- ಹೈದರಾಬಾದ್ ಮೂಲದ ಸ್ವತಂತ್ರ ಪತ್ರಕರ್ತೆ ತುಳಸಿ ಚಂದು
- ‘ಒಂದು ದಿನ ಅವರು ನನ್ನನ್ನೂ ಕೊಲ್ಲಬಹುದು’ ಎಂದಿದ್ದ ಪತ್ರಕರ್ತೆ
ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಬಲಪಂಥೀಯ ಗುಂಪಿನಿಂದ ಟ್ರೋಲ್‌ಗೊಳಗಾಗುತ್ತಿರುವ ಸ್ವತಂತ್ರ ಪತ್ರಕರ್ತೆಯೋರ್ವರು ಅದನ್ನು ವಿವರಿಸುವಾಗ ಬಹಿರಂಗ ಸಭೆಯಲ್ಲೇ ಭಾವುಕರಾದ ಪ್ರಸಂಗ ಹೈದರಾಬಾದ್‌ನಲ್ಲಿ ನಡೆದಿದೆ. ಆ ಮೂಲಕ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣವಾಗುತ್ತಿರುವುದಕ್ಕೆ ಕನ್ನಡಿ ಹಿಡಿದಿದ್ದಾರೆ.
ಹೈದರಾಬಾದಿನಲ್ಲಿ ಪತ್ರಕರ್ತರ ಒಕ್ಕೂಟವೊಂದು ಟ್ರೋಲಿಂಗ್ ವಿರುದ್ಧ ದುಂಡುಮೇಜಿನ ಸಭೆಯೊಂದನ್ನು ಆಯೋಜಿಸಿತ್ತು.
ಈ ವೇಳೆ ಉಪಸ್ಥಿತರಿದ್ದ ತೆಲುಗಿನ ಸ್ವತಂತ್ರ ಪತ್ರಕರ್ತೆ ತುಳಸಿ ಚಂದು ಮಾತನಾಡುವಾಗ, “ನಾನು ಯಾವಾಗಲೂ ಕೋಮು ರಾಜಕೀಯ ಮತ್ತು ಭ್ರಷ್ಟಾಚಾರವನ್ನು ಪಕ್ಷ ನೋಡದೆ ಪ್ರಶ್ನಿಸಿದ್ದೇನೆ. ಆದರೆ ಬಿಜೆಪಿ ಮತ್ತು ಹಿಂದೂ ಬಲಪಂಥೀಯ ಗುಂಪಿನ ಸದಸ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ನನ್ನನ್ನು ಹಿಂದೂ ವಿರೋಧಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ, ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ವೈಯಕ್ತಿಕವಾಗಿ ದಾಳಿ ಮಾಡುತ್ತಾರೆ. ನನಗೂ ಸಣ್ಣ ಮಕ್ಕಳಿದ್ದಾರೆ” ಎಂದು ಹೇಳುವಾಗ ಭಾವುಕರಾದರು.
“ಕೋಮು ದ್ವೇಷವು ದೇಶದ ಯುವಕರಿಗೆ ಹಾನಿಕಾರಕ ಎಂದು ಜನರಿಗೆ ಹೇಳಿದ್ದಕ್ಕಾಗಿ ನನ್ನನ್ನು ದ್ವೇಷಿಸಲಾಗುತ್ತಿದೆ ಮತ್ತು ನಿಂದನೆ ಮಾಡಲಾಗುತ್ತಿದೆ. ನನ್ನ ಫೋಟೋಗಳನ್ನು ಅಶ್ಲೀಲವಾಗಿ ತಿರುಚಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗುತ್ತಿದೆ. ಒಂದಲ್ಲ ಒಂದು ದಿನ, ದ್ವೇಷವನ್ನು ತುಂಬಿದ ಕೆಲವು ಮುಗ್ಧ ಯುವಕರು ಕತ್ತಿಯಾಗಿ ಪರಿವರ್ತನೆಯಾಗಿ ನನ್ನನ್ನೂ ಕೊಲ್ಲಲೂ ಬಹುದು” ಎಂದು ತುಳಸಿ ಚಂದು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಸುದೀರ್ಘ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಾಕಿದ್ದರು.
ಇತ್ತೀಚೆಗೆ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (RSF) ತನ್ನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ 21ನೇ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. 180 ರಾಷ್ಟ್ರಗಳ ಪೈಕಿ ಭಾರತವು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ 161ನೇ ಸ್ಥಾನಕ್ಕೆ ಜಾರಿರುವುದನ್ನು ಇಲ್ಲಿ ಸ್ಮರಿಸಬಹುದು.
ಪತ್ರಕರ್ತರ ಸುರಕ್ಷತೆಯ ವಿಷಯದಲ್ಲಿ ಭಾರತದ ಸಾಧನೆ ಕಳಪೆಯಾಗಿದೆ. ಪ್ರತಿ ವರ್ಷ ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಸರಾಸರಿ ಮೂರರಿಂದ ನಾಲ್ಕು ಪತ್ರಕರ್ತರು ಹತ್ಯೆಯಾಗುತ್ತಿದ್ದಾರೆ. ಪತ್ರಕರ್ತರ ಪಾಲಿಗೆ ಭಾರತವು ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿತ್ತು.