ಕಳೆದ ಆರು ತಿಂಗಳ ಅವಧಿಯಲ್ಲಿ 11 ವಿವಿಧ ಅಪರಾಧ ಪ್ರಕರಣಗಳಲ್ಲಿ ಒಟ್ಟು 23 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಬರೇಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಲಹಾಬಾದ್ ಹೈಕೋರ್ಟ್ ಆದೇಶದಂತೆ ರವಿ ಕುಮಾರ್ ಅವರನ್ನು ಮುಜಫರ್‌ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.
ವರ್ಗಾವಣೆಗೊಳ್ಳುವ ಮೊದಲು ರವಿ ಕುಮಾರ್ ದಿವಾಕರ್ ಅವರು ಬರೇಲಿಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು. ಹೈಕೋರ್ಟ್ ಆದೇಶದಂತೆ ಅವರನ್ನು ಈಗ ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ರವಿ ಕುಮಾರ್ ದಿವಾಕರ್ ಅವರ ವರ್ಗಾವಣೆಯಿಂದ ತೆರವಾಗಿರುವ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ನ್ಯಾಯಾಧೀಶೆ ಶಿವ ಕುಮಾರಿ ಅವರನ್ನು ನಿಯೋಜಿಸಲಾಗಿದೆ.
ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರು ಈ ವರ್ಷದ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಿನ ಕೇವಲ ಆರು ತಿಂಗಳ ಅವಧಿಯಲ್ಲಿ ಕೊಲೆ ಮತ್ತು ಇತರ ಗಂಭೀರ ಅಪರಾಧಗಳಿಗೆ ಸಂಬಂಧಿಸಿದ 11 ಪ್ರಕರಣ ವಿಚಾರಣೆ ನಡೆಸಿ 23 ಜನರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಗಮನ ಸೆಳೆದಿದ್ದರು. ಆದಾಗ್ಯೂ, ಇತ್ತೀಚೆಗೆ ಅವರು ತಮ್ಮ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣಗಳ ವರ್ಗಾವಣೆ ವಿಚಾರವಾಗಿ ಜಿಲ್ಲಾ ನ್ಯಾಯಾಂಗ ಆಡಳಿತದ ವಿರುದ್ಧ ಬಹಿರಂಗವಾಗಿಯೇ ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದರು.
ಈ ಲೇಖನ ಓದಿದ್ದೀರಾ?: ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ ಗೀತೆಗಳಿವು!
ಕಳೆದ ಆಗಸ್ಟ್‌ನಲ್ಲಿ ಅಂದಿನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಕೆ. ಸಿಂಗ್ ಅವರು ಹೊರಡಿಸಿದ ಆಡಳಿತಾತ್ಮಕ ಆದೇಶದ ಮೂಲಕ ರವಿ ಕುಮಾರ್ ದಿವಾಕರ್ ಅವರ ನ್ಯಾಯಾಲಯದಲ್ಲಿದ್ದ ಕೊಲೆ ಪ್ರಕರಣ ಸೇರಿದಂತೆ 97 ಗಂಭೀರ ಪ್ರಕರಣಗಳನ್ನು ಇತರ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿತ್ತು. ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ರವಿ ಕುಮಾರ್, “ವಿಚಾರಣೆ ಭಾಗಶಃ ಪೂರ್ಣಗೊಂಡಿರುವ ಪ್ರಕರಣಗಳನ್ನು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ಕೇವಲ ಆಡಳಿತಾತ್ಮಕ ಆದೇಶಗಳ ಮೂಲಕ ಹಿಂದಕ್ಕೆ ಪಡೆಯಲು ಸಾಧ್ಯವೇ” ಎಂದು ಪ್ರಶ್ನಿಸಿದ್ದರು.
ಇದರ ಜೊತೆಗೆ, ನ್ಯಾಯಾಂಗದ ಸ್ವಾಯತ್ತತೆ, ಕಾರ್ಯನಿರ್ವಹಣಾ ಸ್ವಾತಂತ್ರ್ಯ ಹಾಗೂ ಜಿಲ್ಲಾ ನ್ಯಾಯಾಧೀಶರ ಆಡಳಿತಾತ್ಮಕ ಅಧಿಕಾರಗಳ ಮಿತಿಯ ಕುರಿತಾಗಿಯೂ ಅವರು ಕಳವಳ ವ್ಯಕ್ತಪಡಿಸಿದ್ದರು.




