ಕಾಂಗ್ರೆಸ್ ಸೇರ್ಪಡೆಗೊಂಡ ಒಂದು ದಿನದ ನಂತರ ಹಿರಿಯ ನಾಯಕ ಕೆ ಕೇಶವ್ ರಾವ್ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಆರ್‌ಎಸ್ ಟಿಕೆಟ್‌ನಿಂದ ರಾಜ್ಯಸಭೆ ಸದಸ್ಯರಾಗಿದ್ದ ಅವರು ತಾವು ಸದಸ್ಯರಾಗಿ ಮುಂದುವರಿಯಲು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಲ್ಲ ಎಂದು ತಿಳಿಸಿದ್ದಾರೆ.
85 ವರ್ಷದ ಕೆ ಕೇಶವ್‌ರಾವ್ ಅವರಿಗೆ ತಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನು ಎರಡು ವರ್ಷಗಳವರೆಗೆ ಇತ್ತು. ಕೇಶವ್ ರಾವ್ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
“ನಿನ್ನೆ ಕಾಂಗ್ರೆಸ್ ಸೇರಿಕೊಂಡ ಪರಿಣಾಮ ಕಳೆದ ಬಾರಿ ಬಿಆರ್‌ಎಸ್ ಚಿಹ್ನೆಯಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದ ಕಾರಣ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಿತ್ತು. ನಾನು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ನನ್ನ ಸ್ಥಾನವನ್ನು ತ್ಯಜಿಸಿದ್ದೇನೆ” ಎಂದು ರಾವ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮತ್ತೆ ಮಳೆ ಹೊಯ್ಯುತಿದೆ, ಡೆಂಘೀ ಹರಡುತಿದೆ- ಆರೋಗ್ಯ ಇಲಾಖೆ ಏನು ಮಾಡುತ್ತಿದೆ?
“ಕನಿಷ್ಠ ಮೌಲ್ಯಗಳನ್ನು ಎತ್ತಿಹಿಡಿಯುವುದಕ್ಕಾಗಿ ರಾಜ್ಯಸಭೆ ಅಧ್ಯಕ್ಷರಿಗೆ ನನ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಅವಧಿ ಇನ್ನು ಎರಡು ವರ್ಷಗಳ ಕಾಲದವರೆಗೆ ಇತ್ತು” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಕಾಂಗ್ರೆಸ್‌ನಲ್ಲಿದ್ದ ಕೇಶವ್ ರಾವ್ ಅವರು ತೆಲಂಗಾಣ ರಾಜ್ಯ ರಚನೆಗೆ ತಡ ಮಾಡಿದ ಕಾರಣಕ್ಕಾಗಿ 2013ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಕೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಬಿಆರ್‌ಎಸ್ ಸೇರ್ಪಡೆಗೊಂಡಿದ್ದರು. ಈ ಮೊದಲು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು.
ಬುಧವಾರ ಜುಲೈ 3 ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.