- ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ
- ನ್ಯಾಯಾಧೀಶರು ಸಂದರ್ಶನ ನೀಡಿದರೆ ಈ ಪ್ರಕರಣ ವಿಚಾರಣೆ ನಡೆಸುವ ಹಾಗಿಲ್ಲ ಎಂದ ಸುಪ್ರೀಂ ಪೀಠ
ನ್ಯಾಯಾಧೀಶರು ಮಾಧ್ಯಮಗಳಿಗೆ ತಮ್ಮ ಮುಂದಿನ ಪ್ರಕರಣಗಳ ಕುರಿತ ಸಂದರ್ಶನ ನೀಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿರುವ ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ, “ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಟಿವಿ ಸಂದರ್ಶನಗಳನ್ನು ನ್ಯಾಯಾಧೀಶರು ನೀಡುವುದು ಸರಿಯಲ್ಲ, ಆದರೆ ನ್ಯಾಯಾಧೀಶರೊಬ್ಬರು ಸಂದರ್ಶನ ನೀಡಿದರೆ ನಂತರ ಅವರು ಆ ನಿರ್ದಿಷ್ಟ ಪ್ರಕರಣದಲ್ಲಿ ವಿಚಾರಣೆ ನಡೆಸುವ ಹಾಗಿಲ್ಲ” ಎಂದು ತಿಳಿಸಿತು.
ಅಲ್ಲದೆ ಈ ನಿರ್ದಿಷ್ಟ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್, ಕೊಲ್ಕತ್ತ ಹೈಕೋರ್ಟ್‌ನಿಂದ ವರದಿ ಕೇಳಿದೆ. ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರನ್ನು ಸುಮನ್ ಡೇ ಸಂದರ್ಶನ ಮಾಡಿದ್ದರೇ ಎಂಬುದನ್ನು ಪರಿಶೀಲಿಸುವಂತೆ ಕೊಲ್ಕತ್ತಾ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿ ಶುಕ್ರವಾರದೊಳಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸ್ಪಷ್ಟೀಕರಣದೊಂದಿಗೆ ಅಫಿಡವಿಟ್ ಸಲ್ಲಿಸಬೇಕು ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬಾಲ್ಯ ವಿವಾಹ ತಡೆಗೆ ಕೈಗೊಂಡಿರುವ ಕ್ರಮ ತಿಳಿಸಿ: ಕೇಂದ್ರಕ್ಕೆ ಮಾಹಿತಿ ಕೇಳಿದ ‘ಸುಪ್ರೀಂ’
ಒಂದು ವೇಳೆ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದೇ ಆದಲ್ಲಿ ಅವರು ಈ ಪ್ರಕರಣ ವಿಚಾರಣೆ ನಡೆಸುವ ಹಾಗಿಲ್ಲ ಮತ್ತು ಬೇರೊಂದು ಪೀಠ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಿಬಿಐ ಮತ್ತು ಇ.ಡಿ ತನಿಖೆಗೆ ಸೂಚಿಸಿ ಕೊಲ್ಕತ್ತಾ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಪೀಠವು ಅಸಮಾಧಾನ ಹೊರಹಾಕಿದೆ.
ತನಿಖೆಗೆ ಆದೇಶಿಸಿ ತೀರ್ಪು ನೀಡಿದ ನ್ಯಾಯಾಧೀಶ ಗಂಗೋಪಾಧ್ಯಾಯ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.