ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಆಂಧ್ರ ಪ್ರದೇಶದ ಟಿಡಿಪಿಯ ರಾಮ್ ಮೋಹನ್ ನಾಯ್ಡು ಅತೀ ಕಿರಿಯ ಸಚಿವನಾದರೆ, ಬಿಹಾರದ ಹಿಂದೂಸ್ತಾನಿ ಹವಾಮಿ ಮೋರ್ಚಾದ ಜಿತಿನ್ ರಾಮ್ ಮಾಂಝಿ ಅತೀ ಹಿರಿಯ ಸಚಿವರಾಗಿದ್ದಾರೆ.
ರಾಮಮೋಹನ್ ನಾಯ್ಡು ಅವರಿಗೆ ಈಗ ವಯಸ್ಸು ಕೇವಲ 36 ವರ್ಷ. ರಾಮಮೋಹನ್ ನಾಯ್ಡು ಮೂರನೇ ಬಾರಿ ಸಂಸದರಾಗಿದ್ದಾರೆ. 2014ರಲ್ಲಿ ಅವರು 26ನೇ ವಯಸ್ಸಿಗೆ ಸಂಸದರಾಗಿದ್ದರು. ಎರಡನೇ ಅತ್ಯಂತ ಕಿರಿಯ ವಯಸ್ಸಿನ ಸಂಸದರೆಂಬ ದಾಖಲೆ ಅವರದಾಗಿತ್ತು. ಈಗ ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಮಂತ್ರಿ ಎಂಬ ದಾಖಲೆ ಅವರದ್ದಾಗಿದೆ. ಅವರು ಮೋದಿ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವ ಸ್ಥಾನ ದೊರಕಿದೆ.
ಆಂಧ್ರದ ಶ್ರೀಕಾಕುಲಂ ಕ್ಷೇತ್ರದಿಂದ ಸತತವಾಗಿ ಮೂರನೇ ಬಾರಿ ಗೆದ್ದಿರುವ ರಾಮಮೋಹನ್ ರೆಡ್ಡಿ ಅವರು ಮಾಜಿ ಕೇಂದ್ರ ಸಚಿವ ಕೆ ಯರನ್ ನಾಯ್ಡು ಅವರ ಪುತ್ರ. ಕುತೂಹಲ ಎಂದರೆ ಯರನ್ ನಾಯ್ಡು ಕೂಡ ಅತ್ಯಂತ ಕಿರಿಯ ವಯಸ್ಸಿನ ಸಂಪುಟ ದರ್ಜೆ ಸಚಿವ ಎಂಬ ದಾಖಲೆಯನ್ನು 1996ರಲ್ಲಿ ಹೊಂದಿದ್ದರು. 2012ರಲ್ಲಿ ಯರನ್ ನಾಯ್ಡು ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ ರಾಮಮೋಹನ್ ನಾಯ್ಡು ರಾಜಕೀಯಕ್ಕೆ ಬರಬೇಕಾಯಿತು.
ಈ ಸುದ್ದಿ ಓದಿದ್ದೀರಾ? ಮೋದಿ ಮಂತ್ರಿಮಂಡಲದಲ್ಲಿ 71 ಸಚಿವರ ಪ್ರಮಾಣ ವಚನ: 24 ರಾಜ್ಯಗಳಿಗೆ, ಮಿತ್ರಪಕ್ಷಗಳ 11 ಮಂದಿಗೆ ಸ್ಥಾನ
ಬಿಹಾರದ ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಝಿ ಅವರ ವಯಸ್ಸು 79 ವರ್ಷ. ಇವರು ಮೋದಿ ಸಂಪುಟದ ಅತೀ ಹಿರಿಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಂದೂಸ್ತಾನಿ ಹವಾಮಿ ಮೋರ್ಚಾದ ಜಿತಿನ್ ರಾಮ್ ಮಾಂಝಿ ದಲಿತ ಸಮುದಾಯದವರು. ಬಿಹಾರದ ಗಯಾ ಕ್ಷೇತ್ರದಿಂದ ಈ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
2014ರಲ್ಲಿ ತಾವು ಜೆಡಿಯುನಲ್ಲಿದ್ದಾಗ 8 ತಿಂಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಹಿಂದೂಸ್ತಾನಿ ಹವಾಮಿ ಮೋರ್ಚಾ ಪಕ್ಷ ಸ್ಥಾಪಿಸುವುದಕ್ಕೂ ಮುನ್ನ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಪಕ್ಷದಲ್ಲಿದ್ದರು.
ಇದಲ್ಲದೆ 37 ವರ್ಷದ ಮಹಾರಾಷ್ಟ್ರದ ರಕ್ಷಾ ಖಡ್ಸಾ, 41 ವರ್ಷದ ಬಿಹಾರದ ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಹಾಗೂ ಉತ್ತರ ಪ್ರದೇಶದ 45 ವರ್ಷದ ಆರ್‌ಎಲ್‌ಡಿಯ ಜಿತಿನ್ ಪ್ರಸಾದ್ ಇತರ ಕಿರಿಯ ವಯಸ್ಸಿನ ಮಂತ್ರಿಗಳಾಗಿದ್ದಾರೆ.
