಲ್ಲಿ ನಿರ್ದಿಷ್ಟವಾಗಿ ಅಥವಾ ಪರೋಕ್ಷವಾಗಿ ಆರೋಪಿಯಾಗಿರುವವರು ಭೂಹಗರಣದಲ್ಲಿ ಭಾಗಿಯಾಗಿರುವಂತೆ ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಜಾಮೀನು ನೀಡುವ ಸಂದರ್ಭದಲ್ಲಿ ತಿಳಿಸಿದ್ದರು.
ಹೇಮಂತ್ ಸೊರೇನ್ ಮತ್ತೆ ಮುಖ್ಯಮಂತ್ರಿಯಾಗುತ್ತಿರುವ ಕ್ರಮವನ್ನು ಖಂಡಿಸಿರುವ ಬಿಜೆಪಿ ಇಂಡಿಯಾ ಒಕ್ಕೂಟದ ನಾಯಕರಿಗೆ ಅಧಿಕಾರದ ದಾಹ ಹೆಚ್ಚಾಗಿದೆ ಎಂದು ಹೇಳಿದೆ.
